ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಟ್ರಸ್ಟ್ ವತಿಯಿಂದ “ಮನೆ ಮನೆಗೆ ಗಂಗಾಜಲ”

0

ಬೆಳ್ತಂಗಡಿ: ನಾವೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗ್ರಾಮದ ಮನೆ ಮನೆಗೆ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಿಂದ ತಂದಂತಹ ಗಂಗಾಜಲವನ್ನು ವಿತರಣೆ ಮಾಡುವ ಕಾರ್ಯಕ್ರಮವು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ನಡೆಸಲಾಯಿತು.

ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ 144 ವರ್ಷ ಗಳಿಗೊಮ್ಮೆ ನಡೆಯುವ ಮಹಾ ಪೂರ್ಣ ಕುಂಭಮೇಳದಲ್ಲಿ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಭಕ್ತರು ತ್ರಿವೇಣಿ ಸಂಗಮದಲ್ಲಿ ವಿಷ್ಣು ಸಹಸ್ರನಾಮ ಪಠಣ ಮಾಡಿ ಪವಿತ್ರ ತೀರ್ಥ ಸ್ನಾನ ಮಾಡಿ ತಂದಂತಹ ಪವಿತ್ರ ಗಂಗಾಜಲವನ್ನು ಫೆ. 28ರಂದು ದೇವಸ್ಥಾನದ ಪ್ರಧಾನ ಅರ್ಚಕ ದಿನೇಶ್ ಭಟ್ ಇವರ ಪೌರೋಹಿತ್ಯದಲ್ಲಿ ಶ್ರೀ ಗೋಪಾಲಕೃಷ್ಣ ದೇವರಿಗೆ ರಂಗಪೂಜೆ ನೆರವೇರಿಸಿ ಗಂಗಾಜಲಕ್ಕೆ ಪೂಜೆ ಹಾಗೂ ಆರತಿಯನ್ನು ಮಾಡಿ ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಿ ಭಕ್ತರಿಗೆ ಗಂಗಾಜಲ ತೀರ್ಥವನ್ನು ವಿತರಿಸಿದರು.

ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷ ಹರೀಶ್ ಸಾಲ್ಯಾನ್, ಪೂರ್ವಧ್ಯಕ್ಷ ಎ. ಬಿ. ಉಮೇಶ್ ಅತ್ಯಡ್ಕ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದರ್ಣಪ್ಪ ಮೂಲ್ಯ, ಸನ್ಮಾನ್ಯ ಎಸ್. ಎನ್. ಭಟ್ ಹಾಗೂ
ಟ್ರಸ್ಟ್ ನ ಸರ್ವ ಸದಸ್ಯರು, ಪಾಲ್ಗೊಂಡರು.

ದೇವಸ್ಥಾನದ ಜಾತ್ರಾ ಮಹೋತ್ಸವದ ಅಧ್ಯಕ್ಷ ಪ್ರದೀಪ್ ಮಾತಾಡಿ ಗಂಗೆ ಯಾವತ್ತೂ ಅಪವಿತ್ರ ಆಗಲು ಸಾಧ್ಯವೇ ಇಲ್ಲ, ಗಂಗೆಯಲ್ಲಿ ಮಿಂದೆದ್ದರೆ ನಮ್ಮ ಪಾಪ ಕರ್ಮಗಳು ನಾಶವಾಗುತ್ತದೆ ಅನ್ನುವ ನಂಬಿಕೆಯನ್ನು ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿದ್ದಾರೆ. ಅಲ್ಲದೆ ವೈಜ್ಞಾನಿಕವಾಗಿಯೂ ಗಂಗಾ ನದಿಯ ನೀರಿನಲ್ಲಿ ಹತ್ತಾರು ಖಾಯಿಲೆಯನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿದೆ ಅನ್ನುವುದು ಧೃಡವಾಗಿದೆ. ಈ ಎಲ್ಲಾ ಕಾರಣಕ್ಕಾಗಿ ಗಂಗೆ ಪವಿತ್ರಳು, ಈ ಗಂಗಾ ತೀರ್ಥವನ್ನು ನಮ್ಮ ಮನೆಗಳಲ್ಲಿ ದೇವತಾ ಕಾರ್ಯಕ್ರಮಗಳಾದಾಗ ಬಳಸಬಹುದು ಹಾಗೂ ಈ ನೀರನ್ನು ಅನೇಕ ವರ್ಷಗಳ ತನಕ ಇಟ್ಟರೂ ಮಲಿನ ಆಗುವುದಿಲ್ಲ ಎನ್ನುವಂತಹ ಮಾಹಿತಿಯನ್ನು ನೀಡಿದರು.

ಕುಂಭಮೇಳದಲ್ಲಿ ಭಾಗವಹಿಸಿದ ಸುರೇಶ್ ಗೋಳಿದಡಿ ಕುಂಭಮೇಳ ಅತ್ಯದ್ಭುತ ಕಾರ್ಯಕ್ರಮ, ಇಲ್ಲಿ ಕೋಟ್ಯಂತರ ಜನರು ಸ್ನಾನ ಮಾಡಿದರೂ ಅಲ್ಲಿನ ನೀರು ಸ್ವಲ್ಪನೂ ಮಲಿನವಾಗಿಲ್ಲ. ಕುಂಭಮೇಳದ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಅಲ್ಲಿನ ಯೋಗಿ ಆದಿತ್ಯನಾಥ್ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ನಾವು ಎಷ್ಟು ಧನ್ಯವಾದವನ್ನು ಹೇಳಿದರೂ ಸಾಕಾಗಲಾರದು. ಅಷ್ಟು ಅಚ್ಚುಕಟ್ಟಾಗಿ ಈ ವ್ಯವಸ್ಥೆಯನ್ನು ಮಾಡಿದ್ದಾರೆ ಅನ್ನುವ ತನ್ನ ಅನುಭವದ ಮಾತನ್ನು ಹೇಳಿದರು. ಕುಂಭಮೇಳದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತರು ಉಪಸ್ಥಿತರಿದ್ದರು. ನಾವೂರು ಗ್ರಾಮದ ಪ್ರತಿ ಮನೆಯ ಭಕ್ತರು ಹಾಗೂ ನೆರೆಕರೆಯ ಗ್ರಾಮದ ಭಕ್ತರೂ ಪಾಲ್ಗೊಂಡು ಗಂಗಾಜಲವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here