ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಸಮೀಪದ ಕುತ್ಯಾರ್ ರಸ್ತೆಯ ರಾಮನಗರದಲ್ಲಿರುವ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರ ಕೋಟ್ಯಾಂತರ ಡೆಪಾಸಿಟ್ ಹಣವನ್ನು ಗುಳುಂ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ೨೦೦ಕ್ಕೂ ಅಧಿಕ ಮಂದಿಯ 10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಾಪಸ್ ಕೊಡದೆ ವಂಚಿಸಲಾಗುತ್ತಿದೆ ಎಂದು ಸೊಸೈಟಿಯ ಮಾಜಿ ಅಧ್ಯಕ್ಷ ಸಿ.ಎಚ್. ಪ್ರಭಾಕರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಅವರ ವಿರುದ್ಧ ದೂರು ಕೇಳಿ ಬಂದಿದೆ. ಸಂತ್ರಸ್ತ ಗ್ರಾಹಕರು ತಾವು ಹಣ ಕಳೆದುಕೊಳ್ಳುತ್ತಿರುವ ಕುರಿತು ಸುದ್ದಿ ಬಿಡುಗಡೆಯೊಂದಿಗೆ ಆತಂಕ ವ್ಯಕ್ತಪಡಿಸಿದ್ದಾರೆ. ಡೆಪಾಸಿಟ್ ಇಟ್ಟವರ ಪೈಕಿ 9 ಜನ ನೀಡಿದ ದೂರಿನಂತೆ ಸಹಕಾರ ಸಂಘಗಳ ಕಾಯ್ದೆ ಸೆಕ್ಷನ್ 70 ರ ಅಡಿಯಲ್ಲಿ ಸಹಕಾರ ಸಂಘಗಳ ನಿಬಂಧಕರ ನ್ಯಾಯಾಲಯದಲ್ಲಿ ದಾವೆ ದಾಖಲಿಸಲಾಗಿದೆ. ಸಹಕಾರ ಸಂಘಗಳ ಕಾಯ್ದೆ ಕಲಂ 64 ರ ಪ್ರಕಾರ ಈಗಾಗಲೇ ವಿಚಾರಣೆ ಆರಂಭವಾಗಿದ್ದು ಸಹಕಾರಿ ಇಲಾಖೆಯ ಅಧೀಕ್ಷಕ ಗೋಪಾಲ್ ವಿಚಾರಣಾಧಿಕಾರಿಯಾಗಿ ವಿಚಾರಣೆ ಆರಂಭಿಸಿದ್ದಾರೆ.
ಈ ಮಧ್ಯೆ ಮಾಜಿ ಅಧ್ಯಕ್ಷ ಸಿ.ಎಚ್.ಪ್ರಭಾಕರ್ ಮತ್ತು ಸಿಇಓ ಚಂದ್ರಕಾಂತ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಎಚ್. ಪ್ರಭಾಕರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಹಾಲಿ ಹಂಗಾಮಿ ಅಧ್ಯಕ್ಷರಾಗಿ ವಿಶ್ವನಾಥ್ ಆರ್. ನಾಯಕ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೊಸೈಟಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ವಿಶ್ವನಾಥ ಆರ್. ನಾಯಕ್ ಅವರನ್ನು ಸಂಪರ್ಕಿಸಲಾಯಿತಾದರೂ ಅವರು ಸಂಪರ್ಕಕ್ಕೆ ಲಭ್ಯರಾಗಿಲ್ಲ.
ಸಿಇಓ ಮತ್ತು ನಿಕಟಪೂರ್ವ ಅಧ್ಯಕ್ಷ ವಿರುದ್ಧ ಆರೋಪ: ಶ್ರೀರಾಮ ಕ್ರೆಡಿಕ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಹೂಡಿಕೆ ಮಾಡಿರುವ ಹಣದಲ್ಲಿ ಅವ್ಯವಹಾರ ಆಗಿದೆ. ಇದಕ್ಕೆ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷ ಸಿ.ಹೆಚ್. ಪ್ರಭಾಕರ್ ಮತ್ತು ಸಿಇಓ ಚಂದ್ರಕಾಂತ್ ಅವರು ಕಾರಣ ಎಂದು ಸಂತ್ರಸ್ತರು ಆರೋಪಿಸುತ್ತಿದ್ದಾರೆ. ಇದರ ಜೊತೆ ಕೆಲವು ನಿರ್ದೇಶಕರ ಬಗ್ಗೆಯೂ ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಿಇಓ ಚಂದ್ರಕಾಂತ್ ವಿರುದ್ಧ ದೂರು:
ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಎಂಬವರು ಸಂಘಕ್ಕೆ ಸೇರಿದ ಹಣ ಹಾಗೂ ಸ್ವತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದು ಲೆಕ್ಕಪರಿಶೋಧನೆ ಸಹಿತ ಸಮಗ್ರ ತನಿಖೆ ನಡೆಸಲು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಂಘದ ಆಡಳಿತ ಮಂಡಳಿ ಕಳೆದ ಅಕ್ಟೋಬರ್‌ನಲ್ಲಿ ದೂರು ನೀಡಿತ್ತು.
