ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಹಿತ ವಿವಿಧೆಡೆ ವಂಚನಾ ಜಾಲ ಮತ್ತೆ ಸಕ್ರಿಯವಾಗಿದೆ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇz ಇರುತ್ತಾರೆ ಎಂಬ ಮಾತಿನಂತೆ ಹಲವರನ್ನು ವಂಚನಾ ಜಾಲಕ್ಕೆ ಸಿಲುಕಿಸಿ ಹಣ ದೋಚುವ ಕಾಯಕ ಎಗ್ಗಿಲ್ಲದೆ ನಡೆಯುತ್ತಿದೆ. ಬುದ್ಧಿವಂತರ ಜಿಲ್ಲೆ ಎಂದೇ ಕರೆಸಿಕೊಳ್ಳುವ ದಕ್ಷಿಣ ಕನ್ನಡದಲ್ಲಿ ಸಾವಿರಾರು ಮಂದಿ ನಕಲಿ ಸಂಸ್ಥೆಯ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಜನರು ಲಾಭದ ಆಸೆಗಾಗಿ ಬಲಿಯಾಗುತ್ತಲೇ ಇದ್ದಾರೆ.
ಮತ್ತೊಂದು ಆಪ್ ಸಕ್ರಿಯ! ಬೆಳ್ತಂಗಡಿ ತಾಲೂಕಿನಲ್ಲಿ ಸಕ್ರಿಯವಾಗಿರುವ ವಂಚನಾ ಜಾಲದ ಆಪ್‌ಗಳಲ್ಲಿ ಹಣ ತೊಡಗಿಸಿದವರು ಇದೀಗ ಪರಿತಪಿಸುತ್ತಿದ್ದಾರೆ. ಆರ್‌ಪಿಸಿ ಹೆಸರಿನ ಸಂಸ್ಥೆ ತನ್ನ ಗ್ರಾಹಕರಿಗೆ ಮೋಸ ಮಾಡಿದ ಬೆನ್ನಲ್ಲಿಯೇ ಮತ್ತೊಂದು ಆಪ್ ಸಿ ಫೋರ್ ಎಂಬ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದು ಜನರಿಗೆ ಪಂಗನಾಮ ಹಾಕುತ್ತಿದೆ ಎಂದು ಆರೋಪ ಕೇಳಿ ಬಂದಿದೆ.
ಆರ್‌ಪಿಸಿ ಸಂಸ್ಥೆ ಗ್ರಾಹಕರನ್ನು ಮೋಸದ ಬಲೆಗೆ ಸಿಲುಕಿಸಿ ಹಲವರು ಹಣ ಕಳೆದುಕೊಳ್ಳುವಂತೆ ಮಾಡಿತ್ತು. ಜತೆಗೆ ದೊಡ್ಡ ಮೊತ್ತದ ಹಣ ಗಳಿಸಿದ ಕೆಲವರ ಬ್ಯಾಂಕ್ ಖಾತೆ ಫ್ರೀಜ್ ಆಗಿದ್ದು ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಚೈನ್ ಲಿಂಕ್ ಮಾದರಿಯ ಈ ಆಪ್‌ಗಳಲ್ಲಿ ನಿಗದಿತ ಮೊತ್ತ ತೊಡಗಿಸಿ ವೀಡಿಯೋಗಳನ್ನು ವೀಕ್ಷಿಸುವ ಮೂಲಕ ಹಣ ಗಳಿಸುವ ಅಮಿಷ ನೀಡಲಾಗಿತ್ತು. ಅಲ್ಲದೆ ನಾನಾ ಆಫರ್, ಹೆಚ್ಚಿನ ಬಡ್ಡಿಯ ಆಸೆಗೆ ಸಿಲುಕಿ ತಮ್ಮ ಕೈಯನ್ನು ತಾವೇ ಸುಟ್ಟುಕೊಳ್ಳುವ ಪರಿಸ್ಥಿತಿ ಗ್ರಾಹಕರಿಗೆ ಎದುರಾಗಿತ್ತು. ಸಂಸ್ಥೆಯ ಬಣ್ಣ ಬಣ್ಣದ ಭರವಸೆ ಕೇಳಿ ಆಕರ್ಷಿತರಾದ ಅನೇಕ ಮಂದಿ ಹಣ ತೊಡಗಿಸಿ ಮೋಸ ಹೋಗಿದ್ದರು. ಚೈನ್ ಲಿಂಕ್‌ಗೆ ಸದಸ್ಯರನ್ನು ಸೇರಿಸಿದವರು ಆ ಆಪ್ ನಿಷ್ಕ್ರಿಯಗೊಳ್ಳುತ್ತಿದ್ದಂತೆಯೇ ಉತ್ತರ ಕೊಡುವ ಸ್ಥಿತಿಯಲ್ಲಿಲ್ಲದೆ ಮಾನಸಿಕ ತೊಳಲಾಟದಿಂದ ಬಳಲುವಂತಾಗಿದೆ. ಆರ್‌ಪಿಸಿ ಸಂಸ್ಥೆಯನ್ನು ನಂಬಿ ಆ ಸಂಸ್ಥೆಯನ್ನು ಸಮರ್ಥಿಸಿಕೊಂಡು ಹಲವರನ್ನು ಗ್ರೂಪ್‌ಗೆ ಸೇರಿಸಿಕೊಂಡು ಹಣ ಕಳೆದುಕೊಂಡ ನಂತರ ಅದೆಷ್ಟೋ ಜನರು ದೂರವಾಣಿ ಕರೆಯನ್ನೂ ಸ್ವೀಕರಿಸಿದ ತಲೆ ಮರೆಸಿಕೊಳ್ಳುವಂತಾಗಿದೆ. ಆದರ ಬೆನ್ನಿಗೇ ಮತ್ತೊಂದು ಆಪ್ ಜನರನ್ನು ದೋಚಲಾರಂಭಿಸಿದೆ.
