

ಬೆಳ್ತಂಗಡಿ: ವಿಘ್ನ ವಿನಾಶಕನನ್ನು ನಿರಂತರ ಪೂಜಿಸುವ ನಾವು ನಿರಂತರ ವಿಘ್ನಕಾರಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಿ ನಮ್ಮ ಬದುಕಿನ ರಕ್ಷಣೆ ಮಾಡಲು ಕಳುಹಿಸುತ್ತಿದ್ದೇವೆ. ಇದರಿಂದ ನಮ್ಮ ಬದುಕು ಯಾವಾಗಲೂ ಗಂಡಾಂತರಕಾರಿಯಾಗಿ ವಿಘ್ನಗಳಿಂದಲೇ ಕೂಡಿರುವಂತಾಗಿದೆ ಎಂದು ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಉಪಾಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.
ಬೀಡಿ ಕಾರ್ಮಿಕರ ವೇತನವನ್ನು ರೂ 315ಕ್ಕಿಂತ ರೂ.೨೭೦ಕ್ಕೆ ಇಳಿಸಿ ಕನಿಷ್ಠ ವೇತನ ಜಾರಿ ಮಾಡಿ ಆದೇಶ ಮಾಡಿದ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘ ಸಿಐಟಿಯು ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಎ.೭ರಂದು ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅವಿಭಜಿತ ದ.ಕ. ಜಿಲ್ಲೆ ಆರ್ಥಿಕವಾಗಿ ಬಲಿಷ್ಟವಾಗಿ ಬೆಳೆದು ಬರಲು ಬೀಡಿ ಉದ್ಯಮ ಮತ್ತು ಅಡಿಕೆ ಕೃಷಿ ಪ್ರಧಾನ ಕಾರಣವಾಗಿದ್ದರೂ ಇವೆರಡನ್ನೂ ಮುಗಿಸಲು ಇಂದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಪೈಪೋಟಿ ನಡೆಸುತ್ತಿವೆ ಎಂದು ಟೀಕಿಸಿದ ಬಿ.ಎಂ. ಭಟ್ ಅವರು ನಮ್ಮ ಬದುಕಲ್ಲಿ ವಿಘ್ನಗಳೇ ತುಂಬಲು ಮೂಲ ಕಾರಣ ಈ ವಿಘ್ನಕಾರಿ ಜನಪ್ರತಿನಿಧಿಗಳೇ ಎಂಬುದು ನಮಗೆ ಅರ್ಥವಾಗದಿರಲಿ ಎಂದು ಒಂದು ಸರಕಾರ ನಮಗೆ ಒಂದು ಶತ್ರುವನ್ನು ಸಿದ್ಧಗೊಳಿಸಿ ತೋರಿಸಿ ಅವರಿಗೆ ಹೊಡೆಯುತ್ತಾ, ಬಡಿಯುತ್ತಾ ಇದ್ದರೆ ಅದನ್ನು ವಿರೋಧಿಸುವ ನಾಟಕ ಮಾಡುತ್ತಾ ಇರುತ್ತದೆ. ನಮ್ಮ ಶತ್ರುವನ್ನು ಹೊಡೆಯುವುದನ್ನು ತೋರಿಸಿ ನಮಗೆ ಖುಷಿ ಕೊಡುವ ನಾಟಕ ಮಾಡುವ ಸರಕಾರಗಳ ನಡೆ ಖಂಡನೀಯ ಎಂದರು. ವಕ್ಫ್ ಕಾಯ್ದೆ ಇರಬಹದು, ಮತಾಂತರ ಕಾಯ್ದೆ ಇರಹುದು, ಹಿಜಾಬ್, ಹಲಾಲ್, ವ್ಯಾಪಾರ ಯಾವ್ಯಾವುದೋ ಹೆಸರಲ್ಲಿ ನಮ್ಮನ್ನು ದಾರಿ ತಪ್ಪಿಸಿ ನಮ್ಮ ವೇತನ ಕಡಿತ ಮಾಡುತ್ತಾ ದುಡಿಮೆಯ ಸಮಯ ಹೆಚ್ಚಳ ಮಾಡುತ್ತಾ ಕೆಲಸದ ಭದ್ರತೆ ತೆಗೆಯುತ್ತಾ ನಿರುದ್ಯೋಗ, ಬೆಲೆ ಏರಿಕೆ ಮಾಡುತ್ತಾ ಕಾನೂನುಬಾಹಿರವಾಗಿ ನಡೆಯುತ್ತಿವೆ ಇಂತಹ ಸರಕಾರಗಳ ಸೋಲಿಸುವುದೇ ನಮಗೆ ಇಂದು ನ್ಯಾಯ ಸಿಗಲು, ಬದುಕು ನೆಮ್ಮದಿ ಸಿಗಲು ಇರುವ ಏಕೈಕ ದಾರಿ ಎಂಬುದು ಪದೇ ಪದೇ ಸಾಬೀತು ಆಗುತ್ತಿದೆ ಎಂದು ಬಿ.ಎಂ. ಭಟ್ ಹೇಳದರು.