ಉಳಿತಾಯ ಖಾತೆಯಲ್ಲಿ ವಂಚನೆ: ಶ್ರೀರಾಮ ಕ್ರೆಡಿಕ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಸಿಇಓ ಚಂದ್ರಕಾಂತ್
ಹಲವಾರು ಉಳಿತಾಯ ಖಾತೆಗಳನ್ನು ತೆರೆದು ವಂಚಿಸಿರುವ ಆರೋಪಗಳಿದೆ. ಈ ಬಗ್ಗೆ ಆಡಳಿತ ಮಂಡಳಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಇದರಂತೆ ಈವರೆಗೆ ಆರು ಕೋಟಿ ರೂಪಾಯಿಗಿಂತ ಅಧಿಕ ಮೊತ್ತದ ಹಣವನ್ನು ಬ್ಯಾಂಕಿಂಗ್ ನಿಯಮ ಪಾಲಿಸದೆ ತೆಗೆಯಲಾಗಿದೆ ಎಂದು ವಿವರಿಸಲಾಗಿದೆ. ಅಲ್ಲದೆ ವಿಧಿವಶರಾಗಿರುವ ತನ್ನ ತಂದೆಯ ಹೆಸರಿನ ಖಾತೆಯನ್ನು ಮುಚ್ಚದೆ ಕಾನೂನು ಬಾಹಿರವಾಗಿ ಹಣ ತೆಗೆದಿರುವುದಾಗಿಯೂ ಗ್ರಾಹಕರೋರ್ವರು ಆರೋಪಿಸಿದ್ದಾರೆ.
ಚಿನ್ನದ ಸಾಲಗಳಲ್ಲೂ ಮೋಸ-ಮೌಲ್ಯಕ್ಕಿಂತ ಅಧಿಕ ಮೊತ್ತ ನೀಡಿರುವ ಆರೋಪ:
ಸಂತ್ರಸ್ತರ ಚಿನ್ನದ ಮೇಲಿನ ಸಾಲಗಳಲ್ಲಿಯೂ ಬಹುದೊಡ್ಡ ಮೋಸವಾಗಿದೆ ಎಂದೂ ಆರೋಪ ಕೇಳಿ ಬಂದಿದೆ. ಒಂದು ಮಾಹಿತಿಯ ಪ್ರಕಾರ 8 ಗ್ರಾಂ ಚಿನ್ನಕ್ಕೆ 25 ಲಕ್ಷ ರೂ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದಾರೆ ಎಂಬ ಆರೋಪವಿದೆ. ಅಲ್ಲದೆ ಈ ಹಿಂದೆ ಆಡಳಿತ ಮಂಡಳಿ ಸಿಇಓರವರ ವಿರುದ್ಧ ದಾಖಲಿಸಿರುವ ದೂರಿನಲ್ಲಿಯೂ ಇದರ ಪ್ರಸ್ತಾಪವಿದ್ದು ಅವರು ಕುಟುಂಬ ಸದಸ್ಯರ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಘದ ಯಾವುದೇ ಖಾತೆಗಳಿಗೆ ಪಿಗ್ಮಿ ಮೊತ್ತ ಜಮೆಯಾಗಿಲ್ಲ:
ಪಿಗ್ಮಿ ಮೊತ್ತ ಸಂಗ್ರಹಕ್ಕಾಗಿ ಐವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಬಹುತೇಕ ಯಾವುದೇ ಹಣ ಸೊಸೈಟಿಯ ಖಾತೆಗೆ ಜಮೆ ಆಗಿಲ್ಲ ಎಂದು ಆಡಳಿತ ಮಂಡಳಿಯವರು ಸಿಇಓರವರ ವಿರುದ್ಧ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಸಂತ್ರಸ್ತರು ಈ ಎಲ್ಲಾ ಅವ್ಯವಹಾರಗಳಲ್ಲಿ ಅಧ್ಯಕ್ಷರು ಮತ್ತು ಸಿಇಓ ಅವರ ಪಾತ್ರವಿರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಯಾವಾಗ ಸಿಗುತ್ತದೆ ಸಂತ್ರಸ್ತರಿಗೆ ಹಣ:
ಈಗಾಗಲೇ ಡೆಪಾಸಿಟ್ ಇಟ್ಟವರು ತಮ್ಮ ಹಣವನ್ನು ವಾಪಸ್ ಪಡೆಯಲು ನಿರ್ಧರಿಸಿರುವುದರಿಂದ ಅವರೆಲ್ಲರೂ ಹಣ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಅಲ್ಲದೆ ತಾವು ಮಾಡಬೇಕಾಗಿರುವ ಕೆಲಸ ಬಾಕಿಯಿದೆ. ಅದಕ್ಕಾಗಿ ಇದೇ ಹಣವನ್ನು ನಂಬಿಕೊಂಡಿದ್ದೇವೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
ತನಿಖೆ ಶುರುವಾಗಿದೆ:
ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಡೆಪಾಸಿಟ್ ಇಟ್ಟವರ ಪೈಕಿ 9 ಜನ ದಾವೆ ಹೂಡಿದ್ದಾರೆ. ಈ ಬಗ್ಗೆ ಸಹಕಾರ ಸಂಘಗಳ ಕಾಯ್ದೆ ಸೆಕ್ಷನ್ 70 ರ ಅಡಿಯಲ್ಲಿ ದಾವೆ ದಾಖಲಿಸಲಾಗಿದ್ದು ನ್ಯಾಯಾಲಯದ ಪ್ರಕಾರ ತೀರ್ಮಾನ ಕೈಗೊಳ್ಳಲಿದ್ದೇವೆ. ಸಹಕಾರ ಸಂಘಗಳ ಕಾಯ್ದೆ ಕಲಾಂ 64 ರ ಪ್ರಕಾರ ಈಗಾಗಲೇ ವಿಚಾರಣೆ ಆರಂಭವಾಗಿದ್ದು ಅಧೀಕ್ಷಕರಾದ ಗೋಪಾಲ್‌ರವರು ವಿಚರಣಾಧಿಕಾರಿಯಾಗಿ ವಿಚಾರಣೆ ಆರಂಭಿಸಿದ್ದಾರೆ ಎಂದು ಸಹಕಾರ ಸಂಘಗಳ ಇಲಾಖೆಯ ಸಹಕಾರಿ ಸಂಘಗಳ ನಿಬಂಧಕ ರಮೇಶ್ ಸುದ್ದಿ ನ್ಯೂಸ್‌ಗೆ ತಿಳಿಸಿದ್ದಾರೆ.
ಸುದ್ದಿ ಚಾನೆಲ್‌ನಲ್ಲಿ ಅಭಿಪ್ರಾಯ
ಶ್ರೀರಾಮ ಕೋ ಆಪರೇಟಿವ್ ಸೊಸೈಟಿಯ 200 ಕ್ಕಿಂತಲೂ ಹೆಚ್ಚು ಸಂತ್ರಸ್ತರಲ್ಲಿ ಹಲವರು ಸುದ್ದಿಯೊಂದಿಗೆ ಮಾತನಾಡಿದ್ದಾರೆ. ಅದರಲ್ಲಿ ಹೆಚ್ಚಿನ ಅಭಿಪ್ರಾಯಗಳನ್ನು ಸುದ್ದಿ ನ್ಯೂಸ್ ಬೆಳ್ತಂಗಡಿ ಯೂ ಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುವುದು.