ಮತ್ತೊಂದು ಆಪ್ ಬಂದಿದೆ!: ಬೆಳ್ತಂಗಡಿ ತಾಲೂಕು ಸಹಿತ ವಿವಿಧೆಡೆ ಆರ್‌ಪಿಸಿ ಆಪ್ ಮುಳುಗುತ್ತಿದ್ದಂತೆಯೇ ಈಗ ಮತ್ತೊಂದು ಹೊಸ ಆಪ್ ಆರಂಭಗೊಂಡಿದೆ. ಇದರಲ್ಲಿ ರೂ ೧,೫೦೦, ೬೫೦೦ ಮತ್ತು ೨೪,೦೦೦ ರೂ. ತನಕ ಹಣ ಹೂಡಿಕೆ ಮಾಡಿದ ಬಳಿಕ ವಿಡಿಯೋ ವೀಕ್ಷಿಸುವ ಮೂಲಕ ಹಣ ಗಳಿಸುವ ಕುರಿತು ತಿಳಿಸಲಾಗಿದೆ. ಆರ್‌ಪಿಸಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಯನ್ನು ಕೆನಡಿ ಎಂಬ ಹೆಸರಿನ ವಿದೇಶದ ನಂಬರಿಗೆ ತಿಳಿಸಬೇಕಿತ್ತು. ಅದರಂತೆಯೇ ಹೊಸ ಆಪ್ ಸಿ ಫೋರ್‌ನಲ್ಲಿಯೂ ನಡೆಯುತ್ತಿದೆ. ಇದರ ವಾಟ್ಸಪ್ ಗ್ರೂಪ್ ಕೂಡ ತೆರೆದುಕೊಂಡಿದೆ. ಅಡ್ಮಿನ್ ತನ್ನ ಹೆಸರು, ಡಿ.ಪಿ. ಮರೆಮಾಚಿ ಗ್ರೂಪ್ ರಚಿಸಿದ್ದಾನೆ. ಲಿಂಕ್ ಮೂಲಕ ಈ ಗ್ರೂಪಿಗೆ ಸೇರಲು ಅವಕಾಶ ಕಲ್ಪಿಸಲಾಗಿದೆ. ಇದರ ಬಗ್ಗೆ ಹಲವರು ಗ್ರೂಪ್ ಅಡ್ಮಿನ್‌ಗೆ ಕರೆ ಮಾಡಿದ್ದು ಆತ ತುಳುವಿನಲ್ಲಿ ಮಾತಾಡಿ ಸ್ಥಳೀಯ ಪೇಟೆಯವನೆಂದು ಹೇಳುತ್ತಿದ್ದಾನೆ. ಆದರೆ ತಾನಿರುವ ಸ್ಥಳ, ಹೆಸರು ಹಾಗೂ ಇತರ ವಿವರಗಳನ್ನು ನೀಡುತ್ತಿಲ್ಲ. ಈ ಸಕ್ರಿಯ ವಂಚನಾ ಜಾಲದ ನಿಜ ವಿಷಯ ತಿಳಿಯಲು ತಾಲೂಕಿನ ಕೆಲವು ಜನ ಮುಂದಾಗಿದ್ದು ಆತನ ನಂಬರ್ ಆಧಾರದಲ್ಲಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳುತ್ತಿದ್ದಾರೆ. ಆರ್‌ಪಿಸಿಯನ್ನು ನಂಬಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದ ಕೆಲವರು ಸದ್ದಿಲ್ಲದೆ ಸುದ್ದಿಲ್ಲದೆ ವಾಟ್ಸಾಪ್ ಗ್ರೂಪ್‌ನಿಂದ ಮಾಯವಾಗಿದ್ದಾರೆ. ಮೋಸದ ಅರಿವಾಗಿ ಕೆಲವರು ತಮ್ಮ ಆಪ್ತರನ್ನು ಎಚ್ಚರಿಸುತ್ತಿದ್ದಾರೆ. ಈ ಮೋಸದ ಬಲೆಗೆ ಸಿಲುಕಿದವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಇದೀಗ ಮತ್ತೆ ಮತ್ತೊಂದು ಮೋಸದ ಆಪ್ ಕಾರ್ಯಾಚರಿಸುತ್ತಿದೆ. ಜನರನ್ನು ದೋಚುವ ಕಾರ್ಯ ನಡೆಸುತ್ತಿದೆ. ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ.