

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಿಭಾಗದ ಸವಣಾಲು ಗ್ರಾಮದ ಇತ್ತಿಲಪೇಲ ಅರಣ್ಯ ಪ್ರದೇಶದಲ್ಲಿ ಚಿರತೆಯ ಮೃತದೇಹ ಸಹಿತ ಮೂಳೆಗಳು ಪತ್ತೆಯಾದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರವೊಂದರಲ್ಲಿ ಚಿರತೆಯ ಮೃತದೇಹ ನಾಲ್ಕು ಕಾಲುಗಳನ್ನು ತುಂಡರಿಸಿದ ರೀತಿಯಲ್ಲಿ ಕಂಡು ಬರುತ್ತಿದ್ದು ಚಿರತೆ ಯಾವ ಕಾರಣದಿಂದ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿದು ಬರಬೇಕಿದೆ. ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಶರ್ಮಿಷ್ಠಾ ಅವರಿಗೆ ಈ ಬಗ್ಗೆ ಮಾಹಿತಿ ಬಂದಿತ್ತು. ಕಾರ್ಕಳ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಸವಣಾಲು ಗ್ರಾಮದ ಅಲ್ಲಲ್ಲಿ ಚಿರತೆಗಳು ಸಾಮಾನ್ಯವಾಗಿ ಆಗಾಗ ಕಂಡು ಬರುತ್ತವೆ. ಕಳೆದ ಸಪ್ಟೆಂಬರ್‌ನಲ್ಲಿ ಇಲ್ಲಿನ ಗುರಿಕಂಡ ಪ್ರದೇಶದಲ್ಲಿ ಚಿರತೆಯೊಂದು ಇಲಾಖೆಯ ಬೋನಿಗೆ ಬಿದ್ದಿತ್ತು. ಇದನ್ನು ಇಲಾಖೆ ವಶಪಡಿಸಿಕೊಂಡಿತ್ತು. ಇದಾದ ಬಳಿಕ ಕೆಲವೇ ದಿನಗಳಲ್ಲಿ ಮತ್ತೆ ಆ ಪರಿಸರದಲ್ಲಿ ಚಿರತೆ ಓಡಾಟ ಕಂಡು ಬಂದಿದ್ದು ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚಿನ ಚಿರತೆಗಳು ಇರುವ ಬಗ್ಗೆ ದೃಢಪಟ್ಟಿತ್ತು. ಸವಣಾಲು ಅರಣ್ಯ ಪ್ರದೇಶದಲ್ಲಿ ಚಿರತೆಯ ಮೂಳೆಗಳು ಪತ್ತೆಯಾಗಿರುವುದು ದೃಢಪಟ್ಟಿದೆ. ಮೂಳೆಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇದರ ವರದಿಯ ಆಧಾರದಲ್ಲಿ ತನಿಖೆ ಮುಂದುವರಿಯಲಿದೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹರಡಿದ್ದರಿಂದ ಚಿತ್ರವನ್ನು ಯಾವಾಗ ಯಾರು ತೆಗೆದದ್ದು ಎಂಬ ವಿಚಾರದಲ್ಲಿ ತನಿಖೆ ನಡೆಯಲಿದೆ ಎಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿಭಾಗದ ಡಿಎಫ್‌ಒ ಶಿವರಾಮ ಬಾಬು ತಿಳಿಸಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ: ಚಿರತೆಯ ಮೃತದೇಹದ ಆಯ್ದ ಮಾದರಿಗಳನ್ನು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಎ.15ರಂದು ರವಾನಿಸಲಾಗಿದೆ. ಏ.12ರಂದು ಬೆಳಗ್ಗೆ ಘಟನಾ ಸ್ಥಳಕ್ಕೆ ಹೋಗಿ ವನ್ಯಜೀವಿ ವಿಭಾಗದ ಆರ್‌ಎಫ್‌ಓ ಶರ್ಮಿಷ್ಠಾ ಅವರು ಪರಿಶೀಲನೆ ನಡೆಸಿದ್ದರು. ಕಾರ್ಕಳ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ಕೂಡ ಆಗಮಿಸಿ ಪರಿಶೀಲನೆ ಮಾಡಿದ್ದರು.

ಚಿರತೆಯ ಮೃತದೇಹವನ್ನು ವೈದ್ಯರು ಶವಪರೀಕ್ಷೆ ಮಾಡಿ ಅಲ್ಲಿಯೇ ದಫನ ಮಾಡಿದ್ದರು. ಬೆಳ್ತಂಗಡಿ ವನ್ಯಜೀವಿ ವಿಭಾಗದಲ್ಲಿ ಪ್ರಕರಣ ದಾಖಲಾಗಿತ್ತು. ಯಾರೋ ದುಷ್ಕರ್ಮಿಗಳು ಚಿರತೆಯ ತಲೆಗೆ ಗುಂಡು ಹಾರಿಸಿ ಸಾಯಿಸಿ ಕಾಲಿನ ಉಗುರುಗಳಿಗಾಗಿ ಕಾಲನ್ನು ತುಂಡರಿಸಿಕೊಂಡು ಹೋಗಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಆಯ್ದ ಮಾದರಿಗಳನ್ನು ರವಾನಿಸಿದ್ದಾರೆ. 3 ತಿಂಗಳೊಳಗ ರಿಪೋರ್ಟ್ ಬರುವ ಸಾಧ್ಯತೆ ಇದೆ. ಆ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು, ಭಾರತೀಯ ಅರಣ್ಯ ಸೇವೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್., ಬೆಳ್ತಂಗಡಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ವಿ. ಶರ್ಮಿಷ್ಟ, ಉಪವಲಯರಣ್ಯಾಧಿಕಾರಿಗಳಾದ ಕಿರಣ್ ಪಾಟೀಲ್, ರಂಜಿತ್ ಕುಮಾರ್, ಹರಿಪ್ರಸಾದ್, ಗಸ್ತು ಅರಣ್ಯ ಪಾಲಕರಾದ ಹೇಮಂತ ಡಿ.ಪಿ., ಹೇಮಂತ್ ಕುಮಾರ್ ಪಿ., ಅರಣ್ಯ ವೀಕ್ಷಕರಾದ ದೇಜಪ್ಪ ಮತ್ತು ಸುರೇಶ್, ಎನ್ ಟಿಸಿಎ ಪ್ರತಿನಿಧಿ ವೀರೇಶ್ ಜಿ., ಎನ್‌ಜಿಒ ಪ್ರತಿನಿಧಿ ರಾಮಚಂದ್ರ ಭಟ್, ಬೆಳ್ತಂಗಡಿ ಮುಖ್ಯ ಪಶು ವೈದ್ಯಾಧಿಕಾರಿ ರವಿಕುಮಾರ್, ಸ್ಥಳೀಯರಾದ ಸುದರ್ಶನ್, ಗಣೇಶ್ ಕೆ. ಮತ್ತು ಬೆಳ್ತಂಗಡಿ ವಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.