ನಮ್ಮ ಹಣದ ಬಗ್ಗೆ ಆತಂಕವಿದೆ ನನಗೆ 74. 5 ಲಕ್ಷ ಬರಬೇಕು : ನಾನು ನಿವೃತ್ತ ಶಿಕ್ಷಣಾಧಿಕಾರಿ. ನಾನು ಪಿಂಚಣಿ ಮೊತ್ತ ಮತ್ತು ನನ್ನ ಹೆಂಡತಿಯ ವ್ಯಾಪಾರ ಹಣ 74.5 ಲಕ್ಷ ರೂ ಡೆಪಾಸಿಟ್ ಇಟ್ಟಿದ್ದೇನೆ. 11 ರಿಂದ 12 ಶೇಕಡಾ ಬಡ್ಡಿ ಕೊಡುವ ಆಕರ್ಷಣೆ ಇರಬಹುದು. ನನ್ನ ಮಗಳು ಎಂಬಿಬಿಎಸ್ ಮಾಡಿ ಎಂಡಿ ಪರೀಕ್ಷೆಗೆ ಕುಳಿತ ನಂತರ ಅವಳಿಗೆ ಹಣ ಬೇಕಾಗಿತ್ತು ಅದಕ್ಕಾಗಿ ಸಿಇಓ ಚಂದ್ರಕಾಂತ್‌ರವರನ್ನು ಕರೆ ಮಾಡಿ ಸಂಪರ್ಕಿಸಿದಾಗ ಅವರು ಇವತ್ತು, ನಾಳೆ ಅಂತ ಹೇಳಿ ಮೂರು ತಿಂಗಳಿನಿಂದ ಅಲೆದಾಡಿಸುತ್ತಿದ್ದಾರೆ. ಇದಾಗುವಾಗ ಹಲವರಿಗೆ ಹೀಗೆ ಆಗಿದ್ದು ಗೊತ್ತಾಯಿತು. ತದ ನಂತರ ಸಂತ್ರಸ್ತರ ಗುಂಪು ಕಟ್ಟಿಕೊಂಡೆವು. ನನ್ನ ಮಗಳಿಗೆ ಎಂ.ಡಿ. ಓದಿಸಲು ಸಾಧ್ಯವಾಗಿಲ್ಲ. ಯಾಕಂದ್ರೆ ನಮ್ಮಲ್ಲಿ ಇದ್ದ ಹಣವನ್ನೆಲ್ಲ ಬ್ಯಾಂಕ್‌ನಲ್ಲಿ ಇಟ್ಟಿದ್ದೇವೆ. ನನ್ನ ಮಗಳಿಗೆ ನಾನು ಯಾವ ತ್ಯಾಗ ಮಾಡ್ಬೇಕು ಗೊತ್ತಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ ನಾನಿದ್ದೇನೆ. ಬ್ಯಾಂಕ್ ನಷ್ಟವಾಗಲು ಅಧ್ಯಕ್ಷರು, ಸಿಇಓ ಅವರ ಮಟ್ಟದಲ್ಲಿ ಸಾಲ ನೀಡಿರುವುದು. ಒಬ್ಬ ವ್ಯಕ್ತಿಗೆ 25 ಲಕ್ಷ ಚಿನ್ನ ಅಡಮಾನ ಇಟ್ಟು ಸಾಲ ಕೊಟ್ಟಿದ್ದಾರೆ. ಇನ್ನೊಂದು ವದಂತಿಯ ಪ್ರಕಾರ 8 ಗ್ರಾಂಗೆ 25 ಲಕ್ಷ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಚಿನ್ನವನ್ನು ಪರೀಕ್ಷಿಸುವವರು ಆ ಬ್ಯಾಂಕ್‌ನಲ್ಲಿಲ್ಲ. ದಿನನಿತ್ಯ ಬ್ಯಾಂಕ್‌ಗೆ ನಾವು ಹೋಗುತ್ತೇವೆ ನಮ್ಮನ್ನು ಕೇಳುವವರಿಲ್ಲ. ನಾನು ಅದರ ಅಧ್ಯಕ್ಷರನ್ನು ಫೋನ್‌ನಲ್ಲಿ ಮಾತಾಡಿಸಿzನೆ ಅವರು ಮನೋನ್ಮಯವಾಗಿ ಮಾತನಾಡುತ್ತಾರೆ. ಆದರೆ ಏನೂ ಮಾಡಿಲ್ಲ. ನನಗೆ ಅಧ್ಯಕ್ಷರು ಮತ್ತು ಸಿಇಓ ಸಹಿಯಿರುವ 2 ಚೆಕ್, ಒಂದು ಸಹಿ ಇರುವ 1ಚೆಕ್ 1-03-2025 ರ ದಿನಾಂಕದಲ್ಲಿ ಚೆಕ್ ಕೊಟ್ಟಿದ್ದಾರೆ. ಆದರೆ ಚೆಕ್‌ನಲ್ಲಿ ಅಮೌಂಟ್ ಬರೆಯಲಿಲ್ಲ. ಚಂದ್ರಕಾಂತ್ ನನ್ನ ಶಿಷ್ಯನಾಗಿ ನನಗೆ 50 ಲಕ್ಷ ರೂಪಾಯಿಯ ಚೆಕ್ ಕೊಟ್ಟಿದ್ದಾರೆ. ನಾವೀಗ ಶ್ರೀರಾಮ ಸಂಜೀವಿನಿ ಸಂಘ ಮಾಡಲು ಹೊರಟಿದ್ದೇವೆ. ಆಡಳಿತಾಧಿಕಾರಿಯನ್ನು ನೇಮಿಸಿದರೆ ಬ್ಯಾಂಕ್ ಮುಳುಗುತ್ತದೆ. ಹೀಗಾಗಬಾರದು ಅಂತ ನಾವು ಪಣ ತೊಟ್ಟಿದ್ದೇವೆ. ಎ ಗ್ರೇಡ್ ಸದಸ್ಯತ್ವ ಮಾಡುತ್ತಿದ್ದೇವೆ. ಹೀಗಿರುವಾಗ ಬ್ಯಾಂಕ್ ನಿರ್ದೇಶಕ ಪ್ರಮೋದ್ ಕುಮಾರ್ ಸದಸ್ಯತ್ವ ನೀಡಲು ಆಗುವುದಿಲ್ಲ ಅಂತ ಹೇಳುತ್ತಿದ್ದಾರೆ. ಈಗಾಗ್ಲೇ ನಾವು 200 ಮಂದಿಯ ಅರ್ಜಿ ಕೊಟ್ಟಿದ್ದೇವೆ. ನಮಗೆ ನಮ್ಮ ಹಣದ ಬಗ್ಗೆ ಆತಂಕವಿದೆ. – ಕೆ.ಜಿ. ಲಕ್ಷ್ಮಣ್ ಶೆಟ್ಟಿ ಅಧ್ಯಕ್ಷರು ಸಂತ್ರಸ್ತರ ಸಮಿತಿ
ನಾನು ಪ್ರತಿನಿತ್ಯ ಬ್ಯಾಂಕ್‌ಗೆ ಹೋದರೂ ಹಣ ಕೊಡುತ್ತಿಲ್ಲ: ನನ್ನದು 7 ಲಕ್ಷ ರೂಪಾಯಿ ಇದೆ. ಇದಕ್ಕಾಗಿ ಆರು ತಿಂಗಳಿಂದ ಪ್ರತಿದಿನ ಬ್ಯಾಂಕ್ ಗೆ ಹೋಗುತ್ತೇನೆ. ಪ್ರತಿದಿನವೂ ಕೂಡ ಹೋದರೂ ಯಾವುದೇ ಉತ್ತರ ನೀಡುವುದಿಲ್ಲ. ಮಗನ ವಿದ್ಯಾಭ್ಯಾಸಕ್ಕಾಗಿ ಇಟ್ಟ ಹಣವಾಗಿದೆ. ಯಾರೂ ಕೂಡ ಮುಖ ನೋಡಿ ಮಾತಾಡುತ್ತಿಲ್ಲ. ನಂಬಿಕೆ ಇಲ್ಲದಂತಾಗಿದೆ. – ಭಾರತಿ, ಸಂತ್ರಸ್ತೆ
ಪ್ರಭಾಕರ್‌ರವರ ಆತ್ಮೀಯತೆಯಿಂದ ಸ್ನೇಹಿತನ ಹಣ ಡೆಪಾಸಿಟ್ ಇಟ್ಟೆ: ಪ್ರಭಾಕರ್ ರವರ ಪರಿಚಯ,ಆತ್ಮೀಯತೆಯ ಮೇಲೆ ನಾನು ನನ್ನ ಸ್ನೇಹಿತನ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದೇನೆ. ಆ ನಂತರ ಅವರು ಹಣ ತೆಗೆಯಲು ಶುರು ಮಾಡಿದಾಗ ತೊಂದರೆ ಆಯಿತು. ಎರಡು ಲಕ್ಷ ಹಣ ಪಡೆಯುವಾಗ ಅಲೆದಾಟ ಮಾಡಿಸಿದರು. ನಂತರ ಹಣ ಬರುತ್ತದೆ ಅಂತ ಹೇಳಿದರು. ನನ್ನ ಸ್ನೇಹಿತನಿಗೆ ನಾನು ಚೆಕ್ ಕೊಟ್ಟಿದ್ದೇನೆ. ಬೇರೆಯವರಿಗೆ 35 ಸಾವಿರ 3 ತಿಂಗಳಿಗೆ ಬಡ್ಡಿಕೊಟ್ಟು ಹಣ ಪಡೆದು ನನ್ನ ಸ್ನೇಹಿತನಿಗೆ ಕೊಟ್ಟಿದ್ದೇನೆ. ಇದಾದ ನಂತರ ನಾನಿಟ್ಟ ಬ್ಯಾಂಕ್ ನ ಅಧ್ಯಕ್ಷರನ್ನು ಕೇಳಿದಾಗ ಸಿ ಇ ಓ ಚಂದ್ರಕಾಂತ್ ಅವ್ಯವಹಾರ ಮಾಡಿದ್ದಾರೆ, ನಾನು ಬ್ಯಾಂಕ್ ನಿಂದ ದೂರ ನಿಂತಿದ್ದೇನೆ ಅಂತ ಹೇಳಿದರು. ಆ ನಂತರ 5 ಲಕ್ಷ ಹಣ ಕೊಟ್ಟಿದ್ದಾರೆ. ಈಗ ಪ್ರಭಾಕರ್ ರವರು ನನ್ನನ್ನು ಹೊರಗಿಟ್ಟಿದ್ದಾರೆ.