ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶದಂತೆ ಜೂ. 11 ಮತ್ತು12ರಂದು ತಾಲೂಕಿನ 42 ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಮಳೆಗಾಲದ ಅವಧಿಯಲ್ಲಿ ಉಂಟಾಗಬಹುದಾದ ಗುಡ್ಡ ಜರಿತ ಉಂಟಾಗಬಹುದಾದ ಸ್ಥಳದಲ್ಲಿ ಅಥವಾ ಹೊಳೆ/ತೊರೆ ಬದಿಯಲ್ಲಿರುವ 432 ಮನೆಗಳವರಿಗೆ ಮನೆಗಳವರಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005ರಂತೆ ನೋಟಿಸ್ ನ್ನು ಖುದ್ದಾಗಿ ಜಾರಿಗೊಳಿಸಿದರು.
ಅಧಿಕ ಮಳೆಯಾದ ಸಂದರ್ಭದಲ್ಲಿ ತೆರೆಯಲಾಗುವ ಕಾಳಜಿ ಕೇಂದ್ರಗಳಿಗೆ ಅಥವಾ ಸಂಬಂಧಿಕರ ಮನೆಗಳಿಗೆ ತೆರಳುವಂತೆ ನೋಟಿಸಿನಲ್ಲಿ ಸೂಚಿಸಲಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 6 ಮನೆಗಳಿಗೆ ನೋಟೀಸು ನೀಡಲಾಗಿದ್ದು ತಾಲೂಕಿನಲ್ಲಿ ಒಟ್ಟು 438 ಮನೆಗಳಿಗೆ ನೋಟಿಸ್ ನೀಡಲಾಗಿದೆ.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕ ಮಾಡಲಾಗಿದ್ದು, ಮಳೆಗಾಲದ ಅವಧಿಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ಗಾಳಿಯಿಂದ ಉಂಟಾಗಬಹುದಾದ ವಿಪತ್ತುಗಳ ಬಗ್ಗೆ ತೀವ್ರ ನಿಗಾ ವಹಿಸಿ ಆಕಸ್ಮಿಕ ಅವಗಢಗಳು ಉಂಟಾದಾಗ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆಯೊಂದಿಗೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.