
ಬೆಳ್ತಂಗಡಿ: ಮಂಗಳೂರಿನ ಅರಣ್ಯ ಸಂಚಾರಿ ದಳದವರು ಕಾರ್ಯಾಚರಣೆ ನಡೆಸಿ ವಿವಿಧ ಜಾತಿಯ ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿದ್ದಾರೆ. ಲಾರಿಯಲ್ಲಿ ಮರ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದವರು ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟು ಎಂಬಲ್ಲಿ ಕಾರ್ಯಾಚರಣೆ ನಡೆಸಿ ಲಾರಿ ಸಹಿತ ಮರ ವಶಕ್ಕೆ ಪಡೆದುಕೊಂಡಿದ್ದಾರೆ.
ಕಿಲ್ಲೂರು ಮೂಲಕ ಮುಖ್ಯ ರಸ್ತೆಯಲ್ಲಿ ಬೆಳ್ತಂಗಡಿಯತ್ತ ಮರಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ರಸ್ತೆಯಲ್ಲಿ ಲಾರಿ ತಪಾಸಣೆ ನಡೆಸಿದ್ದಾರೆ.
ಈ ವೇಳೆ ಯಾವುದೇ ದಾಖಲೆ ಇಲ್ಲದೆ ಮರ ಸಾಗಾಟ ಮಾಡಿರುವುದು ಪತ್ತೆಯಾಗಿದೆ. ಬಳಿಕ ಮರ ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದರ. ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ದಾಸ್ತಾನು ಕಚೇರಿಗೆ ತಂದು ಮಹಜರು ನಡೆಸಲಾಗಿದ್ದು ಲಾರಿಯಲ್ಲಿ ವಿವಿಧ ಜಾತಿಯ 11.270 ಘನ ಮೀಟರ್ ಮರ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯ 15 ಲಕ್ಷ ಎಂದು ಅಂದಾಜಿಸಲಾಗಿದೆ.
ಲಾರಿ ಚಾಲಕ ಮೂಡುಕೋಡಿ ಗ್ರಾಮದ ನಿವಾಸಿ ಮೊಹಮ್ಮದ್ ಅವರ ಮಗ ಸಿದ್ದಿಕ್ ವಿರುದ್ಧ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಮಂಗಳೂರು ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೂಜಾರಿ ಪ್ರಕರಣ ದಾಖಲಿಸಿದ್ದಾರೆ.