ದೇಶದ ದುರಂತ-ಈಶ್ವರಿ ಶಂಕರ್: ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷೆ ಈಶ್ವರಿ ಶಂಕರ್ ಮಾತನಾಡಿ ಬೆಲೆ ಏರಿಕೆಯಿಂದ ಬದುಕಲಾಗುತ್ತಿಲ್ಲ ಎಂದು ತಮ್ಮ ಸಂಬಳವನ್ನು ಡಬ್ಬಲ್ ಏರಿಸಿ ಕೊಂಡ ಶಾಸಕರು, ಸಂಸದರು, ಮಂತ್ರಿಗಳು ಬೀಡಿ ಕಾರ್ಮಿಕರಿಗೆ ಮಾತ್ರ ೨೦೧೮ರಿಂದ ಬೆಲೆ ಏರಿಕೆಯೇ ಆಗಿಲ್ಲ ಎಂದು ಹಿಮ್ಮುಖವಾಗಿ ವೇತನ ನಿಗದಿ ಪಡಿಸಿರುವುದು ಖಂಡನೀಯ ಮತ್ತು ಸರಕಾರಕ್ಕೆ ನಾಚಿಕೆಯ ವಿಚಾರ ಎಂದರು. ಕಾಂಗ್ರೆಸ್ ಸರಕಾರದ ಜೊತೆ ಬಿಜೆಪಿಯ ಬಿ.ಎಂ.ಎಸ್, ಕಾಂಗ್ರೆಸಿನ ಐ.ಎನ್.ಟಿ.ಯು.ಸಿ, ಎಚ್.ಎಂ.ಎಸ್ ಮೊದಲಾದ ಸಂಘಟನೆಗಳು ಸೇರಿಕೊಂಡು ಒಮ್ಮತದಿಂದ ಈ ವೇತನ ನಿಗದಿ ಪಡಿಸಿದೆ. ಸಿಐಟಿಯು ಹೊರತು ಪಡಿಸಿ ಉಳಿದ ಕಾರ್ಮಿಕ ಸಂಘಟನೆಗಳ ಒಮ್ಮತದ ಒಪ್ಪಿಗೆ ಮೇರೆಗೆ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಒಟ್ಟಾರೆ ಕಾರ್ಮಿಕ ವಿರೋಧಿ ಶಕ್ತಿಗಳೆಲ್ಲ ಒಂದಾಗಿ ಮಾಲಕರ ಜೇಬು ತುಂಬಿಸಲು ಮುಂದಾಗಿರವುದು ಮತ್ತು ಬೀಡಿ ಕಾರ್ಮಿಕರ ಪರ ನಮ್ಮ ಜಿಲ್ಲೆ ಯಾವ ಶಾಸಕರೂ ಧ್ವನಿ ಎತ್ತದಿರುವುದು ದೇಶದ ದುರಂತ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಸ್ವಾಗತಿಸಿ ಸಂಘದ ಉಪಾಧ್ಯಕ್ಷೆ ಪುಷ್ಪಾ ವಂದಿಸಿದರು. ಸಿಪಿಐಎಂ ತಾಲೂಕು ಸಮಿತಿ ಸದಸ್ಯ ಲೋಕೇಶ್ ಕುದ್ಯಾಡಿ, ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್, ಮಹಿಳಾ ಸಂಘದ ಕುಮಾರಿ, ಕಾರ್ಮಿಕ ಮುಖಂಡರುಗಳಾದ ನೀತಾ, ಅಶ್ವಿತ, ಕುಸುಮ ಕೇಳ್ತಾಜೆ, ರಾಮಚಂದ್ರ, ರೈತ ಮುಖಂಡರುಗಳಾದ ವಿಶ್ವನಾಥ, ನೀಲೇಶ್ ಪೆರಿಂಜೆ ಮೊದಲಾದವರು ಉಪಸ್ಥಿತರಿದ್ದರು.