ಸಂಗ್ರಹ, ಬರಹ: ಹರಿಪ್ರಸಾದ್ ನೆಲ್ಯಾಡಿ
ಜನಸಾಮಾನ್ಯರ ಪಾಲಿಗೆ ದುಬಾರಿ ಚಿಕಿತ್ಸಾ ವಿಧಾನ ಎಂದೇ ಪರಿಗಣಿಸಲಾಗುವ ಡಯಾಲಿಸಿಸ್ ಬಡ ಮತ್ತು ಮಧ್ಯಮ ವರ್ಗದ ಅದೆಷ್ಟೋ ಕಿಡ್ನಿ ರೋಗಿಗಳ ಬದುಕನ್ನೇ ದುಸ್ತರವಾಗಿಸಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರ ನೋವಿನ ಕಣ್ಣೀರು, ಅವರ ಕುಟುಂಬ ವರ್ಗದವರ ಸಂಕಷ್ಟಕ್ಕೆ ಇದೀಗ ಒಂದು ಮಹಾನ್ ಕಾರ್ಯದ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ಪಂದಿಸಿದ್ದಾರೆ. ಲಕ್ಷದೀಪೋತ್ಸವದ ಸಂದರ್ಭದಲ್ಲಿ ಡಾ. ಹೆಗ್ಗಡೆಯವರು ಅದಷ್ಟೋ ಕಿಡ್ನಿ ರೊಗಿಗಳ ಬಾಳಲ್ಲಿ ’ಬೆಳಕು’ ಮೂಡಿಸುವ ಮಹತ್ವದ ಘೋಷಣೆಯೊದನ್ನು ಮಾಡಿದ್ದಾರೆ.
2024ರ ಹೊಸ ವರ್ಷದ ಆರಂಭದ ದಿನದಿಂದ ಉಜಿರೆಯಲ್ಲಿರುವ ಎಸ್.ಡಿ.ಎಂ. ಮಲ್ಟಿ ಸ್ಪೆಪಾಷಿಲಿಟಿ ಆಸ್ಪತ್ರೆಯಲ್ಲಿ ವರ್ಷದ ೩೬೫ ದಿನವೂ ದಿನದ 24 ಗಂಟೆ ಉಚಿತ ಡಯಾಲಿಸಿಸ್ ಸೇವೆಯ ಘೋಷಣೆಯನ್ನು ಮಾಡುವ ಮೂಲಕ ಅದೆಷ್ಟೋ ನೊಂದ ಕುಟುಂಬಗಳ ಕಣ್ಣೀರು ಒರೆಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಚತುರ್ವಿಧ ದಾನ ಪರಂಪರೆಗೆ ಹೆಸರುವಾಸಿಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನ್ನದಾನ, ವಸ್ತ್ರದಾನ, ಅಭಯದಾನ, ಔಷಧಿ ದಾನ, ವಸತಿ ದಾನ ಸಹಿತ ಅದೆಷ್ಟೂ ಸೇವೆಗಳು ನಾಡಿನ ದೀನ-ದುರ್ಬಲರ ಬದುಕಿನಲ್ಲಿ ಸ್ವಾವಲಂಬನೆಯ ಕಿರಣವನ್ನು ಮೂಡಿಸಿದೆ. ಇದೀಗ ಶ್ರೀ ದರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಯ ಮೂಲಕ ಮಹಾನ್ ಔಷಧದಾನದ ಸೇವೆ ಆರಂಭವಾಗಲಿದ್ದು ಈ ಸಂದರ್ಭದಲ್ಲಿ ಡಯಾಲಿಸಿಸ್ ಕುರಿತಾಗಿರುವ ಉಪಯುಕ್ತ ಮಾಹಿತಿಯನ್ನು ನಮ್ಮ ಓದುಗರಿಗೆ ನೀಡುವ ಪ್ರಯತ್ನವನ್ನು ಸುದ್ದಿ ಬಳಗ ಮಾಡುತ್ತಿದೆ. ನಮ್ಮ ದೇಹದ ಪ್ರತೀಯೊಂದು ಅಂಗಗಳೂ ಸಹ ತಮ್ಮದೇ ಆದ ಕಾರ್ಯನಿರ್ವಹಣೆಗಾಗಿ ಪ್ರಾಮುಖ್ಯತೆಯನ್ನು ಹೊಂದಿವೆ. ಯಾವುದಾರೂ ಒಂದು ಅಂಗ ನಿಷ್ಕ್ರಿಯಗೊಂಡಾಗ ಅಥವಾ ಅದರ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಯ ಉಂಟಾದಾಗ ನಮಗೆ ಆ ಅಂಗದ ಮಹತ್ವ ತಿಳಿಯುತ್ತದೆ. ಅದೇ ರೀತಿಯಲ್ಲಿ ನಮ್ಮ ದೇಹದ ’ಪ್ಯೂರಿಫಯರ್’ ಎಂದೇ ಕರೆಸಿಕೊಳ್ಳುವ ಕಿಡ್ನಿಗಳೂ ಸಹ ಸ್ವಾಸ್ಥ್ಯ ಆರೊಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಆದರೆ ಯಾವುದಾದಾರೂ ಕಾರಣಗಳಿಂದಾಗಿ ನಮ್ಮ ದೇಹದ ಕಿಡ್ನಿಗಳ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಾಸ ಉಂಟಾದಾಗ ಅಥವಾ ಕಿಡ್ನಿ ವೈಫಲ್ಯಗೊಂಡು ಅವುಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡ ಸಂದರ್ಭದಲ್ಲಿ ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ದೇಹದಿಂದ ಹೊರಹಾಕಲು ಬಳಸುವ ವೈದ್ಯಕೀಯ ವಿಧಾನವೇ ಡಯಾಲಿಸಸ್ ಆಗಿದೆ. ನಮ್ಮ ದೇಹದಲ್ಲಿರುವ ಹೆಚ್ಚುವರಿ ನೀರಿನಂಶ ಮತ್ತು ದೇಹದ ಕಲ್ಮಶಗಳನ್ನು ಈ ಡಯಾಲಿಸಿಸ್ ವಿಧಾನದ ಮೂಲಕ ಹೊರಹಾಕಲಾಗುತ್ತದೆ.
1940ರಲ್ಲಿ ಈ ಡಯಾಲಿಸಿಸ್ ವಿಧಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಯಿತು. ಅಲ್ಲಿಂದ ಬಳಿಕ ೧೯೭೦ರಲ್ಲಿ ಡಯಾಲಿಸಿಸ್ ವಿಧಾನ ಕಿಡ್ನಿ ವೈಫಲ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಒಂದು ಸ್ಟ್ಯಾಂಡರ್ಡ್ ಟ್ರೀಟ್ಮೆಂಟ್ ರೂಪದಲ್ಲಿ ಚಾಲ್ತಿಗೆ ಬಂತು. ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾದ ವಿಧಾನಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಡಯಾಲಿಸಿಸನ್ನು ಆಸ್ಪತ್ರೆಗಳಲ್ಲಿ, ಡಯಾಲಿಸಿಸ್ ಕೇಂದ್ರಗಳಲ್ಲಿ ಅಥವಾ ಮನೆಯಲ್ಲೂ ಸಹ ನಡೆಸಬಹುದಾಗಿದ್ದು, ಅದರ ನಿರ್ವಹಣಾ ವಿಧಾನ ಸಂಕೀರ್ಣವಾಗಿರುವುದರಿಂದ ನಮ್ಮ ದೇಶದಲ್ಲಿ ಹೆಚ್ಚಾಗಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ನಿರ್ಧಿಷ್ಟ ಆಸ್ಪತ್ರೆ ಅಥವಾ ಡಯಾಲಿಸಿಸ್ ಸೆಂಟರ್ ಗಳಲ್ಲೇ ಹೆಚ್ಚಾಗಿ ಡಯಾಲಿಸಸ್ ಗೆ ಒಳಗಾಗುತ್ತಾರೆ. ರೋಗಿಯ ವೈದ್ಯಕೀಯ ಪರಿಸ್ಥಿತಿಯ ಆಧಾರದಲ್ಲಿ ವೈದ್ಯರು ಯಾವ ವಿಧದ ಡಯಾಲಿಸಿಸ್ ಉತ್ತಮ ಎಂಬುದನ್ನು ನಿರ್ಧರಿಸುತ್ತಾರೆ.
