ಅಕ್ರಮ ಗೂಡಂಗಡಿಗಳ ‘ಫುಲ್’ಜಾರ್ ಹಾವಳಿ – ಧರ್ಮಸ್ಥಳ-ಪೆರಿಯಶಾಂತಿ ರಾ. ಹೆದ್ದಾರಿಯಲ್ಲಿ ಅಕ್ರಮ ಸೋಡಾ ಅಂಗಡಿಗಳದ್ದೇ ಕಾರುಬಾರು- ತೆರವುಗೊಳಿಸಲು ಒತ್ತಾಯ

0

ರೂಪೇಶ್ ಗೌಡ ಶಿಬಾಜೆ
ಬೆಳ್ತಂಗಡಿ: ಧರ್ಮಸ್ಥಳದಿಂದ ಪೆರಿಯಶಾಂತಿವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿಕೊಡೆಗಳಂತೆ ತಲೆಎತ್ತಿ ನಿಂತಿರುವ ಫುಲ್‌ಜಾರ್ ಸೋಡಾ ಅಂಗಡಿಗಳ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಈ ಬಗ್ಗೆ ಸಾರ್ವಜನಿಕ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಇಲ್ಲಿದ್ದ ಅಕ್ರಮ ಫುಲ್‌ಜಾರ್ ಸೋಡಾ ಅಂಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಸೋಡಾ ಅಂಗಡಿಗಳು ಒಂದೊಂದಾಗಿಯೇ ತೆರೆದುಕೊಳ್ಳುತ್ತಿದ್ದು, ಅರಣ್ಯ ಪರಿಸರಕ್ಕೆ ಹಾನಿ ಮಾಡುವ ಜತೆಗೆ ಅಪಘಾತ ಸಂಖ್ಯೆ ಹೆಚ್ಚುವ ಬಗ್ಗೆಯೂ ಸಾರ್ವಜನಿಕರು ಆತಂಕ ಹೊರಹಾಕುತ್ತಿದ್ದಾರೆ.
ಈ ಬಗ್ಗೆ ಕೊಕ್ಕಡ ಗ್ರಾಮಸ್ಥ ರಾಜೇಶ್ ಕೆ. ಎಂಬವರು ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಎಕ್ಸ್‌ಕ್ಯೂಟಿವ್ ಎಂಜಿನಿಯರ್‌ಗೆ ದೂರು ಸಲ್ಲಿಸಿದ್ದು, ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಅನಾನಸ್, ಜೋಳ ಮತ್ತು ಫುಲ್‌ಜಾರ್ ಎಂದು ತಮಗಿಷ್ಟ ಬಂದ ಹೆಸರಿನಲ್ಲಿ ಜ್ಯೂಸ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಕಲುಷಿತ ನೀರು ಬಳಕೆ, ಜ್ಯೂಸ್ ರುಚಿಯಾಗಲು ಬಳಸುವ ರಾಸಾಯನಿಕ ಪುಡಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಜನರ ಆರೋಗ್ಯಕ್ಕೂ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿಯಮಗಳ ವಿಚಾರ ಬಂದರೆ- ಧರ್ಮಸ್ಥಳದಿಂದ ಪೆರಿಯಶಾಂತಿ ತುಂಬಾ ಕಿರಿದಾದ ರಸ್ತೆಯಾಗಿದ್ದು, ರಜಾದಿನದಂದು ಈ ರಸ್ತೆಯಲ್ಲಿ ೨೫೦೦ಕ್ಕಿಂತ ಹೆಚ್ಚಿನ ವಾಹನಗಳು ಸಂಚರಿಸುತ್ತಿರುತ್ತವೆ. ಇವುಗಳ ನಡುವೆ ಫುಲ್‌ಜಾರ್ ಸೋಡಾ ಅಂಗಡಿಗಳಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ರಸ್ತೆ ಬದಿಯ ಚರಂಡಿಯನ್ನು ಮುಚ್ಚಿ ಹಾಕಿ ಅದರ ಮೇಲೆ ಅಂಗಡಿಯನ್ನು ನಿರ್ಮಿಸಿರುತ್ತಾರೆ ಎಂದು ದೂರಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ಬರುತ್ತದೆ. ರಸ್ತೆ ತನಕ ಅಂಗಡಿ ವಿಸ್ತರಿಸಿರುವುದರಿಂದ ಪ್ರವಾಸಿಗರು ರಸ್ತೆಯಲ್ಲಿ ವಾಹನ ನಿಲ್ಲಿಸಿ ಮೋಜು ಮಸ್ತಿ ಮಾಡುತ್ತಾರೆ. ಅಂಗಡಿಯ ಯುವಕರು ಹೆದ್ದಾರಿಯಲ್ಲಿ ನಿಂತು ಬಾವುಟ ಹಾಗೂ ಇತರ ನಾಮಫಲಕದಿಂದ ಗ್ರಾಹಕರ ಗಮನ ಸೆಳೆಯುವ ಕೆಲಸ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗಿ ಹಲವು ಅಪಘಾತಗಳು ಸಂಭವಿಸಿವೆ ಎಂದು ವಿವರಿಸಲಾಗಿದೆ. ಇಲ್ಲಿ ನಡೆದ ಅಪಘಾತಗಳಲ್ಲಿ ನಾಲ್ಕೈದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಂಚರಿಸುವ ವಾಹನವು ತಮ್ಮ ಅಂಗಡಿಯ ಮುಂದೆ ನಿಲ್ಲಿಸಬೇಕು ಮತ್ತು ವೇಗ ಕಡಿತಗೊಳಿಸಿ, ವ್ಯಾಪಾರ ಮಾಡಿಸಬೇಕು ಎಂದು ರಸ್ತೆ ಮೇಲೆ ಪ್ರತಿ ದಿನ ಡೀಸೆಲ್ ಹಾಕಿ ಗುಂಡಿ ಬೀಳುವಂತೆ ಮಾಡಲಾಗುತ್ತದೆ. ಇದೊಂದು ಹಣ ಮಾಡುವ ಕೆಟ್ಟ ಕೆಲಸವಾಗಿದ್ದು, ಕಾನೂನು ಉಲ್ಲಂಘನೆಗೆ ಶಿಕ್ಷೆ ಆಗಲೇಬೇಕು ಎಂದು ರಾಜೇಶ್ ಆಗ್ರಹಿಸಿದ್ದಾರೆ.

