ಬಂದಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಆರತಕ್ಷತೆ ಊಟದ ಬಳಿಕ ಅಸ್ವಸ್ಥರಾದ ಪ್ರಕರಣ: ಡಿಹೆಚ್ಒ, ಟಿಹೆಚ್ಒ ಮತ್ತಿತರ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ, ಮಾಹಿತಿ ಸಂಗ್ರಹ

0

ಬೆಳ್ತಂಗಡಿ: ತಾಲೂಕಿನ ಬಂದಾರು ಗ್ರಾಮದಲ್ಲಿ ಮೇ. 12ರಂದು ನಡೆದ ಅರತಕ್ಷತೆ ಊಟದ ಬಳಿಕ ಹಲವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಹಲವರು ಆಸ್ಪತ್ರೆಗೆ ದಾಖಲಾಗಿದ್ದರು. ಮೇ.17ರಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್ ತಿಮ್ಮಯ್ಯ , ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಾತ್ ಮತ್ತಿತರ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಬಗ್ಗೆ ನಿಗಾ ಇಡುವುದರ ಜೊತೆಗೆ ಸಾಂಕ್ರಾಮಿಕ ಸೋಂಕನ್ನು ನಿಯಂತ್ರಿಸಬೇಕು ಎಂದು ವೈದ್ಯರಿಗೆ ಸೂಚನೆ ನೀಡಿದರು.

ಗ್ರಾಮದ ಕೊಪ್ಪದಡ್ಕ ಸಮೀಪದ ಪಿಲತ್ತಿಮಾರು ನಿವಾಸಿ ಗಂಗಯ್ಯ ಗೌಡ ಎಂಬವರ ಪುತ್ರಿಯ ಮದುವೆಯ ಮರುದಿನ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಂಸಾಹಾರದ ಭೋಜನ ಸೇವಿಸಿದ ಬೆನ್ನಲ್ಲೇ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ಐವತ್ತಕ್ಕೂ ಅಧಿಕ ಮಂದಿ ವಾಂತಿ ಭೇದಿ ಮತ್ತಿತರ ರೀತಿಯಲ್ಲಿ ಅಸ್ವಸ್ಥರಾಗಿ ಮಂಗಳೂರು ವೆನ್ಲಾಕ್ ಸೇರಿದಂತೆ ಉಜಿರೆ, ಉಪ್ಪಿನಂಗಡಿಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

ಕೆಲವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಇನ್ನೊಂದೆಡೆ ಅಸ್ವಸ್ಥರ ಸಂಖ್ಯೆ ಏರುತ್ತಲೇ ಇದ್ದು ಆರಕ್ಷತೆ ಮನೆಯಲ್ಲಿ ಊಟ ಸೇವಿಸಿದವರ ಆತಂಕಕ್ಕೆ ಕಾರಣವಾಗಿದೆ.

ಆರತಕ್ಷತೆ ಮನೆಯ ಭೋಜನ ಸೇವಿಸಿದ ಮದುಮಗ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಈ ಪೈಕಿ ವೆನ್ಲಾಕ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಸ್ಥಳೀಯ ಕಮಲಾ ಎಂಬವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ಸುಮಾರು 10ಕ್ಕೂ ಹೆಚ್ಚು ಮಂದಿ ಗಂಭೀರ ಸ್ಥಿತಿಯಲ್ಲಿದ್ದು ಐಸಿಯೂ ಚಿಕಿತ್ಸೆ ಪಡೆಯುತ್ತಿದ್ದು ಈ ಸಮಸ್ಯೆಯು ಸಾಂಕ್ರಾಮಿಕವಾಗಿ ಪರಿಣಮಿಸಿ ಹ‌‌‌ರಡಿಕೊಳ್ಳುತ್ತಿದೆಯೇ ಎಂಬ ಆತಂಕ ಮೂಡಲು ಕಾರಣವಾಗಿದೆ. ಡಿಹೆಚ್ ಒ , ಟಿಹೆಚ್ ಒ ತಂಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮೇ.17ರಂದು ಬಂದಾರು ಗ್ರಾಮಕ್ಕೆ ಭೇಟಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್ ತಿಮ್ಮಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಾತ್ ಮುಂತಾದವರ ತಂಡ ಮಾಹಿತಿ ಸಂಗ್ರಹಿಸಿದೆ.

ಗ್ರಾ.ಪಂ. ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸಿದ ಡಾ.ಹೆಚ್. ಆರ್. ತಿಮ್ಮಯ್ಯ ಅವರು ಮಾತನಾಡಿ ಮಚ್ಚಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಕಣಿಯೂರು ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ತಂಡಗಳು ಬಂದಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಘಟನೆಯಲ್ಲಿ ಅಸ್ವಸ್ಥಗೊಂಡವರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ ವಿವರ ಸಂಗ್ರಹಿಸುವಂತೆ ಸೂಚಿಸಿದ್ದಾರೆ.

ಮೇಲ್ನೋಟಕ್ಕೆ ಕಾಣುವಂತೆ ಅಸ್ವಸ್ಥರಾಗಲು ಫುಡ್ ಪಾಯ್ಸನ್ ಕಾರಣವೆಂದು ಈಗಲೇ ಹೇಳಲು ಕಷ್ಟ. ಫುಡ್ ಪಾಯ್ಸನ್ ಆಗಿದ್ರೆ ಒಂದೇ ದಿನದಲ್ಲಿ ಎಲ್ಲರಲ್ಲೂ ಹರಡುತ್ತದೆ. ಇದೊಂದು ಸಾಂಕ್ರಾಮಿಕ ಸೋಂಕು ಆಗಿರುವ ಸಾಧ್ಯತೆ ಇದೆ. ವೆನ್ಲಾಕ್, ಉಜಿರೆ, ಉಪ್ಪಿನಂಗಡಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಾದವರ ವಾಂತಿ, ಭೇದಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದ ಬಳಿಕ ಪರಿಪೂರ್ಣ ವರದಿಯ ಆಧಾರದಲ್ಲಿ ಸಾಮೂಹಿಕ ಅಸ್ವಸ್ಥತೆಗೆ ನಿಖರ ಕಾರಣವನ್ನು ತಿಳಿಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭ ದ.ಕ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್, ಕಣಿಯೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುನೀಲ್ ಕುಮಾರ್ ಕೆ, ತಾಲೂಕು ಆರೋಗ್ಯ ಕೇಂದ್ರದ ಹಿ.ಆ.ನಿ. ಸೋಮನಾಥ್, ಗ್ರಾ.ಪಂ. ಅಧ್ಯಕ್ಷ ದಿನೇಶ್ ಕಂಡಿಗ , ಪಂ. ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಪೂಜಾರಿ, ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here