

ಬೆಳ್ತಂಗಡಿ: ಚುನಾವಣಾ ವೆಚ್ಚವನ್ನು ನೀಡುವ ಕಂಪೆನಿಗಳಿಗೆ ಲಾಭ ತರಲು ಬೆಲೆ ಏರಿಕೆ ಮಾಡುವುದೇ ಆಡಳಿತ ಎಂದಾಗಿಸಿದ ಉಭಯ ಸರಕಾರಗಳ ನಡೆ ಖಂಡನೀಯವಾಗಿದೆ. ಎಲ್ಲಾ ಅಗತ್ಯ ವಸ್ತುಗಳ ದರಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರ ಸ್ಪರ್ಧೆಯ ರೂಪದಲ್ಲಿ ವಿಪರೀತ ಏರಿಕೆ ಮಾಡುತ್ತಾ ಕಾರ್ಪರೇಟ್ ಸಂಸ್ಥೆಗಳ ಪ್ರೀತಿ ಗಳಿಸಲು ಮುಂದಾಗುತ್ತಿದೆ ಎಂದು ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ಬಿ.ಎಂ.ಭಟ್ ಹೇಳಿದರು. ಸಿಪಿಐಎಂ ನೇತೃತ್ವದಲ್ಲಿ ಬೆಲೆ ಏರಿಕೆ ವಿರುದ್ಧ ಬೆಳ್ತಂಗಡಿ ವಿಧಾನ ಸೌಧ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ, ಕಾಂಗ್ರೆಸ್ ವಿರುದ್ಧ ಆಕ್ರೋಶ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಮತ ನೀಡಿದ ಜನತೆಗೆ ದ್ರೋಹ ಎಸಗುತ್ತಿದೆ. ಕೇಂದ್ರ ಸರಕಾರ ಟೋಲ್, ಔಷಧ, ಕಾರು, ಶಿಕ್ಷಣ, ಆರೋಗ್ಯ, ಹೋಟೇಲ್ ದರ, ವೀಸಾ ಶುಲ್ಕ, ಬೆಳ್ಳಿ, ಆಹಾರ ಧಾನ್ಯಗಳ, ರಸಗೊಬ್ಬರಗಳ ಬೆಲೆಗಳನ್ನು ಏರಿಸಿದರೆ ರಾಜ್ಯ ಸರಕಾರ ಹಾಲು, ಡೀಸಿಲ್, ಸಿ.ಎನ್.ಜಿ., ಸಾರಿಗೆ, ಕಸ ವಿಲೇವಾರಿ ಶುಲ್ಕ, ಮುದ್ರಾಂಕ ಶುಲ್ಕ, ತರಕಾರಿ ಇತ್ಯಾದಿಗಳ ದರ ದುಬಾರಿಗೊಳಿಸಿದೆ. ಜನರ ರಕ್ತ ಹೀರಲು ಪೈಪೋಟಿ ನಡೆಸುವ ಈ ಬಿಜೆಪಿ ಕಾಂಗ್ರೆಸಿಗರು ಜನರ ಪಾಲಿನ ಪ್ರಧಾನ ಶತ್ರುಗಳೇ ಆಗಿದ್ದಾರೆ ಎಂದು ಹೇಳಿದ ಅವರು ಹಿಂದು ಒಂದು ಎನ್ನುತ್ತಾ ಮತ ಪಡೆಯುವ ತಂತ್ರವನ್ನೇ ಕಾಯಕವಾಗಿಸಿದ ಬಿಜೆಪಿ ಒಂದೆಡೆ ಕಾಂಗ್ರೆಸ್ ಬೆಲೆ ಏರಿಕೆ ಮಾಡಿದೆ ಎಂದು ಬೊಬ್ಬೆ ಹೊಡೆದರೆ ಬಡವರ ಉದ್ಧಾರ, ಮಹಿಳೆಯರ ಶಕ್ತಿ ವೃದ್ಧಿಸುವ ಕಾಯಕ ಮಾಡುತ್ತೇವೆ ಎಂದು ಹೇಳುತ್ತಿರುವ ಕಾಂಗ್ರೆಸ್ ಇನ್ನೊಂದೆಡೆ ಕೇಂದ್ರದ ಬಿಜೆಪಿ ಸರಕಾರ ಬೆಲೆ ಏರಿಸುತ್ತಿದೆ ಎಂದು ಕೇಂದ್ರದ ಬಿಜೆಪಿ ಸರಕಾರವನ್ನು ಟೀಕಿಸಿ ಹೋರಾಡುತ್ತಿದೆ. ಒಂದೆಡೆ ಉದ್ಯೋಗ ಇಲ್ಲ. ಇರುವ ಉದ್ಯೋಗಕ್ಕೆ ಭದ್ರತೆ ಇಲ್ಲ ಜೊತೆಗೆ ಈ ಬೆಲೆ ಏರಿಕೆ ಹೆಸರಲ್ಲಿ ತಮ್ಮ ಸಂಬಳ ಏರಿಸಿಕೊಂಡ ರಾಜ್ಯ ಸರಕಾರ ಬಡ ಕಾರ್ಮಿಕರ ಸಂಬಳವನ್ನು ಇಳಿಕೆ ಮಾಡಿ ಆದೇಶ ಮಾಡುತ್ತಿದೆ. ಕಲ್ಯಾಣ ರಾಜ್ಯದ ಕಲ್ಪನೆಯನ್ನೇ ಧ್ವಂಸ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರ ಕಾರ್ಮಿಕ ಸವಲತ್ತುಗಳ, ಕಲ್ಯಾಣ ಮಂಡಳಿಯ ಹಣವನ್ನೇ ಲೂಟಿ ಮಾಡುತ್ತಿದೆ ಎಂದು ಹೇಳಿದರು.
ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಪಾಂಗಳ ಲಕ್ಷ್ಮಣ ಗೌಡ ಮಾತನಾಡಿ ಬೆಲೆ ಏರಿಕೆ ಮಾಡುತ್ತಿರುವ ಸರಕಾರದ ನೀತಿಯನ್ನು ಖಂಡಿಸಿದರು. ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯೆ ಈಶ್ವರಿ ಶಂಕರ್ ಸ್ವಾಗತಿಸಿ ಸಿಪಿಐಎಂ ತಾಲೂಕು ಸಮಿತಿ ಸದಸ್ಯೆ ಜಯಶ್ರೀ ವಂದಿಸಿದರು. ಪಕ್ಷದ ಮುಖಂಡರುಗಳಾದ ಸುಕುಮಾರ್ ದಿಡುಪೆ, ಸಲಿಮೋನ್, ಪ್ರದೀಪ್ ಗೌಡ, ಕಾರ್ಮಿಕ ಮುಖಂಡರುಗಳಾದ ಜನಾರ್ದನ ಆಚಾರ್, ಪುಷ್ಪಾ, ಡಿ.ವೈ.ಎಫ್.ಐ. ಮುಖಂಡರುಗಲಾದ ಅಭಿಷೇಕ್, ಅಶ್ವಿತ, ಮಹಿಳಾ ಸಂಘದ ಕುಮಾರಿ, ಅಪ್ಪಿ ಮೊದಲಾದವರು ಇದ್ದರು.