ಡಯಾಲಿಸಿಸ್‌ನಲ್ಲಿ ಎಷ್ಟು ವಿಧಗಳಿವೆ?: ಈ ಡಯಾಲಿಸಿಸ್ ವಿಧಾನದಲ್ಲಿ ಮುಖ್ಯವಾಗಿ ಎರಡು ವಿಧಾನಗಳಿವೆ. ಒಂದು ಹಿಮೋ ಡಯಾಲಿಸಿಸ್ ಹಾಗೂ ಇನ್ನೊಂದು ಪೆರಿಟೋನೀಯಲ್ ಡಯಾಲಿಸಿಸ್.
ಹಿಮೋ ಡಯಾಲಿಸಿಸ್ (Hemodialysis): ಈ ವಿಧಾನದಲ್ಲಿ ನಮ್ಮ ದೇಹದಲ್ಲಿನ (ಕಿಡ್ನಿ ರೋಗಿಗಳ) ತ್ಯಾಜ್ಯ ಮತ್ತು ಹೆಚ್ಚುವರಿ ನೀರಿನಂಶವನ್ನು ಹೊರಹಾಕಲು ಒಂದು ಡಯಾಲೈಝರ್ (ಶುದ್ಧೀಕರಣ ಯಂತ್ರ) ಬಳಸಲಾಗುತ್ತದೆ. ಹೀಗೆ, ಈ ಫಿಲ್ಟರ್ ಮೂಲಕ ಶುದ್ಧೀಕರಣಗೊಂಡ ರಕ್ತ ಮರಳಿ ರೋಗಿಯ ದೇಹವನ್ನು ಸೇರಿಕೊಳ್ಳುತ್ತದೆ. ಹಿಮೋಡಯಾಲಿಸಿಸ್ ಪ್ರಾರಂಭಿಸುವ ಮೊದಲು ಒಂದು ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ರಕ್ತನಾಳ ಪರಿಶೋಧಕ ಕ್ರಿಯೆಯನ್ನು ತಜ್ಞರು ನಡೆಸುತ್ತಾರೆ.
ಅಂದರೆ ನಿಮ್ಮ ದೇಹದಿಂದ ಕಲ್ಮಶಯುಕ್ತ ರಕ್ತ ಹೊರಬಂದು ಮತ್ತೆ ಶುದ್ಧೀಕರಣಗೊಂಡ ರಕ್ತ ಮರಳಿ ದೇಹಕ್ಕೆ ಸೇರುವಂತಾಗಲು ರಕ್ತ ತಟ್ಟೆಯನ್ನು ಸಂಪರ್ಕಿಸುವುದು ಮುಖ್ಯವಾಗಿದ್ದು, ಈ ವಿಧಾನದ ಮೂಲಕ ಇದನ್ನು ನಡೆಸಲಾಗುತ್ತದೆ. ಈ ಹಿಮೋಡಯಾಲಿಸಿಸ್ ವಿಧಾನಕ್ಕೆ ಸರಿಸುಮಾರು ನಾಲ್ಕು ಗಂಟೆಗಳ ಸಮಯ ತಗಲುತ್ತೆ ಮತ್ತು ವಾರದಲ್ಲಿ ಮೂರು ಸಲ ಈ ಪ್ರಕ್ರಿಯೆಗೆ ಒಳಗಾಗಬೇಕಾಗಿರುತ್ತದೆ.
