

ಬೆಳ್ತಂಗಡಿ: ಕಿಲ್ಲೂರು ಮುಖ್ಯ ರಸ್ತೆಯ ಮಧ್ಯೆ, ನಾವೂರು ಗ್ರಾಮದ ಮುರ ಎಂಬಲ್ಲಿನ ಸೇತುವೆ ಬಿರುಕು, ಸೇತುವೆಯ ಎರಡು ಕಡೆ ಸುರಕ್ಷತೆ ಗೋಡೆ ಇಲ್ಲದೆ ಅಪಘಾತಗಳು ನಿರಂತರವಾಗಿ ನಡೆಯುತ್ತಿದ್ದು ವರ್ಷಗಳಾದರೂ ಯಾವುದೇ ವ್ಯವಸ್ಥಿತ ಪರಿಹಾರ ಆಗಿಲ್ಲ. ಸುಮಾರು ವರ್ಷಗಳಿಂದ ಎಸ್. ಡಿ. ಪಿ. ಐ ನಾವೂರು ವತಿಯಿಂದ ಶಾಶ್ವತ ಪರಿಹಾರ, ಸುರಕ್ಷಿತ ತಡೆ ಗೋಡೆ, ಸೇತುವೆಯ ಅಗಲೀಕರಣಕ್ಕೆ ಮನವಿ ನೀಡುತ್ತಾ ಬಂದಿದೆ.
ಭರವಸೆ ನೀಡುತ್ತಾರೆಯೇ ಹೊರತು ಅಧಿಕಾರಿಗಳು ನಿರ್ಲಕ್ಷಿಸುತ್ತಾ ಬಂದಿದ್ದು, ಇದೀಗ ನಾವೂರಿಂದ 3ಕಿ.ಮೀ ಮತ್ತೆ ಮರು ಡಾಮರೀಕರಣದ ಕಾಮಗಾರಿ ಆರಂಭಿಸಿದ್ದು ಈ ಸಂದರ್ಭದಲ್ಲಿ ಮುರ ಸೇತುವೆ ಬಳಿ ಸುರಕ್ಷಿತ ವ್ಯವಸ್ಥೆ ಕಲ್ಪಿಸದೆ ಮರುಡಾಮರೀಕರಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ನಾವೂರು ಹಿತರಕ್ಷಣಾ ವೇದಿಕೆ ವತಿಯಿಂದ ಅಧ್ಯಕ್ಷ ಸಾದಿಕ್ ನಾವೂರು ಇವರ ನೇತೃತ್ವದಲ್ಲಿ ಡಾಮರೀಕರಣದ ವಾಹನವನ್ನು ತಡೆದು ಏ. 1ರಂದು ಪ್ರತಿಭಟನೆ ನಡೆಸಲಾಯಿತು.
ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ(AEE) ಎ.ಇ.ಇ ಬಕಪ್ಪ ಹಾಗೂ ಸಹಾಯಕ ಇಂಜಿನಿಯರ್ ಶಿವಕುಮಾರ್ ರವರು ಮನವಿಗೆ ಸ್ಪಂದಿಸಿ ಸಮಸ್ಯೆ ಇರುವ ಸ್ಥಳವನ್ನು ಪರಿಶೀಲನೆ ನಡೆಸಿದರು. ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಸಮಸ್ಯೆ ಬಗ್ಗೆ ಅರಿವಾಗಿದ್ದು ಬಿರುಕುಗೊಂಡ ಸ್ಥಳದ ಆಸುಪಾಸಿನಲ್ಲಿ 50ಮೀಟರ್ ವರೆಗೆ ಕೆಲಸವನ್ನು ಸ್ಥಗಿತಗೊಳಿಸುವುದಾಗಿಯೂ ಬಿರುಕುಗೊಂಡ ಮೋರಿಯನ್ನು ಬದಲಿಸಿ ಸಮಸ್ಯೆ ಪರಿಹಾರಗೊಳಿಸಿದ ನಂತರ ಡಾಮರೀಕರಣ ಮಾಡುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಲೀಮ್ ಮುರ, ಬದ್ರು ದೇರ್ಲಕ್ಕಿ, ಖಾದರ್ ನಾವೂರು, ದಾಸನ್ನ ಶೆಟ್ಟಿ ಮುರ, ಸಾದಿಕ್ ಕಿರ್ನಡ್ಕ, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಇಸ್ಮಾಯಿಲ್ ಸಿ. ಎಂ., ಇರ್ಷಾದ್, ಬಶೀರ್ ಕಳಸಾ, ಹಂಝ ಕಿರ್ನಡ್ಕ, ಇಕ್ಬಾಲ್ ಮುರ, ಇರ್ಫಾನ್ ನಾವೂರು, ಆದಂ ಕೈಕಂಬ, ಇಸ್ಮಾಯಿಲ್ ದೇರ್ಲಕ್ಕಿ, ರಮ್ಲಾ ಇಂದಬೆಟ್ಟು, ಮನ್ಸೂರ್ ದುಗಲಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.