ಬೆಳ್ತಂಗಡಿ: ಉಜಿರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಂದಿನ ೫ ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯ ೧೨ ನಿರ್ದೇಶಕರ ಆಯ್ಕೆಗಾಗಿ ಡಿ. 27ರಂದು ಸಂಘದ ಕಚೇರಿ ಆವರಣದಲ್ಲಿ ಚುನಾವಣೆ ನಡೆಯಿತು. ಸಹಕಾರ ಇಲಾಖೆಯ ಪ್ರತಿಮಾ ಚುನಾವಣಾಧಿಕಾರಿಯಾಗಿದ್ದರು. ಸಹಕಾರ ಸಂಘದ ಮಹಾಸಭೆಗೆ ಸತತವಾಗಿ ಮೂರು ಬಾರಿ ಗೈರು ಹಾಜರಾಗಿದ್ದರೂ ತಮಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದು 99 ಮಂದಿ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಹೈಕೋರ್ಟ್ ಅನುಮತಿಯಂತೆ ಮಹಾಸಭೆಗೆ ಮೂರು ಬಾರಿ ಗೈರು ಹಾಜರಾದ 83 ಮಂದಿ ಬಂದು ಮತದಾನ ಮಾಡಿದ್ದರು. ಇವರ ಮತಗಳನ್ನು ಮತ್ತು ನ್ಯಾಯಾಲಯಕ್ಕೆ ಹೋಗದ ಸದಸ್ಯರ ಮತಗಳನ್ನು ಒಟ್ಟು ಸೇರಿಸಿ ಎಣಿಕೆ ಮಾಡಿದಾಗ ಕಾಂಗ್ರೆಸ್ ಬೆಂಬಲಿತರು ೧೨ರಲ್ಲಿ ೧೦ ಸ್ಥಾನ ಪಡೆದಿದ್ದರು. ಇದರ ಬೆನ್ನಲ್ಲಿಯೇ ಸಹಕಾರ ಭಾರತಿ ಬೆಂಬಲಿತರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು ಮಹಾಸಭೆಗೆ ನಿರಂತರವಾಗಿ ಮೂರು ಸಲ ಗೈರು ಹಾಜರಾದವರ ಮತಗಳನ್ನು ಪರಿಗಣಿಸಬಾರದು ಎಂದು ಕೋರಿದ್ದರು. ಎರಡೂ ಅರ್ಜಿ ಸ್ವೀಕರಿಸಿದ್ದ ಹೈಕೋರ್ಟ್ ಯಾವುದೇ ಅಂತಿಮ ತೀರ್ಪು ಪ್ರಕಟಿಸದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗಿಲ್ಲ.
ಪ್ರತ್ಯೇಕ ಮತ ಎಣಿಕೆ: ಸಹಕಾರ ಸಂಘದ ೩ ಮಹಾಸಭೆಗೆ ಸತತವಾಗಿ ಗೈರು ಹಾಜರಾದ ಸದಸ್ಯರಿಗೂ ಮತದಾನದ ಹಕ್ಕು ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದ ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 99 ಸದಸ್ಯರಿಗೆ ಮತದಾನಕ್ಕೆ ಅವಕಾಶ ದೊರೆತ ಹಿನ್ನೆಲೆಯಲ್ಲಿ ಈ ಪೈಕಿ ಮತ ಚಲಾಯಿಸಿದ್ದ ೮೩ ಮಂದಿಯ ಮತಪತ್ರಗಳನ್ನು ಬೇರೆಯೇ ಇಟ್ಟು ಚುನಾವಣೆ ನಡೆಸಿ ಪ್ರತ್ಯೇಕವಾಗಿ ಎಣಿಕೆ ಮಾಡಲಾಗಿತ್ತು. ನ್ಯಾಯಾಲಯಕ್ಕೆ ಹೋಗದೆ ಇದ್ದ ಇತರ ಸದಸ್ಯರು ಚಲಾಯಿಸಿದ ಮತಗಳ ಎಣಿಕೆಯಲ್ಲಿ ಒಟ್ಟು12 ಸ್ಥಾನಗಳ ಪೈಕಿ ಸಹಕಾರ ಭಾರತಿಯ 7 ಮಂದಿ ಮತ್ತು ಕಾಂಗ್ರೆಸ್ ಬೆಂಬಲಿತರು 5 ಮಂದಿ ಜಯ ಗಳಿಸಿದರು. ನ್ಯಾಯಾಲಯದ ಮೊರೆ ಹೋಗಿ ಮತದಾನದ ಹಕ್ಕು ಪಡೆದು ಮತ ಚಲಾಯಿಸಿದವರ ಮತ ಸೇರಿಸಿ ಎಣಿಕೆ ನಡೆಸಿದಾಗ ಕಾಂಗ್ರೆಸ್ ಬೆಂಬಲಿತರು 10 ಮಂದಿ ಮತ್ತು ಸಹಕಾರ ಭಾರತಿಯ 2 ಮಂದಿ ಜಯ ಗಳಿಸಿದರು.