ಅನುಮತಿಯೂ ಇಲ್ಲ, ತೆರಿಗೆಯೂ ಇಲ್ಲ!: ಕಳೆದ 6 ವರ್ಷದಿಂದ ಈ ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಮೊದಲು ಹಣ್ಣಿನ ಮಾರಾಟದಿಂದ ಪ್ರಾರಂಭ ಮಾಡಿ, ನಂತರ ಹೊಸ ಹೊಸ ಹೆಸರಿನಲ್ಲಿ ತಾವೇ ಜ್ಯೂಸ್ ಕಂಡುಹಿಡಿದು ಅದನ್ನು ಫುಲ್‌ಜಾರ್, ಮಟ್ಕಾ ಸೋಡಾ ಸೋಡಾ, ಬಂಬೂ ಸೋಡಾ… ಹೀಗೆ ಹಲವು ಬಗೆಯ ಕಳಪೆ ಮಟ್ಟದ ಜ್ಯೂಸ್ ತಯಾರಿಸಿ, ಅದಕ್ಕೆ ಕಲರ್ ಪೌಡರ್ ಮತ್ತು ಟೇಸ್ಟಿಂಗ್ ಪೌಡರ್, ಯೀಸ್ಟ್‌ಗಳನ್ನು ಬಳಸಲಾಗುತ್ತಿದೆ. ಇದಕ್ಕೆ ಆರೋಗ್ಯ ಇಲಾಖೆ ಅಥವಾ ಆಹಾರ ಇಲಾಖೆಯಿಂದ ರಾಷ್ಟ್ರೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅನುಮತಿಯೂ ಇಲ್ಲ. ಪ್ರತಿ ಜ್ಯೂಸ್‌ಗೆ ಖರ್ಚು 10 ರೂ. ಆಗಿದ್ದರೂ, ಅದನ್ನು ೫೦ರಿಂದ 100 ರೂಗೆ ಮಾರಾಟ ಮಾಡುತ್ತಾರೆ. ರೂ. 40ರಿಂದ 80 ಲಾಭ ಇದ್ದರೂ ಸರ್ಕಾರಕ್ಕೆ ತೆರಿಗೆ ಕಟ್ಟುವುದಿಲ್ಲ. ಜಾಗದ ಬಾಡಿಗೆ ಇಲ್ಲ. ಕರೆಂಟ್ ಬಿಲ್, ನೀರಿನ ಬಿಲ್ ಇಲ್ಲದೆ, ಹಣ ಮಾಡುತ್ತಿದ್ದಾರೆ ಎಂದು ರಾಜೇಶ್ ದೂರಿದ್ದಾರೆ.

