ಬೆಳ್ತಂಗಡಿ: ಪಿ. ಎಂ. ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿ. ಎಂ. ಶ್ರೀ. ಯೋಜನೆಯ ಮಹತ್ವಪೂರ್ಣ ಕಾರ್ಯಕ್ರಮಗಳಲ್ಲಿ ಒಂದಾದ ”ಸ್ವಚ್ಛತಾ ಪಕ್ವಾಡ” ದ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಾಗಾರ ಶಾಲೆಯ ವತಿಯಿಂದ ನಡೆಯಿತು.
ಈ ಕಾರ್ಯಕ್ರಮದ ಪ್ರಮುಖ ಭಾಗವಾದ ಜಾಥಾದ ಉದ್ಘಾಟನೆಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಇದರ ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್ ಇವರು ನೆರವೇರಿಸಿ ಶುಭ ಹಾರೈಸಿದರು. ವಿವಿಧ ಘೋಷಣೆಗಳು ಘೋಷ ವಾಕ್ಯಗಳು ವರ್ಣರಂಜಿತ ಸ್ವಚ್ಛತಾ ಮಾಹಿತಿ ಟೋಪಿಗೆಗಳನ್ನ ಧರಿಸಿದ ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿ ಶಾಲೆಯಿಂದ ಮೆರವಣಿಗೆ ಹೊರಟು ಅಂಗಡಿ ಮಳಿಗೆ, ನಗರ ಪಂಚಾಯತ್, ತಾಲೂಕು ಕಚೇರಿ ಮೊದಲಾದ ಸ್ಥಳಗಳಿಗೆ ತಮ್ಮ ಮಾಹಿತಿಯ ಮತ್ತು ಸ್ವಚ್ಛತಾ ಜಾಗೃತಿಯ ಕರಪತ್ರಗಳನ್ನ ಹಂಚಿದರು.

ನಂತರ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ಶಿಕ್ಷಕಿ ರೇಣುಕಾರವರು ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಇರಬೇಕಾದ ಅರಿವಿನ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಶಾಲಾ ದಿನಗಳಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ವಹಿಸಿ ಸ್ವಚ್ಛತಾ ಕಾರ್ಯಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ 8ನೇ ತರಗತಿ ವಿದ್ಯಾರ್ಥಿ ನಿರಂಜನ್ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಮಾನಸಿಕ ಮತ್ತು ದೈಹಿಕ ಶಿಸ್ತಿನ ಮಹತ್ವವನ್ನು ತಿಳಿಸಿದರು. ಈ ಒಂದು ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಚರಣ್ ಕುಮಾರ್, ಮುಖ್ಯ ಶಿಕ್ಷಕ ಸೂರ್ಯನಾರಾಯಣ ಪುತ್ತೂರಾಯರು, ಹಿರಿಯ ಶಿಕ್ಷಕ ದಿನಕರ್ ನಾಯಕ್, ಇಂದಿನ ಸಂಪನ್ಮೂಲ ವ್ಯಕ್ತಿಯಾದ ಶಾಲಾ ಹಿರಿಯ ಶಿಕ್ಷಕಿ ರೇಣುಕಾ ಉಪಸ್ಥಿತರಿದ್ದರು.
ಸ್ವಚ್ಛತಾ ಪಕ್ವಾಡ ಕಾರ್ಯಕ್ರಮದ ನೋಡಲ್ ಶಿಕ್ಷಕಿ ಸವಿತಾ ಕಾರ್ಯಕ್ರಮವನ್ನು ಆಯೋಜಿಸಿ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ ಶಿಕ್ಷಕಿ ಚಿತ್ರರವರು ಸ್ವಾಗತಿಸಿದರು. ಇದರೊಂದಿಗೆ ಸ್ವಚ್ಛತಾ ಕಾರ್ಯಕ್ರಮದ ಪ್ರಯುಕ್ತ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮದ ಯಶಸ್ಸಿಗೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರು ಹಾಗೂ ಸದಸ್ಯರುಗಳು, ಶಾಲಾ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಹಾಗೂ ಎಲ್ಲಾ ಸಹ ಶಿಕ್ಷಕರು ಸಹಕರಿಸಿದರು. ಶಿಕ್ಷಕಿ ರಾಜೇಶ್ವರಿ ವಂದಿಸಿದರು.