ನ್ಯಾಯಾಲಯಕ್ಕೆ ಹೋಗಿ ಮತದಾನದ ಅವಕಾಶ ಪಡೆದವರ ಮತಗಳನ್ನೂ ಸೇರಿಸಿ ಫಲಿತಾಂಶ ಪ್ರಕಟಿಸಬೇಕೇ ಅಥವಾ ನ್ಯಾಯಾಲಯಕ್ಕೆ ಹೋಗದೆ ಮತ ಚಲಾಯಿಸಿದವರ ಮತಗಳನ್ನು ಮಾತ್ರ ಎಣಿಕೆಗೆ ಪರಿಗಣಿಸಬೇಕೇ ಎಂದು ಅಧಿಕೃತ ಆದೇಶ ಇನ್ನೂ ಉಚ್ಛ ನ್ಯಾಯಾಲಯದಿಂದ ಬಾರದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯವರು ಫಲಿತಾಂಶ ಪ್ರಕಟ ಮಾಡಿಲ್ಲ. ನ್ಯಾಯಾಲಯದ ಮೆಟ್ಟಿಲೇರಿ ಮತದಾನದ ಹಕ್ಕು ಪಡೆದ ಸದಸ್ಯರ ಮತಗಳನ್ನು ಸೇರಿಸಿ ಫಲಿತಾಂಶ ಘೋಷಣೆ ಮಾಡಿದರೆ ಒಟ್ಟು 12 ನಿರ್ದೇಶಕರ ಸ್ಥಾನಗಳ ಪೈಕಿ ಸಾಮಾನ್ಯ ಕ್ಷೇತ್ರದ 9 ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ 5 ಮಂದಿ ಮತ್ತು ಸಹಕಾರ ಭಾರತಿಯ ಓರ್ವರು ಜಯಗಳಿಸುತ್ತಾರೆ. ಕಾಂಗ್ರೆಸ್ ಬೆಂಬಲಿತರಾದ ಬಾಲಕೃಷ್ಣ ಗೌಡ ಕೇರಿಮಾರು, ಸದಾಶಿವ ಯಾನೆ ಶ್ರೀಧರ ಪೂಜಾರಿ, ಅನಿಲ್ ಪ್ರಕಾಶ್ ಡಿಸೋಜ, ರಜತ ಗೌಡ, ಗುರುರಾಜ ಗೌಡ ಮತ್ತು ಸಹಕಾರ ಭಾರತಿಯ ಅರವಿಂದ ಕಾರಂತ ಕೆ. ಅವರು ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಲಿದ್ದು ನ್ಯಾಯಾಲಯಕ್ಕೆ ಹೋಗಿ ಮತ ಚಲಾಯಿಸಿದವರ ಮತಗಳನ್ನು ಬಿಟ್ಟರೆ ಸಹಕಾರ ಭಾರತಿಯಿಂದ 4ಮಂದಿ ಮತ್ತು ಕಾಂಗ್ರೆಸ್‌ನಿಂದ ಈರ್ವರು ಚುನಾಯಿತರಾಗುತ್ತಾರೆ. ಸಹಕಾರ ಭಾರತಿಯ ಅರವಿಂದ ಕಾರಂತ, ಕೇಶವ ಭಟ್ಟ, ರಾಧಾಕೃಷ್ಣ ಶೆಟ್ಟಿ, ಬಾಲಕೃಷ್ಣ ಗೌಡ, ಕಾಂಗ್ರೆಸ್ ಬೆಂಬಲಿತರಾದ ಬಾಲಕೃಷ್ಣ ಗೌಡ ಕೇರಿಮಾರು ಮತ್ತು ಸದಾಶಿವ ಯಾನೆ ಶ್ರೀಧರ ಪೂಜಾರಿ ಆಯ್ಕೆಯಾಗುತ್ತಾರೆ.
