

ಬೆಳ್ತಂಗಡಿ: ಏ.೧೩ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ಎಕೆಬಿಎಂಎಸ್)ದ ಅಧ್ಯಕ್ಷ ಸ್ಥಾನದ ಚುನಾವಣೆ ಜೊತೆಗೆ ಜಿಲ್ಲಾ ಪ್ರತಿನಿಧಿಗಳ ಆಯ್ಕೆಗೂ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು ಮಂಗಳೂರು ಜಿಲ್ಲಾ ಪ್ರತಿನಿಧಿಯಾಗಿ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಏ.೧೩ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ದ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ. ಜೊತೆಗೆ ಪ್ರತಿ ಜಿಲ್ಲೆಯಿಂದ ಚುನಾಯಿತ ಪ್ರತಿನಿಧಿಗಳ ಆಯ್ಕೆಗೂ ಅದೇದಿನ ಚುನಾವಣೆ ನಡೆಯಲಿದೆ.ಜಿಲ್ಲಾ ಪ್ರತಿನಿಧಿಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾ.೨೭ ಕೊನೆಯ ದಿನಾಂಕವಾಗಿತ್ತು.ಮಂಗಳೂರು ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಮಹೇಶ್ ಕಜೆ ಅವರೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಇಂದು ಘೋಷಣೆ: ಮಾ.೨೯ರಂದು ನಾಮಪತ್ರ ಪರಿಶೀಲನೆ ಬಳಿಕ, ಮಹೇಶ್ ಕಜೆ ಅವರ ಅವಿರೋಧ ಆಯ್ಕೆ ಅಧಿಕೃತವಾಗಿ ಘೋಷಣೆಯಾಗಲಿದೆ.ಮಂಗಳೂರು ಸೇರಿದಂತೆ ಇತರ ೮ ಜಿಲ್ಲೆಗಳಲ್ಲಿ ಪ್ರತಿನಿಧಿಗಳ ಅವಿರೋಧ ಆಯ್ಕೆ ನಡೆದಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಪ್ರಥಮ ಬಾರಿಗೆ ಜಿಲ್ಲಾ ಪ್ರತಿನಿಧಿಗಳ ಚುನಾವಣೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಳೆಯ ಬೈಲಾ ಪ್ರಕಾರ ರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯುತ್ತಿತ್ತು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯರಾಗಿದ್ದು, ಮತದಾನದ ಹಕ್ಕು ಹೊಂದಿರುವವರು ಚುನಾವಣೆ ಮೂಲಕ ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತಿದ್ದರು.ಆ ಬಳಿಕ ರಾಜ್ಯದ ಪದಾಧಿಕಾರಿಗಳು ಮತ್ತು ಜಿಲ್ಲಾ ಪ್ರತಿನಿಧಿಗಳನ್ನು ರಾಜ್ಯಾಧ್ಯಕ್ಷರೇ ನಾಮನಿರ್ದೇಶನ ಮಾಡುತ್ತಿದ್ದರು.ಆದರೆ ಈ ಬಾರಿ ಹೊಸ ಬೈಲಾ ಪ್ರಕಾರ ರಾಜ್ಯಾಧ್ಯಕ್ಷ ಮಾತ್ರವಲ್ಲದೆ ಜಿಲ್ಲಾ ಪ್ರತಿನಿಧಿಗಳ ಆಯ್ಕೆಯನ್ನೂ ಚುನಾವಣೆ ಮೂಲಕವೇ ನಡೆಸಬೇಕಾಗಿದೆ.ರಾಜ್ಯಾಧ್ಯಕ್ಷ ಮತ್ತು ಜಿಲ್ಲಾ ಪ್ರತಿನಿಧಿಯ ಆಯ್ಕೆ ಸೇರಿದಂತೆ ಪ್ರತಿಮತದಾರ ಎರಡು ಮತ ಚಲಾವಣೆ ಮಾಡಬೇಕಿದೆ.ಆದರೆ ಮಂಗಳೂರು ಸೇರಿದಂತೆ ಜಿಲ್ಲಾ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿರುವ ಜಿಲ್ಲೆಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಗೆ ಮಾತ್ರ ಚುನಾವಣೆ ನಡೆಯಲಿದೆ.ಮಂಗಳೂರು ಜಿಲ್ಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಸದಸ್ಯರಿದ್ದರೂ ಅವರ ನೋಂದಣಿ ಅವಧಿ ಆಧಾರದಲ್ಲಿ ೯೫೦ ಸದಸ್ಯರು ಮಾತ್ರ ಮತದಾನದ ಹಕ್ಕು ಹೊಂದಿದ್ದಾರೆ.ಈ ಬಾರಿ ಮಂಗಳೂರಿನಲ್ಲಿಯೇ ಮತದಾನ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಪ್ರತಿನಿಧಿಗಳಿಗೆ ರಾಜ್ಯ ಕಾರ್ಯಕಾರಿಣಿಯಲ್ಲಿ ಸ್ಥಾನ: ಮಹೇಶ್ ಕಜೆ ಸೇರಿದಂತೆ ಜಿಲ್ಲಾ ಪ್ರತಿನಿಧಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿರುವವರು ಮತ್ತು ಚುನಾವಣೆ ಮೂಲಕ ಮುಂದೆ ಆಯ್ಕೆಯಾಗಲಿರುವವರು ರಾಜ್ಯದ ಕಾರ್ಯಕಾರಿಣಿಯಲ್ಲಿ ಸ್ಥಾನ ಪಡೆಯುತ್ತಾರೆ.ರಾಜ್ಯಾಧ್ಯಕ್ಷರ ಆಯ್ಕೆ ಬಳಿಕ ರಾಜ್ಯದ ಇತರ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾ ಪ್ರತಿನಿಧಿಗಳಾಗಿ ಆಯ್ಕೆಯಾಗಿ ರಾಜ್ಯ ಕಾರ್ಯಕಾರಿಣಿಯಲ್ಲಿ ಸ್ಥಾನ ಪಡೆದವರು ಆಯ್ಕೆ ಮಾಡಲಿದ್ದಾರೆ.
