ಸಾಮಾಜಿಕ ಜಾಲತಾಣದಲ್ಲಿ ಬೇತಾಳದಂತೆ ಕಾಡುತ್ತಿರುವ ಮಾಲಾಡಿಯ ಪ್ರೇತಕ್ಕೆ ಸದ್ಯ ಮೋಕ್ಷ ಸಿಕ್ಕಿದೆ. ಮಾಲಾಡಿಯ ಮನೆಯೊಂದರಲ್ಲಿ ಸಂಜೆ ೫ ಗಂಟೆಯ ಬಳಿಕ ಪ್ರೇತ ಉಪದ್ರವ ಇದೆ, ನೂರಾರು ಕುತೂಹಲಿಗಳು ಕುಗ್ರಾಮದ ಮನೆಗೆ ಭೇಟಿ ನೀಡುತ್ತಿದ್ದಾರೆ ಎಂಬ ಮಾಹಿತಿ ಅರಸಿ ಹೋದ ಸುದ್ದಿಯ ಕುಶಾಗ್ರಮತಿ ಜರ್ನಲಿಸ್ಟ್ ದಾಮೋದರ ದೊಂಡೋಲೆ ತಂಡ, ಮನೆಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ಇದ್ದದ್ದು ಇದ್ದ ಹಾಗೆ ಚಿತ್ರಿಸಿತು. ಮಾತ್ರವಲ್ಲದೆ ಅಕ್ಕಪಕ್ಕದವರ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಪಕ್ಕಾ ವರದಿ ಮಾಡಿದ್ದರು.
ಕುತೂಹಲಕ್ಕೆ ಬರುತ್ತಿದ್ದ ಜನರಲ್ಲಿ “ದಮ್ ಇದ್ದರೆ ಈಗ ಬಾ” ಎಂದು ಪ್ರೇತಕ್ಕೆ ಸವಾಲ್ ಹಾಕುತ್ತ ಇದ್ದವರು, ತೂರಾಡುತ್ತಿದ್ದವರು, ದೈವ ಭಕ್ತರು, ಶೋಧಕರು ಎಲ್ಲರೂ ಇದ್ದರು. ಅದರೆ ಪ್ರೇತದ ಅನುಭವ ಆಗುತ್ತಾ ಇದ್ದದ್ದು ಮನೆಯವರಿಗೆ ಮಾತ್ರ. ವರದಿಯಿಂದಾಗಿ ಮನೆಯವರಿಗೆ ಸ್ವಲ್ಪ ಪ್ರಯೋಜನವಾಗಲಿ (ಹಣಕಾಸು) ಎಂದು ಸಲಹೆ ನೀಡುವವರೂ, ಕೈ ಮುಗಿಯುವ ಆಸ್ತಿಕರು, ಇದೊಂದು ಕಟ್ಟು ಕಥೆ ಎನ್ನುವ ಪ್ರಾಜ್ಞರು ಕೂಡ ಅಲ್ಲಿದ್ದರು.
ಸುದ್ದಿ ತಿಳಿದು ಬಂದ ರಾಜ್ಯಮಟ್ಟದ ಸುದ್ದಿ ವಾಹಿನಿಗಳಿಗೂ ಕಂಡದ್ದು ಇದೇ. ಮಾಧ್ಯಮಗಳಲ್ಲಿ ಪ್ರೇತಬಾಧೆ ಪ್ರಸಾರವಾದ ಬಳಿಕ ಬಂದ ಪರ- ವಿರೊಧ ಅಭಿಪ್ರಾಯಗಳು ಮಾತ್ರ ಅಸಂಖ್ಯ. ಕುಲೆ ಕುಲೆ ಎಂದು ಜಾಲತಾಣದಲ್ಲಿ ಹೊಡೆದಾಡಿಕೊಂಡವರು, ಕೆಟ್ಟ ಬೈಗುಳ ವಿನಿಮಯ ಮಾಡಿಕೊಂಡವರು ಅದೆಷ್ಟೋ..!
