
ಬೆಳ್ತಂಗಡಿ: ಪೋಪ್ ಫ್ರಾನ್ಸಿಸ್ ರ ನಿಧನಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯವು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪೋಪರ ನಿದನದಲ್ಲಿ 9 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಧರ್ಮಪ್ರಾಂತ್ಯಕ್ಕೆ ಸಂಬಂಧಪಟ್ಟ ಎಲ್ಲಾ ಹಬ್ಬ ಆಚರಣೆಗಳನ್ನು ಸರಳವಾಗಿ ನಡೆಸಲೆಂದು ಘೋಷಿಸಲಾಗಿದೆ. ಏ. 22ರಂದು ಮುಂಜಾನೆ ಬೆಳ್ತಂಗಡಿ, ಸಂತ ಲಾರೆನ್ಸರ ಕ್ಯಾಥಿಡ್ರಲ್ ದೇವಾಲಯದಲ್ಲಿ ಧರ್ಮಾಧ್ಯಕ್ಷ ಲಾರೆನ್ಸ್ ರವರು ವಿಶೇಷ ಪೂಜೆ ಸಲ್ಲಿಸಿ ಪೋಪರಿಗಾಗಿ ಪ್ರಾರ್ಥನೆ ಮಾಡಿದರು.

ಧರ್ಮಕ್ಷೇತ್ರದ ಬಿಷಪ್ ಹೌಸ್ ಮತ್ತು ಪಾಲನಾ ಕೇಂದ್ರದ ಎಲ್ಲ ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗು ವಿಶ್ವಾಸಿಗಳು ಹಾಜರಿದ್ದರು. ವಿಶೇಷ ಪೂಜೆಯ ಸಂದೇಶದ ಸಮಯದಲ್ಲಿ ಪರಮ ಪೂಜ್ಯರು ಪೋಪೆರನ್ನು ಭೇಟಿಮಾಡಿದ ಸವಿನೆನಪುಗಳನ್ನು ವಿಶ್ವಾಸಿಗಳೊಂದಿಗೆ ಹಂಚಿಕ್ಕೊಳ್ಳುತ್ತಾ, “ಪೋಪರಿಗೆ ಭಾರತದ ಕ್ರಿಶ್ಚಿಯನ್ನರ ಕುರಿತು ವಿಶೇಷ ಕಾಳಜಿ ಇತ್ತು, ಅದರಲ್ಲೂ ಬೆಳ್ತಂಗಡಿ ಧರ್ಮಕ್ಷೇತ್ರದ ಎಲ್ಲಾ ಚಟುವಟಿಕೆಗಳ ಕುರಿತು ಕೇಳಿ ತಿಳಿಯುತ್ತಿದ್ದರು” ಎಂದು ನುಡಿದರು.
ಪೋಪರ ನಿಧನದಲ್ಲಿ ದುಃಖಿತರಾಗಿರುವ ಲಾರೆನ್ಸರವರು ಹೀಗೆ ಪ್ರತಿಕ್ರಿಯಿಸಿದರು “ಜಗದ್ಗುರು ಪೋಪ್ ಫ್ರಾನ್ಸಿಸ್ ರವರ ನಿಧನದ ವಾರ್ತೆ ಕೇಳಿ ತೀವ್ರ ದುಃಖವಾಯಿತು. ಆದರೆ ಪೋಪ್ ಫ್ರಾನ್ಸಿಸ್ ರವರು ದೇವರ ಸನ್ನಿಧಾನ ಸೇರಿದ್ದಾರೆ ಎಂಬುದು ಮನಸ್ಸಿಗೆ ಸಾಂತ್ವಾನ ನೀಡುತ್ತಿದೆ. ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸರ್ವ ಧರ್ಮಗುರುಗಳ, ಕನ್ಯಾಸ್ತ್ರೀಯರ ಹಾಗೂ ಜನಸಾಮಾನ್ಯರ ಹೃತ್ಪೂರ್ವಕವಾದ ಸಂತಾಪವನ್ನು ಸೂಚಿಸುತ್ತೇನೆ. ಪೋಪ್ ಫ್ರಾನ್ಸಿಸ್ ರವರು ಅಸಾನಿಧ್ಯವು ಧರ್ಮಸಭೆಯಲ್ಲೂ ಇಡೀ ಜಗತ್ತಿನಲ್ಲೂ ತುಂಬಲಾಗದ ನಷ್ಟಭರಿಸಲಾಗಿದೆ. ಪೋಪ್ ಫ್ರಾನ್ಸಿಸ್ ರವರ ಶಾಂತಿಯ ಮತ್ತು ಕರುಣೆಯ ಸಂದೇಶವು ಜಗಕೆ ಸಮಾಧಾನವನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.