

ಬೆಳ್ತಂಗಡಿ: ಯುವತಿಯೊಬ್ಬಳಿಗೆ ಮದುವೆ ಮಾಡುವ ಸಲುವಾಗಿ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹ ಮಾಡುತ್ತಿದ್ದ ಬೆಳ್ತಂಗಡಿ ತಾಲೂಕಿನ ಬಡಗಕಜೆಕಾರಿನ ಪಾಂಡವರಕಲ್ಲು ಮನೆಯ ಅಕ್ಟರ್ ಸಿದ್ದಿಕ್ ಎಂಬವರಿಗೆ ಸಮಾಜ ಸೇವೆ ಸೋಗಿನ ಆಸೀಫ್ ಆಪತ್ವಾಂಧವ, ರವೂಫ್ ಬೆಂಗರೆ ಮತ್ತು ಮಿನಾಜ್ ಎಂಬ ಯುವತಿ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ಟರ್ ಸಿದ್ದಿಕ್ ಈ ದೂರು ದಾಖಲು ಮಾಡಿದ್ದಾರೆ.
ಹನಿಟ್ರ್ಯಾಪ್ ನಿಂದ ನೊಂದ ಸಂತ್ರಸ್ತ ವ್ಯಕ್ತಿ ವಿಷ ಸೇವಿಸಿ, ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಅಕ್ಟರ್ ಅವರು ಅಲ್ ಮದೀನಾ ಟ್ರಸ್ಟ್ ಹೆಸರಲ್ಲಿ ಮದುವೆಗೆಂದು ಹಣ ಸಂಗ್ರಹಿಸುತ್ತಿದ್ದರು. ಆದರೆ ಮದುವೆಗೆ ಅಗತ್ಯವಿರುವಷ್ಟು ಹಣ ಸಂಗ್ರಹವಾಗಿಲ್ಲ ಎಂದು ಮದುವೆಯಾಗುವ ಯುವತಿಯ ಸೋದರಿ ಎಂದು ಹೇಳಿಕೊಂಡು ಮಿನಾಜ್ ಎಂಬಾಕೆ ಅಕ್ಟರ್ ಗೆ ಫೋನ್ ಮಾಡಿ ನೀವು ದೊಡ್ಡ ಮೊತ್ತದಲ್ಲಿ ಹಣ ಸಂಗ್ರಹ ಮಾಡಿದರೆ ನಿಮಗೆ ಲೈಂಗಿಕ ಸುಖ ಕೊಡುವುದಕ್ಕೂ ಸಿದ್ದ ಎಂದು ಆಮಿಷವೊಡ್ಡಿದ್ದಾರೆ. ವಾಟ್ಸಾಪ್ ಚಾಟಿಂಗ್ ಮತ್ತು ವಿಡಿಯೋ ಕರೆ ಕೂಡ ಮಾಡಿದ್ದಳು ಎಂದು ದೂರಿನಲ್ಲಿ ವಿವರಿಸಲಾಗಿದೆ.
ನಂತರ ಆಸೀಫ್ ಆಪತ್ವಾಂಧವ, ರವೂಫ್ ಬೆಂಗರೆ ಇಬ್ಬರೂ ಅಕ್ಟರ್ ಸಿದ್ದಿಕ್ -ಗೆ ಫೋನ್ ಮಾಡಿ ಮಿನಾಜ್ ಜತೆಗಿನ ವಾಟ್ಸಾಪ್ ಚಾಟಿಂಗ್, ವಿಡಿಯೋ ಕರೆಗಳ ಸ್ಟೀನ್ ಶಾಟ್ಗಳನ್ನು ಮುಂದಿಟ್ಟು ರೂ 3 ಲಕ್ಷ ನಗದು, ಮೂರು ಷವನ್ ಚಿನ್ನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಎಲ್ಲಾ ಚಾಟಿಂಗಳನ್ನು ಬಹಿರಂಗಪಡಿಸಲಾಗುವುದು ಎಂದೂ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಆತಂಕಕ್ಕೀಡಾದ ಅಕ್ಟರ್, ಏ.12ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.