ಪ್ರೇತಗಳಿಗಿಂತ ಹೆಚ್ಚಾಗಿ ಜಾಲತಾಣಗಳಲ್ಲಿ ಮಾನವ ವಿಕ್ಷಿಪ್ತ ಮನಸ್ಸಿನ ಭಾವನೆಗಳು ಕಾಮೆಂಟ್‌ಗಳ ರೂಪದಲ್ಲಿ ಇರಿದವು. ಮೊಬೈಲ್‌ನಲ್ಲಿ ಮೂಡಿದ ಸ್ತ್ರೀ ಪ್ರೇತ ತುಳುನಾಡಿನಲ್ಲಿ ಮಾತ್ರವಲ್ಲದೆ ರಾಜ್ಯ, ದೇಶ, ವಿದೇಶಗಳಲ್ಲಿರುವ ಆಸ್ತಿಕರಿಗೆ ಬಿಡಿಸಲಾರದ ಒಗಟಾಯಿತು. ಕಗ್ಗಂಟನ್ನು ಬೇಧಿಸಲು ಬರುವೆ ಎಂದ ಹುಲಿಕಲ್ ನಟರಾಜ್ ಅವರ ಒಂದೇ ಮಾತಿನ ಏಟಿಗೆ ಮನೆಯವರು “ಪ್ರೇತದ ಬಾಧೆ ಇಲ್ಲ. ಅವರು ಬರುವುದು ಬೇಡ, ಕಳೆದು ಹೋದ ಚಿನ್ನವೂ ಸಿಕ್ಕಿದೆ” ಎಂದು ವೀಡಿಯೋ ಮಾಡಿ ಹೇಳಿಕೆ ನೀಡಿದರು.
ಮೂಲ ನಂಬಿಕೆಯೊಂದಿಗೆ ಈ ಮೂಢ ನಂಬಿಕೆ ಜೋಡಿಸಿಕೊಂಡ ಕೆಲವು ಧರ್ಮವ್ಯಾಪಾರಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದರು. ಸುಳ್ಳು ಊರಿಡೀ ಸುತ್ತಾಡಿದ ಮೇಲೆ ಕೊನೆಗೆ ಸತ್ಯ ಪ್ರತ್ಯಕ್ಷವಾದರೂ ನಕಲಿ ಪ್ರೇತದ ಜತೆ ದೈವವನ್ನು ಜೋಡಿಸಿ ಸುಳ್ಳು ಹಬ್ಬಿಸಿದ್ದರಿಂದ ಆಸ್ತಿಕ ವರ್ಗ ಸತ್ಯವನ್ನು ಮನಃಪೂರ್ತಿ ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಮಾಲಾಡಿಯ ಪಂಚಾಯತ್ ಅಧ್ಯಕ್ಷ ಪುನೀತ್ ಅವರೇ ಈ ಕುರಿತು ಮಾಧ್ಯಮದ ಮುಂದೆ ಸ್ಪಷನೆ ನೀಡಿದರು. ಈ ಪ್ರೇತ ಮೊಬೈಲ್‌ನಲ್ಲಿ ಸೃಷ್ಟಿಸಲಾಗಿದೆ. ಇದರಿಂದಾಗಿ ನಮ್ಮ ಊರಿನವರಿಗೆ ಸಮಸ್ಯೆಯಾಗಿದೆ. ಮನೆಯವರ ಪರವಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದರು. ಸತ್ಯ ಹೊರಬರುವಲ್ಲಿ ಮಾಧ್ಯಮಗಳ ಪಾತ್ರದ ಕುರಿತು ಶ್ಲಾಸಿದ್ದರು.
ಹಾಗಾದರೆ ಅಲ್ಲಿ ನಿಜವಾಗಿ ನಡೆದದ್ದಾರೂ ಏನು? ಬೆಳ್ತಂಗಡಿಯ ಮಾಲಾಡಿ ಗ್ರಾಮದ ಕೊಲ್ಪೆದಬೈಲು ಎಂಬಲ್ಲಿಯ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಇತ್ತೀಚೆಗೆ ಪ್ರತಿದಿನ ರಾತ್ರಿ ನೂರಾರು ಮಂದಿ ಕುತೂಹಲಿಗರು