ಪರೀಕ ಸೌಖ್ಯವನದಲ್ಲಿ ನವಚೇತನ ಆರೋಗ್ಯ ಶಿಬಿರ ಉದ್ಘಾಟನೆ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ಪರೀಕ ಮತ್ತು ಉಡುಪಿ ಜಿಲ್ಲಾ ಪೋಲಿಸ್ ಇವರ ಸಹಭಾಗಿತ್ವದಲ್ಲಿ ನವಚೇತನ ಆರೋಗ್ಯ ಶಿಬಿರವನ್ನು ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕ ಹರಿರಾಮ್ ಶಂಕರ್ ಐ.ಪಿ.ಎಸ್. ಅವರು ಜು.1ರಂದು ಉದ್ಘಾಟಿಸಿದರು.

ಉಡುಪಿ ಜಿಲ್ಲೆಯ ಪೋಲಿಸ್ ಸಿಬ್ಬಂದಿಗಳಲ್ಲಿ ಸುಮಾರು 90 ಮಂದಿಯನ್ನು ತಪಾಸಣೆ ಮಾಡಿ ಆಯ್ದು ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮಾನ್ಯ ಎಸ್.ಪಿ. ಅವರ ಮುತುವರ್ಜಿಯಲ್ಲಿ ವ್ಯವಸ್ಥೆ ಮಾಡಲಾಯಿತು. ಉಡುಪಿ ಜಿಲ್ಲೆಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ ಹೆಸರುವಾಸಿಯಾದ ಸೌಖ್ಯವನ ಸಂಸ್ಥೆಯಲ್ಲಿ ಈ ಒಂದು ಆರೋಗ್ಯ ಶಿಬಿರವನ್ನು ಏರ್ಪಡಿಸಲು ಅವಕಾಶ ಸಿಕ್ಕಿದ್ದು ಪೋಲಿಸ್ ಇಲಾಖೆಗೆ ತುಂಬಾ ಅನುಕೂಲಕರವಾಗಿ ಮೂಡಿಬಂದಿದ್ದು ಇದರ ಸಂಪೂರ್ಣ ಉಪಯೋಗವನ್ನು ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಸಿಬ್ಬಂದಿಗಳು ಪಡಕೊಳ್ಳಬೇಕಾಗಿ ತಿಳಿಸಿದರು.

ಸುಮಾರು ಒಂದು ತಿಂಗಳ ಕಾಲ ಮುನ್ನಡೆಯಲಿರುವ ಶಿಬಿರದಲ್ಲಿ ಯೋಗದೊಂದಿಗೆ ದೈನಂದಿನ ಆಹಾರ ಪದ್ದತಿ, ನಡಿಗೆ, ಧ್ಯಾನ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸೌಖ್ಯವನದ ತಜ್ಞ ವೈದ್ಯರು ಶಿಬಿರದಲ್ಲಿ ನಡೆಸಿಕೊಡಲಿರುವರು. ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಆರೋಗ್ಯದ ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿರುವ ಆದರ್ಶ ಆಸ್ಪತ್ರೆ ಉಡುಪಿಯ ಹೃದಯ ರೋಗ ತಜ್ಞ ಡಾ॥ ಶ್ರೀಕಾಂತ್ ಕೆ. ಅವರು ಆಧುನಿಕ ಆಹಾರ ಪದ್ದತಿ ಮತ್ತು ವ್ಯತಿರಿಕ್ತವಾದ ಜೀವನ ಶೈಲಿಯಲ್ಲಿ ಮನುಷ್ಯನ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿವರವಾಗಿ ತಿಳಿಸಿ, ಯಾವ ರೀತಿ ಜೀವನ ಮೌಲ್ಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮಾಹಿತಿಯನ್ನು ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಳಾಡಿತ್ತಾಯ ಅವರು ಮಾತನಾಡಿ ಡಿ. ವೀರೇಂದ್ರ ಹೆಗ್ಗಡೆ ಈ ಒಂದು ಶಿಬಿರ ನಡೆಸುವರಿಗೆ ಆದೇಶವನ್ನು ನೀಡಿದ್ದು ಅತ್ಯಂತ ಯಶಸ್ವಿಯಾಗಿ ಜರಗಲಿ ಎಂಬ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ್ ಪೂಜಾರಿ ಆರೋಗ್ಯವೆಂಬುದು ದೈಹಿಕ ಮಾತ್ರವಲ್ಲದೇ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದೇ ಯೋಗದ ಮಹತ್ವ ಎಂಬುದನ್ನು ಮನವರಿಕೆ ಮಾಡಿದರು. ಡಾ. ಶ್ರೀಕಾಂತ್ ಕೆ. ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಶಿಹಾಮ್ ಸಂತೋಷ್ ಶೆಟ್ಟಿ ಬುಡೋಕಾನ್ ಕರಾಟೆ ಇದರ ನಿರ್ದೇಶಕ, ಉಮೇಶ್ ಮಟ್ಟು ಫಿಟ್‌ನೆಸ್ ಟ್ರೈನರ್ ಯುವಸಬಲೀಕರಣ ಇಲಾಖೆ ಕರ್ನಾಟಕ ಸರಕಾರ, ಮಂಜಿತ್ ಶೆಟ್ಟಿ ಕೊರಿಯೋಗ್ರಾಫ‌ರ್ ಅವರು ಉಪಸ್ಥಿತರಿದ್ದರು. ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಅತಿಥಿಗಳನ್ನು ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪೋಲಿಸ್ ಕ್ಷೇಮಾಭಿವೃದ್ಧಿ ಅಧಿಕಾರಿ ರೋಹಿತ್ ನಾಯಕ್ ಅವರು ಧನ್ಯವಾದವನ್ನಿತ್ತರು.

LEAVE A REPLY

Please enter your comment!
Please enter your name here