
ಬೆಳ್ತಂಗಡಿ: ಬಹಳ ಕುತೂಹಲ ಉಂಟು ಮಾಡಿದ್ದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಎಲ್ಲಾ ೧೨ ಸ್ಥಾನಗಳಲ್ಲಿಯೂ ಜಯಭೇರಿ ಬಾರಿಸಿ ಆಡಳಿತದ ಗದ್ದುಗೆ ಏರಿದ್ದಾರೆ. ಈ ಹಿಂದೆಯೂ ಸಹಕಾರ ಭಾರತಿಯ ಆಡಳಿತದಲ್ಲಿದ್ದ ಸಹಕಾರಿ ವ್ಯವಸಾಯಿಕ ಸಂಘದ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿದ್ದ ಇಳಂತಿಲದ ಕಾಯರ್ಪಾಡಿಯ ಕೆ.ವಿ. ಪ್ರಸಾದರವರು ಸಂಘಟನೆಯ ತೀರ್ಮಾನದಂತೆ ಈ ಬಾರಿ ಅವಕಾಶ ವಂಚಿತರಾಗಿದ್ದರು.
ಇದರಿಂದ ಆಕ್ರೋಶಗೊಂಡಿದ್ದ ಅವರು ಬಂಡಾಯವೆದ್ದು ಚುನಾವಣೆಗೆ ಸ್ಪರ್ಧಿಸಿದ್ದರು. ಅದಲ್ಲದೆ ಈ ಬಾರಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ತನ್ನ ೧೧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇಬ್ಬರು ಪಕ್ಷೇತರರು ಕಣದಲ್ಲಿದ್ದರು. ಹೀಗಾಗಿ ೧೧ ಸ್ಥಾನಕ್ಕೆ ೨೫ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರಿಂದ ಈ ಬಾರಿ ಚುನಾವಣಾ ಕಣ ರಂಗೇರಿತ್ತು. ಬಂಡಾಯ ಸ್ಪರ್ಧೆ ಒಡ್ಡಿದ್ದ ಕೆ. ವಿ. ಪ್ರಸಾದ್ ಅವರು ಪರಾಜಿತರಾಗಿದ್ದು ಸಾಮಾನ್ಯ ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಇಳಂತಿಲ ಅಗರ್ತ ನಿವಾಸಿ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಗೆಲುವು ಸಾಧಿಸಿದ್ದಾರೆ.
ಸಾಲಗಾರರಲ್ಲದ ಮತಕ್ಷೇತ್ರದಿಂದ ಸಹಕಾರ ಭಾರತಿಯ ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ೧೧ ಸ್ಥಾನಕ್ಕಾಗಿ ಫೆ. ೨ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಅಭ್ಯರ್ಥಿಗಳಾದ ಸಾಲಗಾರರ ಕೃಷಿಯೇತರ ಮತಕ್ಷೇತ್ರದಿಂದ ರಾಜೇಶ್ ಶಾಂತಿನಗರ, ಸಾಲಗಾರರ ಮತಕ್ಷೇತ್ರ ಕೃಷಿ ಸಾಲದ ಸಾಮಾನ್ಯ ಸ್ಥಾನದಿಂದ ವಸಂತ ಪಿ., ಶ್ರೀರಾಮ, ಸದಾನಂದ ಶೆಟ್ಟಿ ಜಿ., ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಷಾ, ಸಂಧ್ಯಾ, ಸುನೀಲ್ ದಡ್ಡು, ದಯಾನಂದ ಎಸ್., ಸುಂದರ ಕೆ. ಮತ್ತು ರಾಘವ ನಾಯ್ಕ ಗೆಲುವು ಸಾಧಿಸಿದ್ದಾರೆ.
ಬಂಡಾಯವಾಗಿ ಸಾಮಾನ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ ಕೆ.ವಿ. ಪ್ರಸಾದ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಅನಿ ಮಿನೇಜಸ್, ಪ್ರೆಸಿಲ್ಲಾ ಡಿಸೋಜ, ಕವಿರಾಜ ಜಿ., ರೂಪೇಶ ರೈ ಅಲಿಮಾರ, ಶೇಖರ ಪೂಜಾರಿ, ಸತೀಶ್ ಎನ್. ಶೆಟ್ಟಿ, ಶಿವಚಂದ್ರ ಎನ್., ಬಾಲಚಂದ್ರ ಜಿ., ಸಿದ್ದಪ್ಪ ನಾಯ್ಕ ಪಿ., ರವೀಂದ್ರ ಗೌಡ, ತನಿಯ ಮುಗೇರ, ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಕಲಂದರ್ ಶಾಫಿ ಹಾಗೂ ಚಂದ್ರಪ್ರಕಾಶ್ ಪರಾಭವಗೊಂಡಿದ್ದಾರೆ.