
ಬೆಳಾಲು: ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಏನೋ ಗೋಲ್ ಮಾಲ್ ಆಗಿದೆ. ಕೋಟಿಯಂತೆ, ಲಕ್ಷವಂತೆ, ನಿಮಗೆ ಗೊತ್ತಾಗಿಲ್ಲವಾ ಅಂತ ಜನ ನಿರಂತರವಾಗಿ ಸುದ್ದಿಗೆ ಕರೆ ಮಾಡಿ ವಿಚಾರಿಸಿದಾಗ ಬೆಳಾಲು ಸೊಸೈಟಿಯಲ್ಲಿ ಆಗಿರುವ ಅವ್ಯವಹಾರ ಬಯಲಾಗಿದೆ. ರಬ್ಬರ್ ಖರೀದಿ ಮತ್ತು ಮಾರಾಟದ ವ್ಯವಹಾರದಲ್ಲಿ 68ಲಕ್ಷಕ್ಕೂ ಅಧಿಕ ಹಣ ದುರುಪಯೋಗ ಆಗಿರುವುದು ಬೆಳಕಿಗೆ ಬಂದಿದೆ.
ಇಬ್ಬರು ಸಿಬ್ಬಂದಿಯಿಂದ ಅವ್ಯವಹಾರ ಬೆಳಾಲು ಸೊಸೈಟಿ ಬ್ಯಾಂಕಿನ ಸಿಬ್ಬಂದಿಗಳಾದ ಸದಾಶಿವ (ಸುಜಿತ್) ಮತ್ತು ಪ್ರಶಾಂತ್ ಎಂಬವರು ರಬ್ಬರ್ ಖರೀದಿ ಮತ್ತು ಮಾರಾಟದ ಹಣವನ್ನು ಗುಳುಂ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮಾ. 5ರಂದು ಸೊಸೈಟಿಯ ಅಧ್ಯಕ್ಷರು ಲೆಕ್ಕಾಚಾರ ಪರಿಶೀಲಿಸಿದಾಗ ಅವ್ಯವಹಾರ ಬಯಲಾಗಿದ್ದು, ಲೆಕ್ಕಾಚಾರ ಸರಿಹೊಂದದೇ ಇರುವುದರಿಂದ, ಅದನ್ನು ಮರು ಲೆಕ್ಕಚಾರ ಮಾಡಿದಾಗ ಸಿಬ್ಬಂದಿ ಮಾಡಿರುವ ಹಣದ ದುರುಪಯೋಗ ಬಯಲಾಗಿದೆ. ಕೂಡಲೇ ಸಹಕಾರ ಇಲಾಖೆಗೆ ಮಾಹಿತಿ. ಬೆಳಾಲು ಕೃಷಿ ಪತ್ತಿನ ಸಹಕಾರಿ ಸಂಘದವರು ಈ ಕುರಿತು ಸಹಕಾರಿ ಇಲಾಖೆಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದು, ಕೂಡಲೇ ಅವ್ಯವಹಾರ ಹೇಗೆ ನಡೆದಿದೆ ಅನ್ನುವುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಅಲ್ಲದೇ, ಮರು ಆಡಿಟಿಂಗ್ ಮಾಡುವ ಮೂಲಕ ಸೊಸೈಟಿಯ ದುರುಪಯೋಗ ಆದ ಹಣದ ಬಗ್ಗೆ ಸ್ಪಷ್ಟ ಚಿತ್ರಣ ನೀಡುವ ಸಾಧ್ಯತೆಯಿದೆ.
