ಬೆಳ್ತಂಗಡಿ: ವಿಧಾನಸಭೆಯ ಕಲಾಪದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಮತ್ತು ಅಭಿವೃದ್ಧಿ ಕುರಿತಾಗಿ ಚರ್ಚಿಸಲು ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕರ್ನಾಟಕ ರಾಜಕೀಯ ವ್ಯವಸ್ಥೆಗೆ ಕರಾವಳಿ ಭಾಗದ ಹಿರಿಯರ ಕೊಡುಗೆಯನ್ನು ಸ್ಮರಿಸಿ ಕರಾವಳಿ ಭಾಗದಲ್ಲಿ ಆಗಬೇಕಾದಂತಹ ಪ್ರಮುಖ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಲಾಯಿತು. ಅತೀ ಹೆಚ್ಚು ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜುಗಳನ್ನು ಹೊಂದಿದ ದಕ್ಷಿಣಕನ್ನಡ ಜಿಲ್ಲೆ ವರ್ಷಕ್ಕೆ ಸಾವಿರಾರು ತಾಂತ್ರಿಕ ಮತ್ತು ವೈದ್ಯಕೀಯ ಪದವೀಧರರನ್ನು ತಯಾರುಗೊಳಿಸಿ ಸಮಾಜಕ್ಕೆ ನೀಡುತ್ತಿದ್ದರು ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ವಿಫಲ ಅವಕಾಶಗಳಿದ್ದು ಐ ಟಿ ಪಾರ್ಕ್ ನಂತಹ ಉದ್ಯಮಶೀಲತೆಯನ್ನು ಬೆಳೆಸುವಂತಹ ಸಂಸ್ಥೆಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಯಿತು. ಅತ್ಯಂತ ಸುಂದರ ಮತ್ತು ರಮಣೀಯ ಸಮುದ್ರ ತಟಗಳನ್ನು ಹೊಂದಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವಂತೆ ಮನವಿ ಮಾಡಲಾಯಿತು.
ಜೊತೆಗೆ ಗಾರ್ಮೆಂಟ್ಸ್ ಕೈಗಾರಿಕೆಗಳ ಸ್ಥಾಪನೆಗೆ ವಿಪುಲ ಅವಕಾಶವಿದ್ದು, ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಯಿತು. ಅರಣ್ಯ ಇಲಾಖೆಯ ಸಮಸ್ಯೆಯಿಂದಾಗಿ ಜನ ಸಾಮಾನ್ಯರು ವಾಸ್ತವ್ಯವಿರುವ ಹಾಗು ಕೃಷಿ ಭೂಮಿಯ ಹಕ್ಕಿನಿಂದ ವಂಚಿತರಾಗಿದ್ದು, ಈ ಸಮಸ್ಯೆಯನ್ನು ಬಗೆ ಹರಿಸುವಂತೆ ವಿನಂತಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಖಾಲಿಯಾಗಿರುವ 60 VA ಪೋಸ್ಟ್ಗಳನ್ನು ಭರ್ತಿ ಮಾಡುವಂತೆ ತಿಳಿಸಲಾಯಿತು. ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ. ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ರಚಿಸಲಾದ ಪಶ್ಚಿಮ ವಾಹಿನಿ ಯೋಜನೆಗೆ ಅನುದಾನವನ್ನು ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ವಿನಂತಿಸಲಾಯಿತು. ಉಭಯ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಹೈಕೋರ್ಟ್ ನ ಪೀಠವನ್ನು ಕರಾವಳಿ ಭಾಗದಲ್ಲಿ ಸ್ಥಾಪಿಸುವಂತೆ ಮನವಿ ಮಾಡಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಲೆಕುಡಿಯ ಸಮಾಜದ ಬಂಧುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರ ಬದುಕನ್ನು ಸುಧಾರಿಸುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೋಸ್ಕರ ರಚಿಸಲಾಗಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನ್ಯಾಯಯುತವಾದ ಅನುದಾನವನ್ನು ಬಿಡುಗಡೆಗೊಳಿಸಿ, ಅಭಿವೃದ್ಧಿಗೆ ವೇಗ ನೀಡುವಂತೆ ವಿನಂತಿಸಲಾಯಿತು ಹಾಗೂ ಅತಿ ಮುಖ್ಯವಾಗಿ ತುಳುನಾಡಿನ ನಮ್ಮ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರ ಅತಿಹೆಚ್ಚಿನ ಗಮನವನ್ನು ಕೊಟ್ಟು ಕರಾವಳಿ ಭಾಗದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಆಗ್ರಹಿಸಲಾಯಿತು.