ವರ್ತಕರಿಗೆ ನಷ್ಟ: ಸಾಲ ಮಾಡಿ ಪಂಚಾಯತ್‌ಗೆ ತೆರಿಗೆ ಕಟ್ಟಿ, ಆರೋಗ್ಯ ಇಲಾಖೆಯ ಒಪ್ಪಿಗೆ ಪಡೆದು ಬಾಡಿಗೆ ಕಟ್ಟಿ, ವಿದ್ಯುತ್ ಬಿಲ್ ಕಟ್ಟಿ ಬದುಕುವ ವರ್ತಕರಿಗೆ ವ್ಯಾಪಾರವಿಲ್ಲದಂತಾಗಿದೆ. ಎಷ್ಟೋ ವರ್ತಕರು ತಮ್ಮ ಅಂಗಡಿಯ ವ್ಯಾಪಾರ ಇಲ್ಲದೆ ಮುಚ್ಚಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಫುಲ್‌ಜಾರ್ ಸೋಡಾ ಹಾವಳಿ. ಕೆಲ ಫುಲ್ ಜಾರ್ ಅಂಗಡಿ ತಿಂಗಳಿಗೆ ರೂ ೫೦ ಸಾವಿರಕ್ಕಿಂತಲೂ ಹೆಚ್ಚು ಉಳಿತಾಯ ಮಾಡುತ್ತಿದ್ದರೆ, ಕೆಲವರು 2 ಲಕ್ಷ ಮಾಡುತ್ತಿದ್ದಾರೆ. ಆದರೆ ಇವರು ಸರ್ಕಾರಕ್ಕೇನು ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ.

“ಮಾನವೀಯ ನೆಲೆಯಲ್ಲಿ ನೋಡಿದಾಗ, ಜೀವನ ನಿರ್ವಹಣೆಗಾಗಿ ಹೆದ್ದಾರಿ ಬದಿಯಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಂಡಿರುವುದು ಹೌದು. ಆದರೆ, ಇದಕ್ಕೆ ಯಾವುದೇ ಕಾನೂನಾತ್ಮಕ ಅನುಮತಿ ಇಲ್ಲ. ಅಂಗಡಿಗಳಿಂದ ವಾಹನ ಓಡಾಟಕ್ಕೆ ತೊಂದರೆಯಾಗುತ್ತಿರುವುದು ಕೂಡ ಹೌದು” – ಯೋಗೀಶ್ ಆಳಂಬಿಲ, ಮಾಜಿ ಅಧ್ಯಕ್ಷರು, ಕೊಕ್ಕಡ ಪಂಚಾಯತ್

“ಫುಲ್‌ಜಾರ್ ಸೋಡಾ ಅಂಗಡಿಗಳಿಗೆ ಪಂಚಾಯತ್ ಅನುಮತಿ ಇಲ್ಲ ಮತ್ತು ಈ ಅಂಗಡಿಗಳನ್ನು ನಾವು ಪ್ರೋತ್ಸಾಹಿಸುವುದೂ ಇಲ್ಲ. ಹಿಂದೊಮ್ಮೆ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ಮತ್ತೆ ಅಂಗಡಿ ಕಟ್ಟಿಕೊಂಡಿದ್ದಾರೆ. ಇವುಗಳಿಂದ ಉಂಟಾಗುವ ತೊಂದರೆಗಳಿಗೆ ಪಂಚಾಯತ್ ಜವಾಬ್ದಾರಿ ಆಗುವುದಿಲ್ಲ ಎಂದು ಹಿಂದಿನ ಆಡಳಿತ ಸಮಿತಿ ತೀರ್ಮಾನ ಮಾಡಿತ್ತು” – ಶ್ಯಾಮಲಾ, ನಿಡ್ಲೆ ಪಂಚಾಯತ್ ಅಧ್ಯಕ್ಷರು