ನಾನು ಕೊಡುವುದು ಹೇಗೆ ಅಂತ ಹೇಳಿದರು. ಚಂದ್ರಕಾಂತ್ ಗೆ ದಿನಕ್ಕೆ ನಾಲ್ಕು ಬಾರಿ ಫೋನ್ ಮಾಡಿದ್ರೂ ಅವರು ಕರೆ ಸ್ವೀಕರಿಸುವುದಿಲ್ಲ. – ಮೋಹನ ಕಲ್ಲೂರಾಯ
2022-23ರ ಆಡಿಟ್ ರಿಪೋರ್ಟ್ ಸರಿಯಿದೆ-ಪ್ರಕರಣ ಕೋರ್ಟ್‌ನಲ್ಲಿದೆ-ಹೆಚ್ಚು ಮಾತನಾಡಲ್ಲ: 2022-23ರ ಸಾಲಿನ ಆಡಿಟ್ ರಿಪೋರ್ಟ್ ಬಂದಿದ್ದು ಅದರಲ್ಲಿ ಎಲ್ಲವೂ ಸರಿಯಿದೆ ಅಂತ ಎಲ್ಲಾ ಡೈರಕ್ಟರ್ಸ್ ಸಹಿ ಹಾಕಿ ಕೊಟ್ಟಿದ್ದಾರೆ. 23-24ರ ಆಡಿಟ್ ಆಗಿಲ್ಲ. ಆಡಿಟ್ ಮಾಡಬೇಕು ಅಂತ ಬರೆದಿದ್ದೇವೆ. ಈ ಬಗ್ಗೆ ತನಿಖೆಯಿರುವುದರಿಂದ ಯಾವುದೇ ಮಾಹಿತಿ ನೀಡುವುದಿಲ್ಲ. ನನ್ನನ್ನು ಸಸ್ಪೆಂಡ್‌ನಲ್ಲಿಟ್ಟು ಮಾಡಿರುವ ಆಡಿಟ್ ಬಗ್ಗೆ ನಾನು ಇಲ್ಲದೇ ಆಡಿಟ್ ಮಾಡಿದ್ದಾರೆ. ಆಡಿಟ್‌ಗೆ ಬರುವುದು ಗೊತ್ತಿರಲಿಲ್ಲ. ಅದರ ಬಗ್ಗೆ ಉತ್ತರ ನೀಡಿದ್ದೇವೆ. ಕೋರ್ಟ್‌ನಲ್ಲಿ ಪಾರ್ಟಿದ್ದು ಚೆಕ್ ಬಗ್ಗೆ ಕೇಸ್ ಹಾಕಿದ್ದೇವೆ, ಹಣ ಇಟ್ಟವನಿಗೆ ಕೊಡಲು ತಡವಾಗಿದೆ. ಹಾಗಂತ ಎಲ್ಲರಿಗೂ ಹಣದ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡ್ತೇನೆ ಅಂತ ಹೇಳಿದ್ದಾರೆ. ಹಂತ ಹಂತವಾಗಿ ಮಾಡುತ್ತೇನೆ ಅಂತ ಹೇಳಿದ್ದಾರೆ. ಈಗಿನ ಅಧ್ಯಕ್ಷರು ಅದರ ಬಗ್ಗೆ ಭರವಸೆ ನೀಡಿದ್ದಾರೆ. – ಚಂದ್ರಕಾಂತ್,
ಸಿಇಓ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ
ನಾನು ಯಾವುದೇ ತಪ್ಪು ಮಾಡಿಲ್ಲ, ಸಿಇಓ ಚಂದ್ರಕಾಂತ್ ತಪ್ಪಿತಸ್ಥ ದೂರು ನೀಡಿದ್ದೇವೆ
