ಮನೆಯಲ್ಲಿ ಜಗಳವಾಡಿ ಆತ್ಮಹತ್ಯೆ ಮಾಡಲು ಬೆಂಗಳೂರಿನಿಂದ ಬಂದ ಮಹಿಳೆ: ಧರ್ಮಸ್ಥಳ ಪೊಲೀಸ್ ಠಾಣಾ ಎಸ್‌ಐ ಕಿಶೋರ್ ಕುಮಾರ್‌ರಿಂದ ರಕ್ಷಣೆ

0

ಬೆಳ್ತಂಗಡಿ: ಮನೆಯಲ್ಲಿ ನಡೆದ ಗಲಾಟೆಯಿಂದ ನೊಂದು ಬೆಂಗಳೂರಿನಿಂದ ಬಸ್ ಮೂಲಕ ಧರ್ಮಸ್ಥಳಕ್ಕೆ ಬಂದು ಆತ್ಮಹತ್ಯೆ ಮಾಡಲು ಮುಂದಾದ ಮಹಿಳೆಯನ್ನು ಧರ್ಮಸ್ಥಳ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ರಕ್ಷಿಸಿದ ಘಟನೆ ಫೆ.10ರಂದು ರಾತ್ರಿ ನಡೆದಿದೆ.
ಬೆಂಗಳೂರು ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಅನ್ನಪೂರ್ಣ (50) ಎಂಬವರು ತನ್ನ ಮನೆಯಲ್ಲಿ ನಡೆದ ಸಣ್ಣ ಗಲಾಟೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಫೆ.10ರಂದು ಬೆಳಿಗ್ಗೆ ಬಸ್ ಮೂಲಕ ಧರ್ಮಸ್ಥಳಕ್ಕೆ ರಾತ್ರಿ ಬಂದಿದ್ದರು. ನಂತರ ಮಗ ಚಿಕ್ಕಜಾಲ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಮೊಬೈಲ್ ಲೋಕೇಷನ್ ಮೂಲಕ ಮಹಿಳೆ ಧರ್ಮಸ್ಥಳದಲ್ಲಿರುವುದು ಕಂಡು ಬಂದಿತ್ತು. ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿ ಲೊಕೇಷನ್ ಕಳುಹಿಸಿದ್ದರು. ಕಿಶೋರ್ ಕುಮಾರ್ ಕರ್ತವ್ಯ ಬಿಟ್ಟು ಫೆ.10ರಂದು ರಾತ್ರಿ ಮನೆಗೆ ಹೋಗಿದ್ದವರು ತಕ್ಷಣ ಠಾಣೆಯ ಸಿಬ್ಬಂದಿಗಳನ್ನು ವಿವಿಧೆಡೆ ಹುಡುಕಾಟ ನಡೆಸಲು ಕಳುಹಿಸಿದ್ದರು. ಅದಲ್ಲದೆ ಸಬ್‌ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಮಫ್ತಿಯಲ್ಲಿ ಧರ್ಮಸ್ಥಳ ಸುತ್ತಮುತ್ತ ನಡೆದುಕೊಂಡು ಹೋಗಿ ಮಹಿಳೆಗಾಗಿ ಹುಡುಕಾಟ ನಡೆಸಿದಾಗ ರಾತ್ರಿ 10.30ಕ್ಕೆ ಧರ್ಮಸ್ಥಳ ದ್ವಾರದ ಬಳಿ ಪತ್ತೆಯಾಗಿದ್ದಾರೆ. ಮಹಿಳೆಯನ್ನು ರಕ್ಷಣೆ ಮಾಡಿ ಅವರನ್ನು ಸಮಾಧಾನ ಮಾಡಿ ನೀರು, ಊಟ ತೆಗೆಸಿಕೊಟ್ಟು ನೇರ ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆತಂದು ವಿಶಾಂತ್ರಿ ಮಾಡಿಸಿ ಕುಟುಂಬದವರಿಗೆ ಕರೆ ಮಾಡಿ ರಾತ್ರಿಯೇ ಕರೆಸಿ ಅವರೊಂದಿಗೆ ಕಳುಹಿಸಿಕೊಟ್ಟು ಸಬ್ ಇನ್ಸೆಕ್ಟರ್ ಮಾನವೀಯತೆ ಮೆರೆದಿದ್ದಾರೆ. ಘಟನೆ ಬಗ್ಗೆ ಮಹಿಳೆ ಪ್ರತಿಕ್ರಿಯಿಸಿ ಗಲಾಟೆಯಿಂದ ನೊಂದು ಬಸ್‌ನಲ್ಲಿ ಧರ್ಮಸ್ಥಳಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದೆ. ಅವಾಗ ಸಬ್‌ಇನ್ಸೆಕ್ಟರ್ ಒಬ್ರು ಬಂದು ರಕ್ಷಣೆ ಮಾಡಿ ಊಟ ಮಾಡಿಸಿದ್ದಾರೆ. ನೋವಿನಿಂದ ಈಗ ಜಾಸ್ತಿ ಮಾತಾನಾಡಲು ಅಗುತ್ತಿಲ್ಲ. ಮನೆಯವರು ಬಂದ ಮೇಲೆ ಅವರೊಂದಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here