ಬೆಳ್ತಂಗಡಿ: ಕ್ರೈಸ್ತರ ವಿಶ್ವಗುರು ಪೋಪ್ ಆಗಿ ರಾಬರ್ಟ್ ಪ್ರಿವೋಸ್ಟ್ ಆಯ್ಕೆಯಾಗಿದ್ದು, ಪೋಪ್ ಲಿಯೋ XIV ಹೆಸರಿನಿಂದ ಅವರು ಇನ್ನು ಮುಂದೆ ಪೋಪ್ ಆಗಿ ಗುರುತಿಸಿಕೊಳ್ಳಲಿದ್ದಾರೆ. ರೋಮ್ ಧರ್ಮಕ್ಷೇತ್ರದ 267ನೇ ಧರ್ಮಾಧ್ಯಕ್ಷರ ಆಯ್ಕೆಯ ವಿಚಾರವನ್ನು ಮೇ. 8ರಂದು ರಾತ್ರಿ ಕಾರ್ಡಿನಲ್ ಪ್ರೋಟೋ-ಡೀಕನ್ ಡೊಮಿನೀಕ್ ಮಾಂಬೆರ್ತಿ ಅವರು ಜನತೆಗೆ ಈ ಸುದ್ದಿಯನ್ನು ಘೋಷಿಸಿದರು.
ಕ್ಯಾಥೋಲಿಕ್ ಚರ್ಚ್ ನ ಇತಿಹಾಸದಲ್ಲಿ ಮೊದಲ ಅಮೆರಿಕನ್ ಪೋಪ್ ಆಗಿ ರಾಬರ್ಟ್ ಪ್ರಿವೋಸ್ಟ್ ಆಯ್ಕೆಯಾಗಿದ್ದಾರೆ. ಹೊಸದಾಗಿ ಚುನಾಯಿತರಾದ ಪೋಪ್ ಲಿಯೋ XIV ಗುರುವಾರ ವ್ಯಾಟಿಕನ್‌ನ ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಸಾಂಪ್ರದಾಯಿಕ ಧಿರಿಸಿನಲ್ಲಿ ಕಾಣಿಸಿಕೊಂಡು ಜನತೆಗೆ ಕೈಬೀಸಿದರು. ಈ ವೇಳೆ ‘ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಪರಸ್ಪರ ಕೈಜೋಡಿಸಬೇಕು’ ಎಂದು ಕರೆ ನೀಡಿದರು. ಮಾತುಕತೆಗಳ ಮೂಲಕ ಸೇತುವೆ ನಿರ್ಮಿಸಿ ಎಲ್ಲರೂ ಪರಸ್ಪರ ಹತ್ತಿರವಾಗಬೇಕು. ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಲಿ ಎಂದು ಹೇಳಿದರು.