“ಉಜಿರೆ-ಪೆರಿಯಶಾಂತಿ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಅವರು ಕ್ರಮ ಕೈಗೊಳ್ಳಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ನಾವು ಈಗಾಗಲೇ ಅಂಗಡಿಯವರಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಅರಣ್ಯದ ಕಡೆ ಎಸೆಯಬೇಡಿ ಎಂದು ಎಚ್ಚರಿಕೆ ನೀಡಿದ್ದೇವೆ” – ಶಿವಾನಂದ ಆಚಾರ್ಯ, ಕೊಕ್ಕಡ ವಲಯ ಉಪ-ಅರಣ್ಯಾಧಿಕಾರಿ

ಈ ಅನಧಿಕೃತ ಗೂಡಂಗಡಿಗಳಿಗೆ ಪಂಚಾಯತ್‌ನ ಅನುಮತಿ ಇರುವುದಿಲ್ಲ. ೨೦೨೨ರಲ್ಲಿ ಒಮ್ಮೆ ಎಲ್ಲಾ ಗೂಡಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯವರು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳೆದ ನವೆಂಬರ್ ತಿಂಗಳಲ್ಲೇ ಈ ಬಗ್ಗೆ ಪತ್ರ ಬರೆಯಲಾಗಿತ್ತು. – ದಿನೇಶ್ ಎಂ. ನಿಡ್ಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಎಲ್ಲರಿಗೂ ಕಾನೂನು ಅನ್ವಯವಾಗಲಿ: “ಸರ್ಕಾರಕ್ಕೆ ದೂರು ನೀಡಿದರೆ ಜಾತಿ, ಧರ್ಮ, ರಾಜಕೀಯ ಮಾತುಗಳು ಬರುತ್ತವೆ. ಕಾನೂನಿನ ಎದುರು ಎಲ್ಲರೂ ಒಂದೇ. ಎಲ್ಲಾ ವ್ಯವಹಾರಗಳು ಕಾನೂನಿನ ವ್ಯಾಪ್ತಿಗೆ ಬರಲಿ. ಕಾನೂನು ಉಲ್ಲಂಘನೆ ಮಾಡಿದ ವ್ಯವಹಾರವು ಮುಂದಿನ ದಿನಗಳಲ್ಲಿ ಗಲಾಟೆ, ಕಳ್ಳತನಕ್ಕೆ ದಾರಿ ಮಾಡುತ್ತದೆ. ಆದ್ದರಿಂದ ದಯವಿಟ್ಟು ಇವೆಲ್ಲವನ್ನೂ ತೆರವುಗೊಳಿಸಿ. ಹೆದ್ದಾರಿ ಉದ್ದಕ್ಕೂ ಕಸದ ರಾಶಿ, ಹೆಚ್ಚಿನ ಕಸವನ್ನು ಅರಣ್ಯದ ಒಳಗೆ ಎಸೆದು ಹೋಗುತ್ತಾರೆ. ಕಾಡು ಪ್ರಾಣಿಗಳಿಗೆ ತೊಂದರೆಯಾಗುತ್ತಿರುವುದಲ್ಲದೆ, ವಿವಿಧ ಪ್ರಾಣಿ ಮತ್ತು ಕೋತಿಗಳು ಅಪಘಾತಕ್ಕೀಡಾಗಿವೆ. ಸರ್ಕಾರದ ಮೀಸಲು ಅರಣ್ಯ ಪ್ರದೇಶದಲ್ಲಿ ಇವುಗಳಿರುವುದು ವಿಪರ್ಯಾಸ. – ರಾಜೇಶ್ ಕೆ., ಕೊಕ್ಕಡ ಗ್ರಾಮಸ್ಥ

LEAVE A REPLY

Please enter your comment!
Please enter your name here