ಬೆಳ್ತಂಗಡಿ:ದಿಡುಪೆ-ಪೈಚಾರು ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆಯ ಒಂಜರೆಬೈಲು ಎಂಬಲ್ಲಿ ಧರ್ಮಸ್ಥಳ ಕಡೆ ಪ್ರಯಾಣಿಸುತ್ತಿದ್ದ ಕಾರೊಂದು ರಸ್ತೆ ಬದಿಯ ತೋಟದ ಬೇಲಿಗೆ ಡಿಕ್ಕಿ ಹೊಡೆದ ಘಟನೆ ಮೇ.19ರಂದು ಮುಂಜಾನೆ ನಡೆದಿದೆ.
ಬೆಂಗಳೂರು ಮೂಲದ ಈ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದು ಅವರು ಅಲ್ಪಸ್ವಲ್ಪ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿದ್ರೆಯ ಮಂಪರು ಘಟನೆಗೆ ಕಾರಣ ಎನ್ನಲಾಗಿದೆ. ಕಾರು ಬೇಲಿಯನ್ನು ದಾಟಿ ಮುಂದುವರಿಯತ್ತಿದ್ದರೆ ಆಳವಾದ ಕಣಿವೆಗೆ ಬೀಳುವ ಸಾಧ್ಯತೆ ಇತ್ತು. ಹಾಗೂ ಸಮೀಪದಲ್ಲಿ ವಿದ್ಯುತ್ ಕಂಬವು ಇದೆ. ಕಾರು ಬೇಲಿಗೆ ಸಿಲುಕಿಕೊಂಡ ಕಾರಣ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ರಸ್ತೆಯು ಅನೇಕ ಶಿಥಿಲ ಕಿರು ಸೇತುವೆ, ಕಡಿದಾದ ತಿರವುಗಳನ್ನು ಹೊಂದಿದ್ದು, ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ.