

ಉಜಿರೆ: ದೇಹಕ್ಕೆ ಮತ್ತು ಮನಸ್ಸಿಗೆ ಆರೋಗ್ಯ ಕೊಡುವ ಸಾಧನವೇ ಯೋಗ. ಮಾನಸಿಕ ಹಾಗೂ ದೈಹಿಕ ಸ್ವಸ್ಥತೆ ಶಿಕ್ಷಕರಿಗೆ ಮುಖ್ಯ. ಪಠ್ಯಕ್ರಮದ ಭಾಗವಾಗಿ ಯೋಗವನ್ನು ಕಲಿಯುವುದು ಮಾತ್ರವಲ್ಲದೇ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದು ಅತೀ ಮುಖ್ಯ ಎಂದು ಉಜಿರೆಯ ಪ್ರಕೃತಿ ಮತ್ತು ಯೋಗ ವಿಜ್ಞಾನ ವಿದ್ಯಾಲಯದ ಡೀನ್ ಡಾ. ಶಿವಪ್ರಸಾದ್ ಇವರು ಎಸ್.ಡಿ.ಎಮ್. ಬಿ.ಎಡ್ ಕಾಲೇಜಿನಲ್ಲಿ ನಡೆದ ಯೋಗ ಮತ್ತು ರಂಗ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು.
ಶಿಕ್ಷಕರಿಗೆ ನಾಟಕ ಮತ್ತು ರಂಗಭೂಮಿಯ ಪರಿಚಯದೊಂದಿಗೆ ಅದನ್ನು ಬಳಸುವ ಕೌಶಲವಿರುವ ವಾತಾವರಣ ಸಿಕ್ಕಿರುವುದು ನಿಮ್ಮ ಅದೃಷ್ಟ. ಹಾಗಾಗಿ ಅದನ್ನು ಪರಿಣಾಮಕಾರಿಯಾಗಿ ಸದುಪಯೋಗಪಡಿಸಿಕೊಳ್ಳಿ ಎಂದು ಎಸ್. ಡಿ. ಎಮ್. ಕಾಲೇಜಿನ ರಂಗ ತರಬೇತಿಯ ನಿರ್ದೇಶಕ ಯಶವಂತ ಬೆಳ್ತಂಗಡಿ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಎಸ್. ಡಿ. ಎಂ. ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಸ್ವಸ್ಥ ದೇಹ, ಸ್ವಸ್ಥ ಮನಸ್ಸನ್ನು ನೀಡುವುದು ಯೋಗ. ಉಜಿರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜನ್ನು ಯೋಗದ ವಿಶ್ವಗುರು ಎಂದು ಹೇಳಲಾಗುತ್ತಿದೆ ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಾಯಕಿ ವೀಕ್ಷಾ ದೀಪ, ಎಲ್ಲಾ ಉಪನ್ಯಾಸಕ ವರ್ಗದವರು, ಪ್ರಥಮ ಮತ್ತು ದ್ವಿತೀಯ ಬಿ.ಎಡ್. ನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಅಖಿಲಾ ಎಂ. ಪಿ. ಸ್ವಾಗತಿಸಿದರು. ಚೈತ್ಯನ್ಯ ಹಾಗೂ ಪ್ರತಿಮಾ ಅತಿಥಿಗಳನ್ನು ಪರಿಚಯಿಸಿದರು. ಅಕ್ಷಿತಾ ಎಂ. ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಪಾಟೀಲ್ ವಂದಿಸಿದರು.