

ಬೆಳ್ತಂಗಡಿ: ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಗಂಟೆ ಹಗರಣ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಕಳೆದ 5 ವರ್ಷಗಳಿಂದ ಭಕ್ತರು ಹರಕೆ ರೂಪದಲ್ಲಿ ಸಲ್ಲಿಸಿರುವ ರೂ 2.5 ಕೋಟಿಗಿಂತಲೂ ಹೆಚ್ಚು ಬೆಲೆ ಬಾಳುವ ಗಂಟೆಗಳು ವಿಲೇವಾರಿ ಆಗದೆ ಕೊಠಡಿಯಲ್ಲಿ ಬಿದ್ದಿರುವ ಕುರಿತು “ಸುದ್ದಿ ಬಿಡುಗಡೆ” ವಿಸ್ತತ ವರದಿ ಮಾಡಿತ್ತು. ಇದೀಗ ರಾಶಿ ರಾಶಿಯಾಗಿ ಕೋಣೆಯಲ್ಲಿ ತುಂಬಿಸಿರುವ ಗಂಟೆಗಳ ಫೋಟೋ “ಸುದ್ದಿ ಬಿಡುಗಡೆ”ಗೆ ಲಭ್ಯವಾಗಿದೆ.
ತಲಾ 25 ಕೆಜಿ ತೂಕದಂತೆ ಗಂಟೆಗಳನ್ನು ಗೋಣಿಯೊಳಗೆ ಹಾಕಿ ಸೌತಡ್ಕ ದೇವಾಲಯದ ಹಿಂಭಾಗದ ಕೊಠಡಿಯಲ್ಲಿ ಗುಡ್ಡೆ ಹಾಕಿಡಲಾಗಿದೆ. ಉಳಿದ ಸರಕು ಸಾಮಾನುಗಳ ಜೊತೆ ಗೋಣಿ ಚೀಲದಲ್ಲಿ ಗಂಟೆಗಳಿದ್ದು, ಕಳೆದ 5 ವಷದಿಂದ ವಿಲೇವಾರಿಯಾಗದಿರುವ ಹಿನ್ನೆಲೆಯಲ್ಲಿ 55 ಟನ್‌ಗೂ ಅಧಿಕ ಗಣಪನ ಹರಕೆಯ ಗಂಟೆಗಳು ಇಲ್ಲಿ ರಾಶಿ ಬಿದ್ದಿವೆ. ಮಳೆ ಬಂದು ನೀರು ನೇರವಾಗಿ ಈ ಕೊಠಡಿಯೊಳಗೆ ಹೋಗಿ ಲಕ್ಷಾಂತರ ಮೌಲ್ಯದ ಗಂಟೆಗಳು ತುಕ್ಕು ಹಿಡಿದು ಹೋಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.