ದುರುಪಯೋಗ ಮಾಡಿರುವ ಸಿಬ್ಬಂದಿಯಿಂದ ಹಣ ವಸೂಲಾತಿ ಅಲ್ಲದೇ ಸಿಬ್ಬಂದಿ ಅಂದಾಜು 68ಲಕ್ಷಕ್ಕೂ ಅಧಿಕ ಹಣ ದುರುಪಯೋಗ ಮಾಡಿರುವುದನ್ನು ಈಗಾಗ್ಲೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸೊಸೈಟಿಗೆ ದೊಡ್ಡ ಹೊರೆಯಾಗುವ ಸೂಚನೆಯಿದ್ದು, ಇದನ್ನು ರಿಕವರಿ ಮಾಡುವ ನಿಟ್ಟಿನಲ್ಲಿ ಕಾರ್ಯಾರಂಭವಾಗಿದೆ. ಇದಕ್ಕಾಗಿ ಬೇರೆ ಬ್ಯಾಂಕ್ ನಲ್ಲಿ ಸಾಲ ತೆಗೆದು ಹಣ ಹೊಂದಿಸುತ್ತಿರುವುದು ತಿಳಿದುಬಂದಿದೆ. ಮತ್ತೋರ್ವ ಚಿನ್ನ, ಜಮೀನು, ಅಡವಿಟ್ಟಿರುವ ಮಾಹಿತಿಯೂ ಇದ್ದು, ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಸಾರ್ವಜನಿಕ ವಲಯದಲ್ಲಿ ಕೋಟಿಯ ಚರ್ಚೆ- ಸುದ್ದಿಗೆ ಕರೆ ಬೆಳಾಲು ಸೊಸೈಟಿಯ ಅವ್ಯವಹಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ 1 ಕೋಟಿಗೂ ಅಧಿಕ ಎನ್ನುವ ಚರ್ಚೆಯಿದ್ದು, ಈ ಬಗ್ಗೆ ಸುದ್ದಿ ಪ್ರತಿನಿಧಿಗಳಿಗೆ ಗ್ರಾಹಕರು, ಸ್ಥಳೀಯರು ಕರೆ ಮಾಡಿ ತಿಳಿಸುತ್ತಿದ್ದಾರೆ. ಆದರೆ ಈಗಾಗಲೇ ತಿಳಿದುಬಂದಿರುವ ಮಾಹಿತಿಯ ಪ್ರಕಾರ 68ಲಕ್ಷದಷ್ಟು ಹಣ ದುರುಪಯೋಗ ಆಗಿರುವುದಾಗಿ ಮಾಹಿತಿ ಸಿಕ್ಕಿದೆ.
ಆಡಳಿತ ಮಂಡಳಿಯಿಂದ ಶಿಸ್ತು ಕ್ರಮಕ್ಕಾಗಿ ಸಭೆ, ಚಿಂತನೆ ಬೆಳಾಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದ ಅವ್ಯವಹಾರದ ನಂತರ ಆಡಳಿತ ಮಂಡಳಿ ಏ. 22ರಂದು ತುರ್ತು ಸಭೆ ನಡೆಸಿದ್ದು, ಸಿಬ್ಬಂದಿಗಳ ವಿರುದ್ಧದ ಶಿಸ್ತು ಕ್ರಮಕ್ಕಾಗಿ ಚಿಂತನೆ ನಡೆದಿದೆ. ಇದರಲ್ಲಿ ಸೊಸೈಟಿಯ ಮ್ಯಾನೇಜರ್, ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ.
ಬಿಜೆಪಿ-ಕಾಂಗ್ರೆಸ್ ಸಮನ್ವಯದ ಸೊಸೈಟಿಯ ನಿರ್ದೇಶಕರುಗಳನ್ನು ಸುದ್ದಿ ಸಂಪರ್ಕಿಸಿದಾಗ ಮಾಹಿತಿ ನೀಡಲು ನಿರಾಕರಿಸಿದರು. ಬಿಜೆಪಿ ಬೆಂಬಲಿತ ಮತ್ತು ಕಾಂಗ್ರೆಸ್ ಬೆಂಬಲಿತರು ಕೂಡ ಈ ಬಗ್ಗೆ ಅಧ್ಯಕ್ಷರೇ ಮಾಹಿತಿಯನ್ನು ನೀಡುತ್ತಾರೆ ಎಂಬುವುದಾಗಿ ತಿಳಿಸಿದ್ದಾರೆ. ತನಿಖೆಯ ಹಂತ ಹಾಗೂ ರಿಕವರಿಯ ಹಂತದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಮಾಹಿತಿ ನೀಡುವುದಾಗಿ ಆಡಳಿತ ಮಂಡಳಿ ತಿಳಿಸಿದೆ.