ಪಡಂಗಡಿ: ಗ್ರಾಮ ಪಂಚಾಯತಿಯ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯು ಪಂ. ಅಧ್ಯಕ್ಷ ವಸಂತ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ಜೋನ್ ಬ್ಯಾಪ್ಟಿಸ್ ಡಿಸೋಜಾ ವಿಶೇಷ ಚೆತನರಿಗೆ ಸರಕಾರವು ಜಾರಿ ಮಾಡಲಾದ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಸುದೀರ್ಘವಾದ ಉಪಯುಕ್ತ ಮಾಹಿತಿಯನ್ನು ನೀಡಿದರು.
ಗ್ರಾ. ಪಂ. ಮಟ್ಟದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ದೀಕ್ಷಿತಾ ವರದಿಯನ್ನು ಮಂಡಿಸಿದರು. ಸರ್ಕಾರಿ ಕಛೇರಿ, ಬ್ಯಾಂಕ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಚೇತನರಿಗೆ ಸರತಿ ಸಾಲಿನಲ್ಲಿ ವಿನಾಯಿತಿ ನೀಡಿ ಮೊದಲ ಪ್ರಾಶಸ್ತ್ಯ ನೀಡಬೇಕು, ಮೂರು ಚಕ್ರ ವಾಹನದ ಬೇಡಿಕೆ, ವಿಶೇಷ ಚೇತನರ ವಿಧ್ಯಾಬ್ಯಾಸದ ಸೌಲಭ್ಯದ ಕುರಿತು ಬೇಡಿಕೆಗಳನ್ನು ಸಲ್ಲಿಸಿದರು ಮತ್ತು ಈ ಬಗ್ಗೆ ಚರ್ಚಿಸಲಾಯಿತು.
ವಿಶೇಷ ಚೇತನರು ಸರಕಾರದ ಮತ್ತು ಸಂಘ ಸಂಸ್ಥೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವಂತಾಗಬೇಕೆಂದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಸಫನಾ ಸಂದೇಶವಿತ್ತರು.
ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದು ತನ್ನದೇ ಆದ ಛಾಪು ಮೂಡಿಸಿರುವ ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಇವರನ್ನು ಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷೆ ವಸಂತಿ, ಸದಸ್ಯರಾದ ಸಂತೋಷ್ ಕುಮಾರ್ ಜೈನ್, ರಿಚರ್ಡ್ ಗೋವಿಯಸ್, ಹಾಮದ್ ಬಾವಾ, ಯೋಗೀಶ್ ಕುಮಾರ್ ಡಿ.ಪಿ, ಶಕುಂತಳಾ, ವನಜಾಕ್ಷಿ, ಶುಭಾ ಪಾಲ್ಗೊಂಡಿದ್ದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಂಥಾಲಯ ಮೇಲ್ವಿಚಾರಕಿ, ಸಿರಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ 39 ಜನ ವಿಶೇಷ ಚೇತನರು ಮತ್ತು ಅವರ ಪೋಷಕರು ಹಾಜರಿದ್ದರು.