ಬೆಳ್ತಂಗಡಿ: ನಿವೇಶನಗಳ ಬಿ ಖಾತೆಯಿಂದಾಗಿ ಜನರಿಗೆ ಆಗುತ್ತಿರುವ ತೊಂದರೆಗಳ ವಿಚಾರವಾಗಿ ವಿಧಾನ ಪರಿಷತ್ ನಲ್ಲಿ ಸದಸ್ಯ ಪ್ರತಾಪಸಿಂಹ ನಾಯಕ್ ಎತ್ತಿರುವ ಪ್ರಶ್ನೆಗಳಿಗೆ ಸಂಬಂಧ ಪಟ್ಟ ಸಚಿವರು ಸಮರ್ಪಕ ಉತ್ತರ ನೀಡದೆ ಇದ್ದುದರಿಂದ ನಾಯಕ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ಬಿ. ಖಾತಾ ಯೋಜನೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದೆ. ಸರಕಾರಕ್ಕೆ ಇದರಿಂದ ತೆರಿಗೆ ಬಂದಿದೆಯೇ ಹೊರತು ಜನಸಾಮಾನ್ಯರಿಗೇನೂ ಪ್ರಯೋಜನವಾಗಿಲ್ಲ. ಯಾವುದೇ ಪರವಾನಿಗೆಗೆ, ಮಾರಾಟಕ್ಕೆ, ಸಾಲ ತೆಗೆದುಕೊಳ್ಳುವುದಕ್ಕೆ, ಮನೆ ಕಟ್ಟುವುದಕ್ಕೆ ಸರಕಾರ ನೀಡಿರುವ ಬಿ ಖಾತೆಯಿಂದ ಯಾವುದೇ ಪ್ರಯೋಜನವಿಲ್ಲ. ಸಮಸ್ಯೆಗೆ ಸರಕಾರ ಉತ್ತರ ಹುಡುಕುವುದು ಬಿಟ್ಟು ಕೇವಲ ತೆರಿಗೆ ಸಂಗ್ರಹಕ್ಕೆ ಮಾತ್ರ ಹೊರಟಿದೆ.
ಈಗ ಸರಕಾರ ಆರ್ಥಿಕವಾಗಿ ಹಿಂದುಳಿದಿದೆ. ಹೀಗಾಗಿ ಸೇಲ್ ಡೀಡ್ ಗೆ ವ್ಯವಸ್ಥೆ ಆದರೆ ಸರಕಾರಕ್ಕೆ ಆದಾಯಬರುತ್ತದೆ. ಅಲ್ಲದೆ ಇದನ್ನು ಮೂಡಾಕ್ಕೆ ಕೊಟ್ಟು ತೊಂದರೆಯಾಗಿದೆ. ಯಾಕೆಂದರೆ ಅಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಕನಿಷ್ಠ ಪಕ್ಷ ವಿನ್ಯಾಸ ನಕ್ಷೆಯನ್ನಾದರೂ ನೀಡಿದರೆ ಮನೆಕಟ್ಟಲು ಅವಕಾಶವಾಗುತ್ತದೆ. ಬಿ ಖಾತೆಯೆಂಬುದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದರು.
ಇದಕ್ಕುತ್ತರಿಸಿದ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಬಿ. ಖಾತಾ ಎಂಬುದು ಸರಕಾರದ ಐತಿಹಾಸಿಕ ನಿರ್ಧಾರ. ಜನರಲ್ಲಿ ಯಾವುದೇ ದಾಖಲೆಗಳು ಇರಲಿಲ್ಲ. ಇದೀಗ ಜನರಿಗೆ ದಾಖಲೆ ಸಿಕ್ಕಿದೆ. 40 ವರ್ಷದಿಂದ ಆಗದ ತೀರ್ಮಾನ ಇದಾಗಿದೆ. ಪ್ರತಾಪಸಿಂಹ ನಾಯಕರ ಸಲಹೆ ಸ್ವೀಕರಿಸಿ ಚರ್ಚಿಸಲಾಗುವುದು. ಈ ಮಧ್ಯೆ ಇನ್ನೊರ್ವ ಸಚಿವ ಉತ್ತರಿಸಿ 55 ಲಕ್ಷ ಜನರಿಗೆ ಪ್ರಯೋಜನವಾಗಿದೆ.
ಮಾನವೀಯತೆಯ ದೃಷ್ಟಿಯಿಂದ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದಾಗ ನಾಯಕ್ ಅವರು, ದಾಖಲೆಗಳೇ ಇರಲ್ಲಿಲ್ಲ ಎನ್ನುವುದು ಸರಿಯಲ್ಲ. ಬೆಂಗಳೂರನ್ನು ಮನಸ್ಸಿನಲ್ಲಿಟ್ಟುಕೊಂಡು ಕಾನೂನುಗಳನ್ನು ತರಬೇಡಿ. ಬಿ ಖಾತಾದಿಂದ ಡೋರ್ ನಂ. ಸಿಕ್ಕಿದೆ. ಅದನ್ನು ಇಟ್ಟುಕೊಂಡು ಏನು ಮಾಡುವುದು? ಕನಿಷ್ಠ ಫಾರ್ಮ್ ನಂ. 3 ಕೊಡುವ ವ್ಯವಸ್ಥೆಯನ್ನಾದರೂ ಮಾಡಿ ಎಂದರು.