ಆದರೆ ರೋಗಿಗಳ ದೇಹಸ್ಥಿತಿಯ ಮೇಲೆ ಈ ಸಂಖ್ಯೆಯನ್ನು ವೈದ್ಯರು ನಿರ್ಧರಿಸುತ್ತಾರೆ, ಕೆಲವೊಮ್ಮೆ ಗಂಭೀರ ಪ್ರಕರಣಗಳಲ್ಲಿ ಡಯಾಲಿಸಿಸ್ ವಿಧಾನಕ್ಕೆ ಹೆಚ್ಚಿನ ಸಮಯ ತಗಲುವ ಸಾಧ್ಯತೆಗಳೂ ಇವೆ.
ಪೆರಿಟೋನೀಯಲ್ ಡಯಾ ಲಿಸಿಸ್ (Peritoneal Dialysis) ಈ ವಿಧಾನದಲ್ಲಿ ಡಯಾಲಿಸಿಸ್ ಯಂತ್ರದ ಬದಲಿಗೆ ರೊಗಿಯ ದೇಹದೊಳಗೇ ರಕ್ತ ಶುದ್ಧೀಕರಣ ವಿಧಾನವನ್ನು ನಡೆಸಲಾಗುತ್ತದೆ.
ಈ ವಿಧಾನದಲ್ಲಿ ರೋಗಿಯ ಹೊಟ್ಟೆ ಭಾಗ ಅಥವಾ ಕಿಬ್ಬೊಟ್ಟೆ ಭಾಗವನ್ನೇ ಫಿಲ್ಟರ್ ಆಗಿ ಬಳಸಿಕೊಳ್ಳಲಾಗುತ್ತದೆ (ಇದನ್ನೇ ಪರಿಟೋನಿಯಮ್ ಎಂದು ಕರೆಯುತ್ತಾರೆ).
ಈ ಡಯಾಲಿಸಿಸ್ ವಿಧಾನವನ್ನು ಪ್ರಾರಂಭಿಸುವ ಮೊದಲು, ಒಂದು ಮೃದುವಾದ ನಳಿಕೆಯನ್ನು (ಕ್ಯಾಥರ್ ಟ್ಯೂಬ್) ರೋಗಿಯ ದೇಹದೊಳಕ್ಕೆ ತೂರಿಸಲು ಒಂದು ಸಣ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ.
ಪ್ರತೀ ಡಯಾಲಿಸಿಸ್ ಸಂದರ್ಭದಲ್ಲಿ ನಿಮ್ಮ ಕಿಬ್ಬೊಟ್ಟೆ ಭಾಗಕ್ಕೆ ಡಯಾಲಿಸೇಟ್ (ನಿರು, ಉಪ್ಪು ಹಾಗೂ ಇನ್ನಿತರ ಮಿಶ್ರಣಗಳಿಂದ ಸಿದ್ಧಪಡಿಸಲಾದ ದ್ರಾವಣ) ಅನ್ನು ಈ ನಳಿಕೆಯ ಮೂಲಕ ಹಾಯಿಸಲಾಗುತ್ತದೆ. ದೇಹದ ಇತರೇ ಭಾಗಗಳಿಗೆ ರಕ್ತ ಸಂಚಾರವಾಗುವಂತೆ ರೋಗಿಯ ಈ ಭಾಗಕ್ಕೂ ರಕ್ತಸಂಚಾರವಾಗುವ ಸಂದರ್ಭದಲ್ಲಿ ಇಲ್ಲಿ ಮೊದಲೇ ಸೇರಿಕೊಂಡಿರುವ ಡಯಾಲಿಸೇಟ್ ದ್ರಾವಣವು ರಕ್ತದಲ್ಲಿರುವ ಹೆಚ್ಚುವರಿ ನೀರಿನಂಶ ಹಾಗೂ ತ್ಯಾಜ್ಯಗಳನ್ನು ಆಯಸ್ಕಾಂತದ ರೀತಿಯಲ್ಲಿ ತನ್ನತ್ತ ಎಳೆದುಕೊಳ್ಳುತ್ತದೆ.
