ಉಜಿರೆ: ಎಸ್.ಡಿ.ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಓರಿಯೆಂಟೇಷನ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯನ್ನು ಮಾಡಿದ ಧರ್ಮಸ್ಥಳ ಸ್ಟಉದ್ಯೋಗ ತರಬೇತಿ ಸಂಸ್ಥೆ( ರುಡ್ ಸೆಟ್) ಯ ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್ ಮಾತನಾಡುತ್ತ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಯಶಸ್ಸಿಗೆ ಸಹಾಯ ಮಾಡುವುದಲ್ಲದೆ, ಭವಿಷ್ಯದ ವೃತ್ತಿ ಜೀವನದ ಸವಾಲುಗಳಿಗೆ ಅವರನ್ನು ಸಿದ್ದಪಡಿಸುವ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಇಂದಿನ ಕ್ರಿಯಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಯ ನಿರ್ಣಾಯಕ ಪ್ರಾಮುಖ್ಯತೆಯನ್ನು ಹೇಳಿದರು. ಪೋಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿ ವರ್ತಿಸಬೇಕು ಎಂದು ಒತ್ತಿ ಹೇಳಿದರು.
ಪ್ರಾಂಶುಪಾಲ ಸಂತೋಷ್ ಎಸ್. ಡಿ. ಎಮ್. ಪಾಲಿಟೆಕ್ನಿಕ್ ಕಾಲೇಜು ಮತ್ತು ಡಿಪ್ಲೋಮಾ ಕೋರ್ಸ್ ಗಳ ಕುರಿತು ಮಾಹಿತಿ ಹಾಗೂ ಕಾಲೇಜಿನ ನಿಯಮಗಳು ಮತ್ತು ನಿಬಂಧನೆಗಳನ್ನು ವಿವರಿಸಿದರು.
ವೇದಿಕೆಯಲ್ಲಿ ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ ಜೈನ್ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ಶಂಕರ್ ಭಟ್ ಎಚ್.ಆರ್. ಸ್ವಾಗತಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಉಪನ್ಯಾಸಕ ಶಿವಪ್ರಸಾದ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಉಪನ್ಯಾಸಕ ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿಖಿತ್ ಡಿ. ಆರ್. ವಂದಿಸಿದರು.