

ಬೆಳ್ತಂಗಡಿ: ಮೂಲಭೂತ ಸೌಕರ್ಯಗಳ ಬೇಡಿಕೆ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ರಾಜ್ಯವ್ಯಾಪ್ತಿ 2ನೇ ಹಂತದ ಮುಷ್ಕರ ಫೆ.10ರಂದು ಬೆಳ್ತಂಗಡಿ ತಾಲೂಕು ಕಚೇರಿ ಆವರಣದಲ್ಲಿ ಧರಣಿ ನಡೆಯುತ್ತಿದೆ.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್,ಉಪಾಧ್ಯಕ್ಷೆ ಉಷಾಕಿರಣ್ ಸಹಿತ 32 ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ.
ಪ್ರಮುಖ ಬೇಡಿಕೆಗಳು: ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5ಲಕ್ಷ ಮೃತ ಖಾತೆದಾರರ ಪಹಣೆ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವಂತೆ ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆದು ನೈಸರ್ಗಿಕ ನ್ಯಾಯ ತತ್ವಗಳನ್ನು ಹಾಗೂ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿದ ದಂಡನಾ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು.
ಅಂತರ್ ಜಿಲ್ಲಾ ವರ್ಗಾಣೆಯ ಕೆ.ಸಿ.ಎಸ್.ಆರ್ ನಿಯಮ 16ಎ ರ ಉಪಖಂಡ (2)ನ್ನು ಮರುಸ್ಥಾಪಿಸುವ ಬಗ್ಗೆ ಅಥವಾ ಇತರೆ ಎಲ್ಲಾ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿಯನ್ನು ರಚಿಸಬೇಕು ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.