ಹೀಗೆ ಇಲ್ಲಿ ಸಂಗ್ರಹಗೊಂಡ ಈ ತ್ಯಾಜ್ಯ ದ್ರಾವಣವನ್ನು ರೋಗಿಯ ಕಿಬ್ಬೊಟ್ಟೆ ಭಾಗದಿಂದ ಆ ತೂರು ನಳಿಕೆ ಮೂಲಕ ಹೊರಗೆಳೆದು, ಮೊದಲೇ ಅಳವಡಿಸಲಾಗಿರುವ ಒಂದು ಬ್ಯಾಗ್ ನೊಳಕ್ಕೆ ಕಳುಹಿಸಲಾಗುತ್ತದೆ.
ಇದರಲ್ಲೂ ಎರಡು ವಿಧಾನಗಳಿವೆ: 1) ನಿರಂತರ ನಡೆಯುವಿಕೆ ಮೂಲಕ ನಡೆಸಲಾಗುವ ಪೆರಿಟೋನಿಯಲ್ ಡಯಾಲಿಸಿಸ್ (CAPD) ಮತ್ತು ಸ್ವಯಂಚಾಲಿತ ಪೆರಿಟೋನಿಯಲ್ ಡಯಾಲಿಸಿಸ್ (APD) ಕಿಡ್ನಿ ರೋಗಿಗಳ ಪಾಲಿಗೆ ವರದಾನವಾಗಿರುವ ಈ ಡಯಾಲಿಸಿಸ್ ವಿಧಾನವು ರೋಗಿಗಳ ದೇಹದಿಂದ ಹೆಚ್ಚುವರಿ ನೀರು ಮತ್ತು ತ್ಯಾಜ್ಯ ಅಂಶಗಳನ್ನು ಹೊರಹಾಕುವುದಕ್ಕಾಗಿರುವ ಪರಿಣಾಮಕಾರಿ ಚಿಕಿತ್ಸೆಯೆಂದೇ ಪರಿಗಣಿಸಲ್ಪಟ್ಟಿದೆ. ಆದರೆ ಡಯಾಲಿಸಿಸ್ ವಿಧಾನವು ನಮ್ಮ ಕಿಡ್ನಿ ಮಾಡುವ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡದೇ ಇರುವುದರಿಂದ ಈ ವಿಧಾನ ಕಿಡ್ನಿ ಕಾಯಿಲೆಗೆ ಅಥವಾ ಕಿಡ್ನಿ ವೈಫಲ್ಯಕ್ಕೆ ಪರ್ಯಾಯವಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಡಯಾಲಿಸಿಸ್ ವಿಧಾನ ಹೆಚ್ಚು ಪ್ರಯೋಜನಕಾರಿಯಾಗಬೇಕಾದ್ರೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು: ನಿಮಗೆ ಸೂಚಿಸಲಾದ ಶೆಡ್ಯೂಲ್ ಪ್ರಕಾರವೇ ಡಯಾಲಿಸಿಸ್ ಚಿಕಿತ್ಸೆಯನ್ನು ಪೂರ್ಣಗೊಳಿಸಿ. ನಿಮ್ಮ ಕಿಡ್ನಿ ಡಯಟ್ ತಜ್ಞರು ಸೂಚಿಸಿದ ಆಹಾರ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ. ನಿಮ್ಮ ಸಾಮರ್ಥ್ಯ ಮತ್ತು ಹೃದಯದ ಆರೊಗ್ಯವನ್ನು ಉತ್ತೇಜಿಸಲು ಸಾಧ್ಯವಾದಷ್ಟು ದೈಹಿಕ ಚಟುವಟಿಕೆಗಳನ್ನು ನಡೆಸಿ.
