

ಇಳಂತಿಲ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಂಡೆತಡ್ಕದಲ್ಲಿ ಏ. 8ರಂದು 2ನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ ಜರಗಿತು. ಅಧ್ಯಕ್ಷ ಸತೀಶ್ ಪೂಜಾರಿ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮದ ಮಾರ್ಗದರ್ಶಕರಾಗಿ ಸರಕಾರಿ ಪ್ರೌಢ ಶಾಲೆ ಬುಳೇರಿ ಇಲ್ಲಿನ ವಿಜ್ಞಾನ ಶಿಕ್ಷಕಿ ರಶ್ಮಿ ಭಾಗವಹಿಸಿದ್ದರು. ಸಭೆಯಲ್ಲಿ ದತ್ತಿ ನಿಧಿ ಪ್ರಾಯೋಜಕರಲ್ಲಿ ಓರ್ವರಾದ ಇಂದಿರಾ .ವಿ ಭಟ್ ಉಪಸ್ಥಿತರಿದ್ದರು.
ಸಭೆಯಲ್ಲಿ ಕಲಿಕೆ, ಆಟೋಟ ಸ್ಪರ್ಧೆಗಳಲ್ಲಿ ಸಾಧನೆಯನ್ನು ಮಾಡಿರುವಂತಹ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಪ್ರತಿಭಾವಂತ, ಆದರ್ಶ, ಬಡ ಹಾಗೂ ಕಲಿಕೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪ್ರಾಯೋಜಕರ ವತಿಯಿಂದ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಸುಮಾರು 11 ವರ್ಷಗಳ ಕಾಲ ಅಕ್ಷರ ದಾಸೋಹ ಸಿಬ್ಬಂದಿಗಳಾಗಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿದಂತಹ ವಸಂತಿರವರನ್ನು ಶಾಲಾ ಎಸ್. ಡಿ. ಎಂ. ಸಿ., ಪೋಷಕ ವೃಂದ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ವತಿಯಿಂದ ಫಲ ಪುಷ್ಪ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಕೃಷ್ಣಪ್ಪ ಪೂಜಾರಿ, ಎಸ್. ಡಿ. ಎಂ. ಸಿ ಸದಸ್ಯರು, ಪೋಷಕರು ಹಾಜರಿದ್ದರು.
ಶಾಲೆಯ ಸಹ ಶಿಕ್ಷಕಿ ನಯನ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕ ಅಣ್ಣಪ್ಪ ನಾಯ್ಕ, ಗುರುಪ್ರಸಾದ್, ಭವ್ಯ, ಅಕ್ಷಯ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಶಿಕ್ಷಕ ನಾರಾಯಣ ಗೌಡ ಕಾರ್ಯಕ್ರಮವನ್ನು ನಿರೂಪಿಸಿದರು. ಜೆಸಿಂತಾ ಇವರು ಧನ್ಯವಾದ ಸಲ್ಲಿಸಿದರು.