ಜಮಾಯಿಸುತ್ತಿದ್ದರು. ಮನೆಯಲ್ಲಿ ಸಂಜೆ ೫ ಗಂಟೆಯ ಬಳಿಕ ಕತ್ತಲಾಗುತ್ತಿದ್ದಂತೆ ಪ್ರೇತ ಕಾಟ ಆರಂಭವಾಗುತ್ತದೆ. ಮನೆಯಲ್ಲಿರುವ ಬಟ್ಟೆಗೆ ಬೆಂಕಿ ಹತ್ತಿಕೊಳ್ಳುವುದು, ಅಡುಗೆ ಮನೆ ಹಾಗೂ ಮನೆಯಲ್ಲಿರುವ ಪಾತ್ರೆ, ಬಟ್ಟಲು ಲೋಟ, ಚೊಂಬು, ಸೇರಿದಂತೆ ವಸ್ತುಗಳನ್ನು ಎಸೆಯುವುದು, ಮನೆಯ ವಿದ್ಯುತ್ ಲೈಟ್‌ಗಳು ಒಮ್ಮೆಗೆ ಆಫ್-ಆನ್ ಆಗುವುದು, ಮನೆಯ ಒಳಗಿದ್ದ ವಸ್ತುಗಳು ಅತ್ತಿಂದಿತ್ತ ಚಲಿಸುವುದು, ಉಮೇಶರ ಪತ್ನಿಗೆ ಉಸಿರುಕಟ್ಟುವುದು ಉಂಟಾಗುತ್ತಿತ್ತು. ಜ್ಯೋತಿಷಿಗಳು ಕೊಟ್ಟ ಪ್ರಸಾದವನ್ನು ಮನೆಗೆ ತಂದಿಟ್ಟಾಗ ಮಾಯವಾಗುತ್ತಿತ್ತು. ಪತ್ನಿ, ಮಕ್ಕಳಿಗೆ ನೂಲು ಕಟ್ಟಿದರೆ ಅದು ಕೂಡಾ ಮಾಯ!, ಧರಿಸಿದ ಬಂಗಾರ, ಮನೆಯಲ್ಲಿದ್ದ ಬಂಗಾರವೂ ಮಾಯವಾಗಿತ್ತು! ಹುಡುಗಿ ಮೊಬೈಲ್‌ನಲ್ಲಿ ಪ್ರೇತದ ಚಿತ್ರ ತೆಗೆದು ಮಾಧ್ಯಮದವರಿಗೂ, ಕುಟುಂಬದ ಆಪ್ತಸ್ನೇಹಿತ ಅಜಿತನಿಗೂ ಕಳುಹಿಸಿದ್ದಳು. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು.
ಇಲ್ಲೇನೋ ಸಮಸ್ಯೆ ಇದೆ ಎಂಬ ಡೈಲಾಗ್ ಇರುವ ಆಪ್ತ ಮಿತ್ರದ ಕ್ಲಿಪ್‌ನಿಂದ ಆರಂಭವಾಗಿ ಪ್ರೇತದ ಚಿತ್ರ.. ಫೋಟೊ ತೆಗೆದಿರುವ ಕೈವಾಡದ ಹಿಂದೆ ಮಾನವ ಶಕ್ತಿಗಳಿವೆ ಎಂಬರ್ಥ ಬರುವ ಟ್ರೋಲ್‌ಗಳು ಹೆಚ್ಚಾಯಿತು. ತಮಗೆ ಲಾಭ ಆಗುವ ಬದಲು ಆಶಯಕ್ಕೆ ವಿರುದ್ಧವಾಗಿ ಹೋಗುತ್ತಿರುವುದನ್ನು ಮನಗಂಡು ಮನೆಯವರು ಇಲ್ಲಿಗೆ ನಿಲ್ಲಿಸಿ, ವಿಡೀಯೋ ಡಿಲೀಟ್ ಮಾಡಿ ಎಂದು ಮಾಧ್ಯಮದವರಿಗೆ ಕೇಸ್ ಹಾಕುವ ಬೆದರಿಕೆ ಒಡ್ಡಿದರು. ಆದರೆ ಅವರಾಗಿಯೇ ಮೊಬೈಲ್ ಮೂಲಕ ಪ್ರೇತದ ಫೋಟೊ ವಿಚಾರಗಳನ್ನು ಹಂಚಿಕೊಂಡಿದ್ದರಿಂದ ಕೇಸ್ ಮೂಲೆ ಸೇರುವುದು ಶತಃ ಸಿದ್ಧ. ಹೀಗಾಗಿ ತಪ್ಪೊಪ್ಪಿಗೆ ರೀತಿ ವೀಡಿಯೋ ಹೇಳಿಕೆ ಮಾಡಿ ಮಾಧ್ಯಮಕ್ಕೆ ಕಳುಹಿಸಿದರು.
