ಬೆಳ್ತಂಗಡಿ: ಮಾಸ್ಕೋ ಆಪರೇಷನ್ ಸಿಂಧೂರ್(Operation Sindoor) ಬಗ್ಗೆ ಜಗತ್ತಿಗೆ ಮಾಹಿತಿ ನೀಡಲು ಹಾಗೂ ಪಾಕ್ ಬಣ್ಣ ಬಯಲು ಮಾಡಲು ಸಂಸದರ ನಿಯೋಗ ಹೊರಟಿದ್ದು, ಅದರಲ್ಲಿ ಸಂಸದೆ ಕನ್ನಿಮೋಳಿ ನೇತೃತ್ವದ ದ.ಕ. ಸಂಸದ ಕ್ಯಾ|ಬ್ರಿಜೇಶ್ ಚೌಟ ಅವರಿದ್ದ ನಿಯೋಗವೊಂದು ರಷ್ಯಾಗೆ ತೆರಳಿತ್ತು. ಆದರೆ ರಷ್ಯಾದ ಏರ್ಪೋರ್ಟ್ ನಲ್ಲಿ ಈ ನಿಯೋಗ ಇಳಿಯುವಾಗ ಅವರ ಮೇಲೆ ಡ್ರೋನ್ ದಾಳಿ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕ್ಯಾ|ಬ್ರಿಜೇಶ್ ಚೌಟವರಿದ್ದ ಭಾರತೀಯ ಸಂಸದರ ನಿಯೋಗವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಈ ವಿಮಾನದಲ್ಲಿ ಡಿಎಂಕೆ ಸಂಸದೆ ಕನ್ನಿಮೋಳಿ ಇದ್ದರು. ಡ್ರೋನ್ ದಾಳಿಯಿಂದಾಗಿ ಅವರಿದ್ದ ವಿಮಾನವು ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಹಲವಾರು ಗಂಟೆಗಳ ಕಾಲ ಸುತ್ತುತ್ತಲೇ ಇತ್ತು.
ಹಲವಾರು ಗಂಟೆಗಳ ಕಾಲ ಭದ್ರತಾ ಪರಿಸ್ಥಿತಿಗಳ ಮೌಲ್ಯಮಾಪನದ ನಂತರ, ವಿಮಾನವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಆಪರೇಷನ್ ಸಿಂಧೂರ್ ಬಗ್ಗೆ ಭಾರತದ ನಿಲುವನ್ನು ತಿಳಿಸಲು ಭಾರತದಿಂದ ಆರು ನಿಯೋಗಗಳು ಹೊರಟಿದ್ದು, ಭಾರತದಿಂದ ರಷ್ಯಾಕ್ಕೆ ತೆರಳಿರುವ ನಿಯೋಗದಲ್ಲಿ ಡಿಎಂಕೆ ಸಂಸದೆ ಕನ್ನಿಮೋಳಿ, ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಆರ್ಜೆಡಿ ಸಂಸದ ಪ್ರೇಮಚಂದ್ ಗುಪ್ತಾ, ಕ್ಯಾಪ್ಟನ್ ಬ್ರಿಜೇಶ್, ಅಶೋಕ್ ಕುಮಾರ್ ಮಿತ್ತಲ್ ಮತ್ತು ರಾಯಭಾರಿ ಮಂಜೀವ್ ಸಿಂಗ್ ಪುರಿ ಇದ್ದರು. ಈ ನಿಯೋಗ ಮೇ 22 ರಂದು ರಷ್ಯಾಕ್ಕೆ ತೆರಳಿದ್ದು, ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ನಂತರ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಮಾಸ್ಕೋ ವಿಮಾನ ನಿಲ್ದಾಣವು ಇಳಿಯಲು ಕಾಯುತ್ತಿದ್ದ ವಿಮಾನಗಳನ್ನು ತಾತ್ಕಾಲಿಕವಾಗಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ನೀಡದೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಹಲವಾರು ಗಂಟೆಗಳ ಕಾಲ ಸ್ಥಗಿತಗೊಳಿಸಿತು. ಇದರಿಂದಾಗಿ ಕ್ಯಾ ಚೌಟ ಪ್ರಯಾಣಿಸುತ್ತಿದ್ದ ವಿಮಾನ ಇಳಿಯಲು ಸಾಧ್ಯವಾಗದೆ ಗಾಳಿಯಲ್ಲಿ ಸುತ್ತುತ್ತಲೇ ಇತ್ತು. ಬಹಳ ಸಮಯದ ನಂತರ ವಿಮಾನವು ಸುರಕ್ಷಿತವಾಗಿ ಇಳಿದಿದ್ದು, ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಸರ್ವಪಕ್ಷ ಸಂಸದರ ನಿಯೋಗವನ್ನು ಸ್ವಾಗತಿಸಿ ಸುರಕ್ಷಿತವಾಗಿ ಅವರ ಹೋಟೆಲ್ಗೆ ಕರೆದೊಯ್ದರು.