ವಿವೇಕಾನಂದರ ಜೀವನ ವಿದ್ಯಾರ್ಥಿಗಳಿಗೆ ಆದರ್ಶನೀಯ : ರವಿಪ್ರಸಾದ್ ಕಲ್ಮಂಜ

0

ಪಟ್ರಮೆ: ವಿವೇಕಾನಂದರ ಜೀವನದ ಆದರ್ಶ ಮೌಲ್ಯ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅಳವಡಿಕೆಯಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಸ್ವಯಂ ಶಕ್ತಿಯಿಂದ ಬದುಕುವ ಶಿಕ್ಷಣ ದೊರೆಯಬೇಕು. ಅಂತಹ ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವಂತಿರಬೇಕು. ಶ್ರೀರಾಮ ವಿದ್ಯಾಸಂಸ್ಥೆ ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ಬದುಕಿನ ಪಾಠವನ್ನು ಕಲಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಕಾಲೇಜು ವಿದ್ಯಾರ್ಥಿ ಪ್ರಮುಖ ರವಿಪ್ರಸಾದ್ ಕಲ್ಮಂಜ ಹೇಳಿದರು. ಅವರು ಜ. 13ರಂದು ಪ್ರಜ್ಞೆಯೊಂದಿಗೆ ಪ್ರಗತಿ, ವಿಕಸಿತ ಭಾರತಕ್ಕಾಗಿ ಎಂಬ ವಿಷಯದ ಕುರಿತು ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ವೇದವ್ಯಾಸ ಧ್ಯಾನ ಮಂಟಪದಲ್ಲಿ ನಡೆದ ವಿವೇಕಾನಂದ ಜಯಂತಿಯ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿದರು.

ವಿವೇಕಾನಂದರು ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ ಎಂಬ ತತ್ವದ ಅಡಿಯಲ್ಲಿ ಬದುಕಲು ತಿಳಿಸಿದ್ದು ನಾವು ಪರಿಪೂರ್ಣ ಜೀವನವನ್ನು ಮಾಡಬೇಕಾದರೆ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಹೇಳಿದ ರವಿಪ್ರಸಾದ್ ಅವರು ಬೆಳಗ್ಗೆ ಬೇಗ ಎದ್ದು ಸೂರ್ಯ ನಮಸ್ಕಾರ ಮಾಡುವ, ಸಂಜೆ ಭಜನೆ ಮಾಡುವ ಶಿಸ್ತನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಬೆಳ್ತಂಗಡಿ ಶಾಖೆಯ ಎಂಸಿಸಿ ಆಫ್ ಇಂಡಿಯಾದ ಪ್ರಬಂಧಕ ವಿ.ಎಸ್. ಕುಮಾರ್ ಮಾತನಾಡಿ ಶ್ರೀರಾಮ ವಿದ್ಯಾಸಂಸ್ಥೆಯು ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಒಂದು ದೊಡ್ಡ ವಿದ್ಯಾಸಂಸ್ಥೆಯಾಗಿದ್ದು ಪಟ್ಟೂರು ಶ್ರೀರಾಮದ ವಿದ್ಯಾರ್ಥಿಗಳ ಶಿಸ್ತು ಶ್ಲಾಘನೀಯ ಎಂದರು. ಭಾರತೀಯ ತತ್ವವನ್ನು ಇಡೀ ಪ್ರಪಂಚಕ್ಕೆ ಕೊಟ್ಟವರಲ್ಲಿ ಮೊದಲಿಗರು ಸ್ವಾಮಿ ವಿವೇಕಾನಂದರು. ಅಂತಹ ವ್ಯಕ್ತಿಯನ್ನು ಆದರ್ಶವಾಗಿ ಇಟ್ಟುಕೊಂಡು ಬೋಧಿಸುತ್ತಿರುವ ಶ್ರೀರಾಮದಂತಹ ವಿದ್ಯಾಸಂಸ್ಥೆಗಳು ಭವ್ಯ ಭಾರತವನ್ನು ಬಲಿಷ್ಠ ಗೊಳಿಸುವಲ್ಲಿ ಎರಡು ಮಾತಿಲ್ಲ ಎಂದು ಅವರು ನುಡಿದರು.

ಅತಿಥಿಗಳಾಗಿ ಆಗಮಿಸಿದ ಪಂಚಾಯತ್ ರಾಜ್ ಇಲಾಖೆ ಬೆಳ್ತಂಗಡಿಯ ಸಹಾಯಕ ಇಂಜಿನಿಯರ್ ಸಂದೀಪ್ ಎಸ್. ಮಾತನಾಡಿ ವಿವೇಕ ಜಯಂತಿಯು ಕೇವಲ ಆಚರಣೆಗೆ ಸೀಮಿತವಾಗಿರದೆ ವಿವೇಕಾನಂದರ ಆದರ್ಶ ಗುಣಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ವ್ಯಕ್ತಿತ್ವವನ್ನು ರೂಪಿಸುವಂತಾಗಬೇಕು. ವಿವೇಕಾನಂದರ ಆದರ್ಶ ಮಕ್ಕಳಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಸಮಿತಿ ಸದಸ್ಯ ಜನಾರ್ದನ ಕಜೆ ಮಾತನಾಡಿ ಹಿಂದೂ ಧರ್ಮದ ಮೂಲ ಸಿದ್ಧಾಂತವನ್ನು ಪರಿಚಯಿಸುವ ಒಂದು ಒಳ್ಳೆಯ ವಿದ್ಯಾಸಂಸ್ಥೆ ಇದಾಗಿದೆ. ಸರಕಾರಿ ಪಠ್ಯಕ್ರಮದ ಜೊತೆಗೆ ನಮ್ಮ ಸಮಾಜ ಮತ್ತು ರಾಷ್ಟ್ರೀಯತೆಯ ಕಲ್ಪನೆಯನ್ನು ಮಕ್ಕಳಿಗೆ ಮೂಡಿಸುವ ಸಮಾಜಮುಖಿ ಕಾರ್ಯ ನಮ್ಮ ವಿವೇಕಾನಂದ ವಿದ್ಯಾವರ್ಧಕ ಸಂಘ ನೀಡುತ್ತಿದ್ದು, ಶಿಕ್ಷಕರು ವೇತನಕ್ಕಷ್ಟೇ ನಮ್ಮ ಸಂಸ್ಥೆಗಳಲ್ಲಿ ದುಡಿಯದೆ ಮಕ್ಕಳ ಜೀವನ ರೂಪಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಹಾಗೂ ಯಕ್ಷಗಾನ ಗುರು ಈಶ್ವರ ಪ್ರಸಾದ ನಿಡ್ಲೆರವರಿಗೆ ಗುರುವಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಸರಸ್ವತಿ ವಂದನೆಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ವಂದಿಸಿದರು. ಸಹಶಿಕ್ಷಕಿ ಶುಭಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

ವಿಶೇಷತೆ: ಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು ಹಾಗೂ ಕನ್ನಡ ಮಾಧ್ಯಮ ವಿಭಾಗದ ಒಂದನೇ ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳು ವಿವೇಕಾನಂದರಂತೆ ವೇಷಭೂಷಿತರಾಗಿ ಆಗಮಿಸಿದವರ ಗಮನ ಸೆಳೆದರು. ವಿವೇಕಾನಂದರ ಜಯಂತಿ ಪ್ರಯುಕ್ತ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಭಾಷಣ, ಪ್ರಬಂಧ, ಚಿತ್ರಕಲೆ ಮತ್ತು ಅಮೃತವಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪಟ್ಲ ಫೌಂಡೇಶನ್ ವತಿಯಿಂದ ನಡೆದ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here