ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

0

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾ. 6ರಂದು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಫಾ. ಜೋಯ್ಸನ್ ಸಾಲ್ಡಾನ್ಹ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಪಾಲಿ‌ಸಿ, ತಮ್ಮ ಕನಸನ್ನು ನನಸು ಮಾಡಿ ಜೀವನದಲ್ಲಿ ಯಶಸ್ಸು ಪಡೆಯುವಂತಾಗಲಿ ಎಂದು ನುಡಿದು ಶುಭ ಹಾರೈಸಿದರು.

ಶಾಲಾ ಸಂಚಾಲಕರಾದ ಅತಿ ವಂದನೀಯ ಫಾ. ವೋಲ್ಟರ್ ಡಿಮೆಲ್ಲೋ ರವರು ವಿದ್ಯಾರ್ಥಿಗಳ ಬದುಕಿನಲ್ಲಿ ಇದೊಂದು ಮಹತ್ವದ ಘಟ್ಟವಾದ್ದರಿಂದ ಕಲಿಕೆಯ ಕಡೆಗೆ ಮಾತ್ರ ಹೆಚ್ಚಿನ ಗಮನಹರಿಸಿ ಉತ್ತಮ ಅಂಕಗಳಿಸಿದರೆ ಮುಂದಿನ ಭವಿಷ್ಯವು ಖಂಡಿತವಾಗಿಯೂ ನೀವು ಬಯಸಿದಂತೆ ಉಜ್ವಲವಾಗಿರುತ್ತದೆ ಎಂದು ನುಡಿದು ಶುಭ ಆಶೀರ್ವದಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ. ಕ್ಲಿಫರ್ಡ್ ಪಿಂಟೋರವರು ಮಾತನಾಡುತ್ತಾ ಹತ್ತನೇ ತರಗತಿಯು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹಂತವಾಗಿದೆ. ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಉತ್ತಮ ಅಂಕಗಳಿಸಿ ಶಾಲೆ ಮತ್ತು ಹೆತ್ತವರಿಗೆ ಹೆಮ್ಮೆ ತರುವಂತಾಗಲಿ ಎಂದು ನುಡಿದರು. ವಿದ್ಯಾರ್ಥಿ ಆಸ್ಟಿನ್ ಫೆರ್ನಾಂಡಿಸ್ ತಮ್ಮ ಶಾಲಾ ದಿನಗಳ ಸವಿನೆನಪುಗಳನ್ನು ಹಂಚಿಕೊಂಡರು.

ಸಹ ಶಿಕ್ಷಕಿ ಬ್ಲೆಂಡಿನ್ ರೋಡ್ರಿಗಸ್ ರವರು ವಿದ್ಯಾರ್ಥಿಗಳಿಗೆ ಶುಭನುಡಿಗಳನ್ನಾಡಿದರು. ಎಂಟನೇ ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಶುಭಾಶಯ ಗೀತೆಯನ್ನು ಹಾಡಿದರು ಮತ್ತು ನೃತ್ಯಗಳ ಮೂಲಕ ಎಲ್ಲರ ಮನರಂಜಿಸಿದರು.

ಮೌಲ್ಯಶಿಕ್ಷಣ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿದ ಹಾಗೂ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು ಮತ್ತು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯಾಗಿ ಸ್ಮರಣಿಕೆಯನ್ನು ನೀಡಲಾಯಿತು. ಶಾಲೆಯ ವಿವಿಧ ತಂಡಗಳ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ತರಗತಿವಾರು ಉನ್ನತ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ವಿಷಯವಾರು ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದ ಜೊತೆಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷರಾದ ರಮೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಫ್ರ ಸ್ವಾಗತಿಸಿ, ಜಿತೇಶ್ ವಂದಿಸಿದರು. ವಿದ್ಯಾರ್ಥಿನಿ ಪ್ರಜ್ಞ ಪಿ ವಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಪ್ರಭಾ ಗೌಡ, ಸರಿತಾ ರೊಡ್ರಿಗಸ್ ಮತ್ತು ಪ್ರೀತಾ ಡಿಸೋಜ ಸಹಕರಿಸಿದರು.

LEAVE A REPLY

Please enter your comment!
Please enter your name here