

ಉಜಿರೆ: ಓಡಲದಲ್ಲಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಯುವಕರು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಳ್ಳತನ ಮಾಡಿದ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ರತ್ನ (55) ಎಂಬವರು ಏ.10 ರಂದು 6.30 ಗಂಟೆಯ ಸುಮಾರಿಗೆ ಉಜಿರೆ ಓಡಲ ವ್ಯಾಘ್ರ ಚಾಮುಂಡಿ ದ್ವಾರದ ಬಳಿ ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯ ಸಮೀಪ ಬಂದು ಬೈಕ್ ಅನ್ನು ಚಾಲೂ ಸ್ಥಿತಿಯಲ್ಲಿ ನಿಲ್ಲಿಸಿ ಒಬ್ಬ ಬೈಕ್ ನಿಂದ ಇಳಿದು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ. ಕುತ್ತಿಗೆಯಿಂದ ಸರವನ್ನು ಎಳೆದು ತುಂಡರಿಸುವ ವೇಳೆ ಮಹಿಳೆಯ ಕುತ್ತಿಗೆಗೆ ಗಾಯಗಳಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕಳ್ಳತನವಾದ ಚಿನ್ನದ ಸರ 33 ಗ್ರಾಂ ತೂಕದ್ದಾಗಿದ್ದು ಇದರ ಮೌಲ್ಯ ಸುಮಾರು ಒಂದೂವರೆ ಲಕ್ಷ ಎಂದು ಅಂದಾಜಿಸಲಾಗಿದೆ.
ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.