
ಉಜಿರೆ: ಉಜಿರೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಜನಾರ್ಧನ ದೇವಸ್ಥಾನಕ್ಕೆ ಹೋಗುವ ದ್ವಾರದ ಮುಂಭಾಗದಲ್ಲಿರುವ ಮೂರು ಅಂಗಡಿಗೆ ಕಳ್ಳರು ನುಗ್ಗಿ ನಗದು ದೋಚಿ ಪರಾರಿಯಾಗಿರುವ ಘಟನೆ ಜೂ.7ರಂದು ಮಧ್ಯರಾತ್ರಿ ನಡೆದಿದೆ.
ಅಂಗಡಿ ಮಾಲೀಕರು ಎಂದಿನಂತೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಪೂರ್ವ ಸಂಚಿನಂತೆ ಅಂದು ಮಧ್ಯರಾತ್ರಿ ಬಂದ ಕಳ್ಳ ಅಂಗಡಿ ಹಿಂಬದಿಯಿಂದ ಕಾಂಪೌಂಡು ಹಾರಿ ಬಂದಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೂರು ಅಂಗಡಿಯ ಶಟರ್ ಗೆ ಹಾಕಿದ್ದ ಬೀಗಕ್ಕೆ ಸುತ್ತಿಗೆಯಿಂದ ಮುರಿದು ಒಳನುಗ್ಗಿ ಒಟ್ಟು 38 ಸಾವಿರ ರೂಪಾಯಿ ಹಣ ಕಳ್ಳತನ ಮಾಡಲಾಗಿದೆ. ಬಾಲಾಜಿ ಎಂಟರ್ ಪ್ರೈಸ್ ನಿಂದ 30 ಸಾವಿರ ನಗದು, ಮಧುರ ಎಂಟರ್ ಪ್ರೈಸ್ ನಿಂದ 6 ಸಾವಿರ ರೂಪಾಯಿ, ಗಣೇಶ್ ಇಲೆಕ್ಟಿಕಲ್ ನಿಂದ 2 ಸಾವಿರ ರೂಪಾಯಿ ಕಳ್ಳತನ ಮಾಡಲಾಗಿದೆ ಎಂದು ಬಾಲಾಜಿ ಅಂಗಡಿ ಮಾಲೀಕ ಹರೀಶ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ಜೂ.8 ರಂದು ದೂರು ನೀಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ ಪೆಕ್ಟರ್ ಸುಬ್ಬಪುರ್ ಮಠ ಮತ್ತು ಸಿಬ್ಬಂದಿ ಹಾಗೂ ಮಂಗಳೂರಿನಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.