ಮೈರೋಳ್ತಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈರೋಳ್ತಾಡ್ಕ ಒಕ್ಕೂಟ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮೈರೋಳ್ತಾಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೇ. 5ರಂದು ಮೈರೋಳ್ತಡ್ಕ ವಠಾರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.

ಪೂಜಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾ ಸಮಿತಿಯ ಅಧ್ಯಕ್ಷ ಚಂದಪ್ಪ ಗೌಡ ನಡುಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗುರುವಾಯನಕೆರೆ ತಾಲ್ಲೂಕು ಯೋಜನಾಧಿಕಾರಿ ಅಶೋಕ್ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಮಾರು 46 ಕಾರ್ಯಕ್ರಮಗಳನ್ನು ಜನರಿಗಾಗಿ ರೂಪಿಸಿದೆ. ಅದರಲ್ಲಿ ಧಾರ್ಮಿಕ ಕಾರ್ಯಕ್ರಮವು ಒಂದು. ಜನರ ಸಂಘಟನೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಪೂಜ್ಯರು ಈ ಕಾರ್ಯಕ್ರಮವನ್ನು ರೂಪಿಸಿದರು. ಗ್ರಾಮಭಿವೃದ್ಧಿ ಯೋಜನೆ ಮೂಲಕ ಜನರಲ್ಲಿ ಉಳಿತಾಯದ ಮನೋಭಾವನೆಯನ್ನು ಮೂಡಿಸಿ ಉಳಿತಾಯದ ಕನಸನ್ನ ಕೊಟ್ಟಂತಹ ಯೋಜನೆ ಜನರ ಬದುಕಿಗೆ ಆಸರೆಯಾಗಿದೆ. ಯೋಜನೆಯು ಜನರಲ್ಲಿ ಆರ್ಥಿಕ ಜಾಗೃತಿ, ಆರ್ಥಿಕ ಸಾಕ್ಷರತೆಯನ್ನು ಮೂಡಿಸಿದೆ ಎಂದರು. ನಮ್ಮ ಧಾರ್ಮಿಕ ಕಾರ್ಯಕ್ರಮಗಳು, ನಮ್ಮ ಪರಂಪರೆಗಳು, ನಮ್ಮ ಗುರುಹಿರಿಯರ ಸಂಬಂಧ, ಆಶೀರ್ವಾದಗಳು ಉಳಿಯಬೇಕಾದರೆ ಸತ್ಯನಾರಾಯಣ ಪೂಜೆ ಯಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಒಟ್ಟಾಗಿ ಭಾಗಿಗಳಾಗಿ ಮುಂದುವರಿಸಿದರೆ ಮುಂದಿನ ಪೀಳಿಗೆಗೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು. ಸತ್ಕಾರ್ಯಕ್ಕೆ ಸತ್ಪಲ ಖಚಿತ ಎಂಬ ಮಾತಿನಂತೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ದೇವರ ಪೂರ್ಣ ಆನುಗ್ರಹವಿರಲಿ ಎಂದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ, ಒಕ್ಕೂಟದ ಅಧ್ಯಕ್ಷ ಸುಂದರ ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ, ಕಣಿಯೂರು ವಲಯ ಮೇಲ್ವಿಚಾರಕಿ ಶಿಲ್ಪಾ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಚಂದ್ರಕಲಾ ಸ್ವಾಗತಿಸಿದರು. ಡಾಕಯ್ಯ ಗೌಡ ಖಂಡಿಗ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ಹರಿಣಾಕ್ಷಿ ಧನ್ಯವಾದವಿತ್ತರು.