ಡಯಾಲಿಸಿಸ್ ನಡೆಸುವ ಸಂದರ್ಭದಲ್ಲಿ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಗಳ ಅನುಭವವಾದಲ್ಲಿ ನಿಮಗೆ ಡಯಾಲಿಸಿಸ್ ನಡೆಸುವವರ ಜೊತೆ ಮುಕ್ತವಾಗಿ ಮಾತನಾಡಿ.
ಡಯಾಲಿಸಿಸ್ ವಿಧಾನ ಯಾರಿಗೆಲ್ಲಾ ಪ್ರಯೋಜನಕಾರಿ?: ಗಂಭೀರ ಸ್ವರೂಪದ ಕಿಡ್ನಿ ಹಾನಿ ಪ್ರಕರಣ (Acute kidney injury): ಇದ್ದಕ್ಕಿದ್ದಂತೆ ಕಿಡ್ನಿ ವೈಫಲ್ಯ ಅಥವಾ ಕಿಡ್ನಿ ಹಾನಿಯಂತ ಪ್ರಕರಣಗಳಲ್ಲಿ, ಇಂತಹ ರೋಗಿಗಳಿಗೆ ಅವರು ದಾಖಲುಗೊಂಡಿರುವ ಆಸ್ಪತ್ರೆಯಲ್ಲೇ ರಕ್ತನಾಳಗಳ ಮೂಲಕ ಶುದ್ಧೀಕರಣ ದ್ರಾವಣವನ್ನು ಹರಿಸಿ ದೇಹದ ತ್ಯಾಜ್ಯಗಳನ್ನು ಹೊರತೆಗೆಯುವ ಮೂಲಕ ರಕ್ತ ಶುದ್ಧೀಕರಣ ಮಾಡಲಾಗುವುದು.
ಆದರೆ ಗಂಭೀರ ಪ್ರಕರಣದಲ್ಲಿ ರೋಗಿಗಳಿಗೆ ಅವರ ಕಿಡ್ನಿಯ ಆರೋಗ್ಯ ಸುಧಾರಿಸುವವರೆಗೆ ಡಯಾಲಿಸಿಸ್‌ನ ಅಗತ್ಯ ಉಂಟಾಗಬಹುದು.
ಕಿಡ್ನಿ ವೈಫಲ್ಯ (Kidney failure): ನಿಮ್ಮ ಕಿಡ್ನಿಗಳ ಕಾರ್ಯ ಸಾಮರ್ಥ್ಯ 10-15% ಮಟ್ಟಕ್ಕೆ ತಲುಪಿದಾಗ, ನಿಮ್ಮ ಕಿಡ್ನಿಗಳ ಕಾರ್ಯನಿರ್ವಹಣೆಗೆ ಹೆಚ್ಚುವರಿ ಬಾಹ್ಯ ಬೆಂಬಲದ ಅಗತ್ಯವಿರುತ್ತದೆ. ಈ ಹಂತವನ್ನು ಅಂತಿಮ ಹಂತದ ಕಿಡ್ನಿ ಕಾಯಿಲೆ ಎಂದು ಕರೆಯಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಡಯಾಲಿಸಿಸ್ ವಿಧಾನ ಮಾತ್ರವೇ ರೋಗಿಯ ಕಿಡ್ನಿಗಳು ಮಾಡುವ ಕಾರ್ಯವನ್ನು ಮಾಡಲು ಸಾಧ್ಯ. ಈ ಸಮಸ್ಯೆಯಿಂದ ಬಳಲುತ್ತಿರುವ ರೊಗಿಗಳಲ್ಲಿ ಅವರ ಉಳಿದ ಜೀವಮಾನದವರೆಗೆ ಅಥವಾ ಅವರಿಗೆ ಕಿಡ್ನಿ ಕಸಿ ವಿಧಾನ ನಡೆಯುವಲ್ಲಿವರೆಗೆ ಡಯಾಲಿಸಿಸ್ ವಿಧಾನವೇ ಪರಿಹಾರವಾಗಿರುತ್ತದೆ.