2 ಮಹಿಳಾ ಮೀಸಲು ಕ್ಷೇತ್ರದಿಂದ ನ್ಯಾಯಾಲಯಕ್ಕೆ ಹೋದ ಸದಸ್ಯರನ್ನು ಸೇರಿಸಿದರೆ ಸಹಕಾರ ಭಾರತಿಯಿಂದ ಪುಷ್ಪಾವತಿ ಆರ್. ಶೆಟ್ಟಿ ಮತ್ತು ಕಾಂಗ್ರೆಸ್ ಕಾಂಗ್ರೆಸ್ ಬೆಂಬಲಿತರಾದ ವಾರಿಜ ಎಸ್. ಗೌಡ ಜಯಗಳಿಸುತ್ತಾರೆ. ನ್ಯಾಯಾಲಯಕ್ಕೆ ಹೋದವರನ್ನು ಬಿಟ್ಟರೆ ಸಹಕಾರ ಭಾರತಿಯ ಪುಷ್ಪಾವತಿ ಆರ್. ಶೆಟ್ಟಿ ಮತ್ತು ಸೌಮ್ಯಲತಾ ಜಯಂತ ಗೌಡ ಆಯ್ಕೆಯಾಗುತ್ತಾರೆ. ಪರಿಶಿಷ್ಟ ಜಾತಿ ಸ್ಥಾನದ ಚುನಾವಣೆಯಲ್ಲಿ ನ್ಯಾಯಾಲಯಕ್ಕೆ ಹೋದವರನ್ನು ಬಿಟ್ಟು ಮತ ಎಣಿಕೆ ನಡೆಸಿದಾಗ ಸಹಕಾರ ಭಾರತಿ ಅಭ್ಯರ್ಥಿ ಬಾಲು ಬಿ. ಕೆ. ವಿಜಯಿಯಾಗಲಿದ್ದು ನ್ಯಾಯಾಲಯಕ್ಕೆ ಹೋದವರ ಮತಗಳನ್ನು ಸೇರಿಸಿ ಪಲಿತಾಂಶ ಘೋಷಿಸಿದರೆ ಕಾಂಗ್ರೆಸ್ ಬೆಂಬಲಿತ ಸಾಧು ಮೇರ ಆಯ್ಕೆಯಾಗುತ್ತಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ನ್ಯಾಯಾಲಯಕ್ಕೆ ಹೋದ ನ್ನು ಸೇರಿಸಿದರೂ ಇಲ್ಲದಿದ್ದರೂ ಕಾಂಗ್ರೆಸ್ ಬೆಂಬಲಿತ ಅಣ್ಣು ನಾಯ್ಕ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತರಾದ ಹಿಂದುಳಿದ ಎ ಸ್ಥಾನದ ಅರುಣಾ ಕುಮಾರಿ ಬನಸಿರಿ ಮತ್ತು ಬಾಲಕೃಷ್ಣ ಗೌಡ ಅವರು ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅಧಿಕೃತ ಫಲಿತಾಂಶ ಇನ್ನಷ್ಟೇ ಘೋಷಣೆಯಾಗಬೇಕಿದೆ.