ಅಸಲಿಗೆ ಈ ಪ್ರೇತ ಸಂಜೆ ೫ ಗಂಟೆ ಬಳಿಕವೇ ಮನೆಯಲ್ಲಿ ಪ್ರತ್ಯಕ್ಷವಾಗುತ್ತಿತ್ತು. ಅಂದರೆ ಈ ಪ್ರೇತ ೫ ಗಂಟೆವರೆಗೆ ಆಫೀಸ್‌ಗೆ ಹೋಗುತ್ತಿತ್ತಾ? ಅಥವಾ ಕಾಲೇಜ್‌ಗೆ ಹೋಗುತ್ತಿತ್ತಾ? ಮನೆಯಲ್ಲಿ ಏಕಾ ಏಕಿ ಬಟ್ಟೆಗೆ ಬೆಂಕಿ ಬೀಳುತ್ತಿರಲಿಲ್ಲ. ಬೆಂಕಿ ಬಿದ್ದು ಜೋರು ಉರಿಯುವಾಗ ಎಲ್ಲರ ಗಮನಕ್ಕೆ ಬರುತ್ತಿತ್ತು. ಮನೆ ಸದಸ್ಯರೆಲ್ಲ ಒಂದೇ ಕಡೆ ಇದ್ದಾಗ ಪಾತ್ರೆಗಳು ಬೀಳುವ ಸದ್ದು, ಬೆಂಕಿ ಬೀಳುತ್ತಿರಲಿಲ್ಲ. ಹೀಗಾಗಿ ಮನೆಯ ಸದಸ್ಯರ ಮೇಲೆಯೇ ಸಂಶಯದ ತೂಗುಕತ್ತಿ ಇತ್ತು.
ಭೂತ ಮಾಯವಾಯಿತು ಏಕೆ? ಹೇಗೆ?: ಹಿಂದೆ ಅನೇಕ ಬಲಿಮೆ/ಜ್ಯೋತಿಷಿಯವರು ಪರಿಹಾರ ಹೇಳಿದರೂ ಪರಿಹಾರ ಕಾಣದ ಸಮಸ್ಯೆ ಹುಲಿಕಲ್ ನಟರಾಜ್ ಬರುತ್ತೇನೆ ಎಂದ ತಕ್ಷಣ ಏಕೆ ಓಡಿ ಹೋಯಿತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಮನೆಯವರಲ್ಲಿಯೇ ಇತ್ತು. ನಕಲಿ ಪ್ರೇತವನ್ನು, ಸೃಷ್ಟಿಕರ್ತರನ್ನು ಸಮಾಜದ ಮುಂದೆ ಸುಲಭವಾಗಿ ಇಡಬಹುದಿತ್ತು. ಮೊಬೈಲ್‌ನ್ನು ಒಮ್ಮೆ ಎಕ್ಸ್‌ಪರ್ಟ್‌ಗಳು ಚೆಕ್ ಮಾಡಿದ್ದರೆ ಗೊತ್ತಾಗುತ್ತಿತ್ತು. ಆದರೆ ಮನೆಯಲ್ಲಿ ಅಪ್ರಾಪ್ತರು ಇರುವುದರಿಂದ ಮತ್ತು ಮನೆಯವರೇ ಹೇಳಿಕೆ ನೀಡಿ ಈ ಕುರಿತು ತನಿಖೆ ಬೇಡ ಎಂದು ಹೇಳಿದ್ದರಿಂದ, ಪಂಚಾಯತ್ ಅಧ್ಯಕ್ಷರು ಕೂಡಾ ಇದಕ್ಕೆ ಸಮ್ಮತಿಸಿದ್ದರಿಂದ ಪ್ರೇತ ಹುಟ್ಟಿದ್ದು ಹೇಗೆ, ಓಡಿ ಹೋದದ್ದು ಹೇಗೆ ಎಂಬ ಸತ್ಯ ಸ್ಪಷ್ಟವಾಗಿ ಗೊತ್ತಾಗಲಿಲ್ಲ. ಆದರೆ ಪ್ರೇತ ಮಾಯವಾಗಿದ್ದಂತೂ ಸತ್ಯ. !
ಈ ನಡುವೆ ಇಬ್ಬರು ಸ್ತ್ರೀ ಯೂಟ್ಯೂಬರ್‌ಗಳು ತಾವು ಜರ್ನಲಿಸ್ಟ್‌ಗಳೆಂದು ಹೇಳುತ್ತಾ ಪ್ರೇತವನ್ನು ಭೂತದೊಂದಿಗೆ ಜೋಡಿಸಿಕೊಂಡು ನಮ್ಮ ಜನಪದ ನಂಬಿಕೆಗೆ ಅವಮಾನ ಆಗಿದೆ. ಪ್ರೇತ ಓಡಿ ಹೋದದ್ದು ಮಂತ್ರವಾದಿ ಮಂತ್ರಿಸಿದ ತೆಂಗಿನಕಾಯಿಯಿಂದ ಎಂದು ಮತ್ತೆ ಮೂಢ ನಂಬಿಕೆ ಬಿತ್ತುವ ಕಾರ್ಯ ನಡೆಸಿ ತಮ್ಮ ವೀವ್ಸ್ ಹೆಚ್ಚಿಸಿಕೊಳ್ಳುವ ಚೀಪ್ ಪಬ್ಲಿಸಿಟಿಯಲ್ಲಿ ತೊಡಗಿದರು.