ಅವಿರೋಧ ಆಯ್ಕೆ-ಘೋಷಣೆ: ಇಳಂತಿಲ ‘ಕೇದಾರ’ ನಿವಾಸಿಯಾಗಿರುವ ಮಹೇಶ್ ಕಜೆ ಅವರು ಬೊಳುವಾರಿನಲ್ಲಿರುವ ಕಜೆ ಲಾ ಛೇಂಬರ‍್ಸ್ ಮುಖ್ಯಸ್ಥರಾಗಿದ್ದಾರೆ.ಜಾರಿ ನಿರ್ದೇಶನಾಲಯ(ಇಡಿ)ಪರ ವಿಶೇಷ ಸರಕಾರಿ ಅಭಿಯೋಜಕರೂ ಆಗಿರುವ ಇವರು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಮಾಜಿ ಸದಸ್ಯ, ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಇವರು ಈ ಹಿಂದೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ವಿವಿಧ ಸಂಘ ಸಂಸ್ಥೆಗಳಲ್ಲಿ ಇವರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಇವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ, ಜಿಲ್ಲೆಯಲ್ಲಿರುವ ೯ ಪಂಗಡಗಳ ಬ್ರಾಹ್ಮಣರನ್ನು ಒಟ್ಟು ಸೇರಿಸಿ ‘ಗಾಯತ್ರಿ ಸಂಗಮ’ಎನ್ನುವ ವಿಜ್ರಂಭಣೆಯ ಕಾರ್ಯಕ್ರಮವನ್ನು ಮಂಗಳೂರಿನ ಚಿತ್ರಾಪುರದಲ್ಲಿ ಆಯೋಜಿಸಿದ್ದರು. ಈ ಮೂಲಕ ೯ ಪಂಗಡಗಳ ಬ್ರಾಹ್ಮಣರನ್ನು ಒಟ್ಟುಗೂಡಿಸಿ ಒಂದೇ ವೇದಿಕೆಯಲ್ಲಿ ಕೋಟಿ ಗಾಯತ್ರಿ ಜಪದೊಂದಿಗೆ ಗಾಯತ್ರಿ ಹೋಮವನ್ನು ಮಾಡಿದ ಯಶಸ್ವಿ ಕಾರ್ಯಕ್ರಮ ಮಾಡಿರುವುದು ಇವರ ಹೆಗ್ಗಳಿಕೆ.ಜೊತೆಗೆ ರಾಜ್ಯದಲ್ಲಿ ಎಲ್ಲೂ ಇಲ್ಲದ ರೀತಿಯಲ್ಲಿ ಅತ್ಯಂತ ಪ್ರಜಾಪ್ರಭುತ್ವ ಮಾದರಿಯಲ್ಲಿ ಜಿಲ್ಲಾ,ತಾಲೂಕು ಸಮಿತಿಗಳನ್ನು ಇವರ ಅವಧಿಯಲ್ಲಿ ಮಾಡಲಾಗಿತ್ತು.ಬೇರೆ ಬೇರೆ ಪಂಗಡಗಳ ಬ್ರಾಹ್ಮಣರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಅಥವಾ ಅವರಿಂದ ಸೂಚಿತ ವ್ಯಕ್ತಿಗಳನ್ನೇ ಸೇರಿಸಿಕೊಂಡು ಜಿಲ್ಲಾ ಮತ್ತು ತಾಲೂಕು ಸಮಿತಿಗಳನ್ನು ಮಾಡಿರುವುದೂ ಮತ್ತೊಂದು ಹೆಗ್ಗಳಿಕೆಯಾಗಿದೆ.