ಬೆಳ್ತಂಗಡಿ: ಕಳೆಂಜ ಗ್ರಾಮದ 309ಸರ್ವೆ ನಂಬರ್ ನಲ್ಲಿ ಮರು ಜಂಟಿ ಸರ್ವೆ ಕಾರ್ಯವನ್ನು ನಡೆಸಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ವಿಂಗಡಿಸಿ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಮಂಗಳೂರಿನಲ್ಲಿ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಅವರು ಕಳೆಂಜ ಗ್ರಾಮದಲ್ಲಿರುವ 309ಸರ್ವೆ ನಂಬರ್ ನ ಸಮಸ್ಯೆ ಬಗ್ಗೆ ಸಚಿವರಿಗೆ ಹೆಚ್ಚಿನ ಮಾಹಿತಿ ನೀಡಿ ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು.
ಸಮಸ್ಯೆ ಆಲಿಸಿದ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಕೂಡಲೇ 309ಸರ್ವೆ ನಂಬರ್ ಮರು ಸರ್ವೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸ್ಥಳೀಯ ಸಂತ್ರಸ್ತರಾದ ಜೋಮೆಟ್ ಮ್ಯಾಥ್ ಮಾಣಿಗೇರಿ, ಅಜೇಶ್, ದಿಲೀಪ್, ಕೃಷ್ಣಪ್ಪ ಇದ್ದರು. ಕಳೆದ ಹಲವು ದಶಕಗಳಿಂದ ಇಲ್ಲಿನ ನಿವಾಸಿಗಳು ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ವಿವಾದಿತ ಜಾಗದಲ್ಲಿ ಮನೆ ನಿರ್ಮಿಸುವ ವಿಚಾರವಾಗಿ ಶಾಸಕ ಹರೀಶ್ ಪೂಂಜ ಹಾಗೂ ಅರಣ್ಯ ಇಲಾಖೆಯ ನಡುವಿನ ಜಟಾಪಟಿಯ ಬಳಿಕ ವಿವಾದ ವಿಧಾನ ಸಭೆಯಲ್ಲಿಯೂ ಚರ್ಚೆಯಾಗಿತ್ತು.