ತುಳುನಾಡಿನ ಜನಪದ, ಧಾರ್ಮಿಕ ಆಚರಣೆಗಳ ವೈಶಿಷ್ಟ್ಯ ಅದ್ಭುತ ಲೋಕವೇ ಹೌದು. ದೈವಾರಾಧನೆಯಲ್ಲಿ ಭೂತ ಪ್ರೇತ ನಂಬಿಕೆ ಎಲ್ಲವೂ ಇದೆ. ಆದರೆ ಸ್ನಾಪ್‌ಚಾಟ್‌ನಲ್ಲಿ ತೆಗೆದ ಪ್ರೇತದ ಫೋಟೊ, ಮನೆಯ ಚಿನ್ನವನ್ನು ಪ್ರೇತ, ಭೂತ ಒಯ್ದಿದೆ ಎಂದು ಆರೋಪಿಸುವುದು ಸರಿ ಅಲ್ಲ. ಅಡವಿಟ್ಟ ಚಿನ್ನ ವಾಪಸ್ ತೆಗೆದುಕೊಂಡು ಬಂದ ದಿನ ಪರಿಶೀಲಿಸಿದರೆ ಸತ್ಯ ಗೊತ್ತಾಗುತ್ತದೆ. ದಿನವಿಡೀ ತೂರಾಡುತ್ತಾ, ಕೋಳಿ ಅಂಕಕ್ಕೆ ಹೋಗಿ ಜೂಜಾಡಿ ಹಣ ಕಳೆದುಕೊಂಡ ಮೇಲೆ ಊರಿಡೀ ಸಾಲ ಮಾಡಿ, ಚಿನ್ನ ಅಡವಿಟ್ಟಿರುವ ವಿಚಾರ ಆ ಊರಿನ ಜನರಿಗೆ ಸ್ಪಷವಾಗಿ ಗೊತ್ತಿದೆ.
ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಚಿನ್ನ ಸಿಕ್ಕಿದೆ ಎನ್ನುವುದು. ಬಳಿಕ ತಮ್ಮ ಸಮರ್ಥನೆಗಾಗಿ ಮಂತ್ರವಾದಿ ಬಂದ ಬಳಿಕ ಚಿನ್ನ ಸಿಕ್ಕಿತು ಎನ್ನುವುದು. ಇವೆಲ್ಲವೂ ಮೂಲ ನಂಬಿಕೆಗೆ ಘಾಸಿ ಮಾಡುವಂತಹುದು. ಇಂತಹ ಚೀಪ್ ಗಿಮಿಕ್ ಅಥವಾ ಮಾನಸಿಕ ಸಮಸ್ಯೆಗಳನ್ನು ದೈವಾರಾಧನೆ ಜತೆ ಜೋಡಿಸಿಕೊಂಡು ಜಾಲತಾಣಗಳಲ್ಲಿ ಪ್ರಚಾರ ನಡೆಸಿದರೆ ತುಳು ನಾಡಿನ ಭವ್ಯ ಪರಂಪರೆ ಬಗ್ಗೆ ಕೀಳಾಗಿ ಇತರರು ಆಡಿಕೊಳ್ಳುವಂತಾಗುತ್ತದೆ. ದೈವ ಸಂಸ್ಕೃತಿ ರಕ್ಷಕರು ಇಂತಹ ವೈಪರೀತ್ಯಗಳನ್ನು ತಡೆಯಬೇಕಾದವರು, ನಕಲಿ ಪ್ರೇತದ ಸೃಷ್ಟಿಗೆ ಕಾರಣನಾದವ “ನಗಡುದ್ಯಾರ ಬೋ.. ಮಗ” ಎಂದು ಟೀವಿಯಲ್ಲಿ ಒದರಿದಾಗ ಸಂಭ್ರಮಿಸುವುದಲ್ಲ. – ಜಿತೇಂದ್ರ ಕುಂದೇಶ್ವರ ಹಿರಿಯ ಪತ್ರಕರ್ತರು