ಈಗ ಬ್ಯಾಂಕ್‌ನಲ್ಲಿ ಎಲ್ಲ ಹೊಸದು ಮಾಡುತ್ತಿದ್ದಾರೆ. ಸಿಇಓ ಚಂದ್ರಕಾಂತ್ ತಪ್ಪು ಮಾಡಿದ್ದು ಒಪ್ಪಿಕೊಂಡು ಆಡಿಟರ್‌ಗೆ ಬರೆದುಕೊಟ್ಟಿದ್ದಾರೆ. ಸಾಲ ವಸೂಲಿ ಮಾಡಿ ಕೊಡುತ್ತೇನೆ ಅಂತ ಹೇಳಿದ್ದಾರೆ. ಆಡಿಟ್ ಮಾಡಿ ರಿಪೋರ್ಟ್ ತೆಗೆದುಕೊಂಡೆವು. ಆಗ ಸಮಸ್ಯೆ ಮಾಡಿದ್ದು ತಿಳಿಯಿತು. ಆಡಿಟರ್ ರಿಪೋರ್ಟ್ ನೀಡಿದ್ದಾರೆ. ನಂತರ ನಿರ್ದೇಶಕರು ಮೀಟಿಂಗ್ ಮಾಡಿ, ಸಿಇಓ ಮೇಲೆ ದೂರನ್ನು ಸಹಕಾರ ಇಲಾಖೆ ಮತ್ತು ಎಸ್‌ಪಿಗೆ ನೀಡಿದ್ದೇವೆ. ವಿಆರ್ ನಾಯಕ್‌ರ ಅವಧಿಯಲ್ಲಿ ಏನೇನಾಗಿದೆ ಗೊತ್ತಿಲ್ಲ. ನಾನು ಅಧ್ಯಕ್ಷನಾಗಿ ಎರಡು ವರ್ಷ ಆಯಿತು. ಆಡಿಟ್ ರಿಪೋರ್ಟ್‌ಗೆ ಸಹಿ ಹಾಕುವುದಿಲ್ಲ ಅಂತ ಹೇಳಿದ್ದೇನೆ. ಇದಾದ ನಂತರ ಮನೆಗೆ ಬಂದು ದಮ್ಮಯ್ಯ ಹಾಕಿದ್ದರಿಂದ ನನ್ನ ಮೇಲೆ ಆರೋಪ ಮಾಡಲು ಶುರು ಮಾಡಿದ್ದಾನೆ. ಇದಕ್ಕೆ ನಾನು ಅಧಿಕಾರಿಗಳಲ್ಲಿ ನನ್ನ ಬಗ್ಗೆ ಅವ್ಯವಹಾರ ಮಾಡಿದ್ದರೆ ದಾಖಲೆ ಕೊಡಲಿ ಅಂತ ಹೇಳಿದ್ದೇನೆ. ಅವನ ಮೇಲೆ ಆಡಿಟ್ ರಿಪೋರ್ಟ್‌ನಲ್ಲಿ ಇರುವುದು. 25 ವರ್ಷ ವಿ ಆರ್ ನಾಯಕ್ ಇದ್ದಾಗ ಏನಾಗಿದೆ ಅಂತ ನನಗೆ ಗೊತ್ತಿಲ್ಲ. ಇದರ ನಡುವೆ ಆತನನ್ನು ಸಸ್ಪೆಂಡ್ ಮಾಡಿ ಆಡಿಟ್ ರಿಪೋರ್ಟ್ ಮಾಡಲಾಯಿತು. ಇದಕ್ಕೆ ಬಲತ್ಕಾರದಲ್ಲಿ ಹೊರಗಿಟ್ಟಿದ್ದಾರೆ ಅನ್ನುವ ಆರೋಪ ಬಂತು. ಇದಕ್ಕೆ ನಾನು 11 ಜನರಲ್ಲಿಯೂ ನಾನು ಹೊರಗೆ ಬರುತ್ತೇನೆ, ಅವನನ್ನು ಒಳಗೆ ಕರೆದುಕೊಂಡು ಸಾರ್ವಜನಿಕರ ಹಣ ಕೊಡಿ ಅಂತ ರಾಜೀನಾಮೆ ನೀಡಿ ಹೊರಗೆ ಬಂದಿದ್ದೇನೆ. ನನಗೆ ನಿರ್ದೇಶಕರು ಸಪೋರ್ಟ್ ಮಾಡಲಿಲ್ಲ. ಈಗ ವಿಆರ್ ನಾಯಕ್ ರವರು ಅಧ್ಯಕ್ಷರಾಗಿದ್ದಾರೆ. ಅವರು ಕೆಲವರಿಗೆ ಹಣ ಕೊಡಿಸುತ್ತಿದ್ದಾರಂತೆ, ನಾನು ಕೆಲವರಿಗೆ ಹಣ ಕೊಡಿಸಲು ಸ್ವಂತ ಇಚ್ಛೆಯಿಂದ ಪ್ರಯತ್ನಿಸುತ್ತಿದ್ದೇನೆ. ನನ್ನ ಉದ್ದೇಶ ಸಾರ್ವಜನಿಕರಿಗೆ ಹಣ ಸಿಗಬೇಕು, ಸುಮ್ಮನೆ ಯಾರ್ಯಾರದ್ದೋ ಮೇಲೆ ಅಪವಾದ ಹಾಕುವುದು ಸರಿಯಲ್ಲ. ನಾನು ಕುಟುಂಬದವರಿಗೆ ಯಾವುದೇ ಸಾಲ ಕೊಡಿಸಿಲ್ಲ,ನಾನು ತೆಗೆದುಕೊಂಡಿಲ್ಲ.ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ಧ. ಇದರಲ್ಲಿ ನನ್ನ ಪಾತ್ರವಿಲ್ಲ.ತನಿಖೆಗೂ ಸಿದ್ಧನಿದ್ದೇನೆ. ಕಾನೂನಿನ ಮೂಲಕ ನಾನು ಇದನ್ನು ಎದುರಿಸುತ್ತೇನೆ. ನನ್ನನ್ನು ನಂಬಿ ಯಾರೂ ಹಣ ಹಾಕಿಲ್ಲ. – ಸಿ.ಎಚ್. ಪ್ರಭಾಕರ್ ನಿಕಟಪೂರ್ವ ಅಧಕ್ಷರು
ನನಗೀಗ ಅಂಗಡಿಯೂ ಇಲ್ಲ ಜಾಗವೂ ಇಲ್ಲ – ನನ್ನ ಹಣವೂ ಇಲ್ಲ
ನಾನು 30 ವರ್ಷದಿಂದ ಬೆಳ್ತಂಗಡಿಯಲ್ಲಿ ಅಂಗಡಿ ವ್ಯಾಪಾರ ಮಾಡಿ ಉಳಿಸಿಟ್ಟ ಹಣ. ರಸ್ತೆ ನಿರ್ಮಾಣಕ್ಕಾಗಿ ಅಂಗಡಿ ತೆರವು ಆಗುತ್ತಿದೆ. ನನ್ನಲ್ಲಿದ್ದ ಜಾಗ ಮಾರಿ ಕೃಷಿ ಜಾಗ ಖರೀದಿ ಮಾಡುವ ವಿಚಾರ ಚಂದ್ರಕಾಂತ್‌ಗೆ ಗೊತ್ತಾಯಿತು. ಕೂಡಲೇ ಚಂದ್ರಕಾಂತ್ ಮತ್ತು ಸಿ ಎಚ್ ಪ್ರಭಾಕರ್ ರವರು ಮನೆಗೆ ಬಂದು ಒಂದು ತಿಂಗಳ ಮಟ್ಟಿಗೆ ನಮ್ಮಲ್ಲಿ ನೀವು ಡೆಪಾಸಿಟ್ ಇಡಿ ಅಂತ ಮನವಿ ಮಾಡಿದರು. ಇವರಿಬ್ಬರು ನಮಗೆ ಮೊದಲಿಂದ ಪರಿಚಯ ಇದ್ದ ಕಾರಣ 38 ಲಕ್ಷ ರೂಪಾಯಿ ಡೆಪಾಸಿಟ್ ಇಟ್ಟಿದ್ದೇನೆ.2024ರ ಜೂನ್ ನಲ್ಲಿ ದೊಡ್ಡ ಮೊತ್ತದ ಹಣ ಇಟ್ಟಿದ್ದೇನೆ. ಅದಾದ ಒಂದು ತಿಂಗಳಲ್ಲೇ ಸೊಸೈಟಿಯ ಪರಿಸ್ಥಿತಿ ಕಷ್ಟದಲ್ಲಿದ್ದೇ ನೆ. ಈಗ ನನ್ನಲ್ಲಿ ಜಾಗವೂ ಇಲ್ಲ, ಅಂಗಡಿಯೂ ಇಲ್ಲ, ಮಗನ ವಿದ್ಯಾಭ್ಯಾಸಕ್ಕೂ ಹಣವಿಲ್ಲ, ಬದುಕು ಕಷ್ಟವಾಗಿದೆ.ಇಂತಹ ಪರಿಸ್ಥಿತಿ ಮಾಡಿಟ್ಟಿದ್ದಾರೆ. – ದಯಾನಂದ್ ನಾಯಕ್, ಸಂತ್ರಸ್ತರು
ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ-1 ಕೋಟಿ ರೂ ಡೆಪಾಸಿಟ್ ಇದೆ-ಆತಂಕದಲ್ಲಿದ್ದೇನೆ
ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ನನ್ನದು ಮತ್ತು ಕುಟುಂಬದ್ದು 1 ಕೋಟಿಗೂ ಅಧಿಕ ಮೊತ್ತವಿದೆ. ನನಗೆ ಹೀಗಾಗುತ್ತದೆ ಅಂತ ನಿರ್ದೇಶಕನಾಗಿದ್ದರೂ ಗೊತ್ತಾಗಲಿಲ್ಲ. ನಾನು ಹಣ ಕೇಳಿದಾಗ ಇಲ್ಲ ಅಂತಿದ್ದಾರೆ. ನಾವು ನಮ್ಮ ಜಾತಿದ್ದು, ನಮ್ಮದು ಅಂತ ಡೆಪಾಸಿಟ್ ಇಟ್ಟಿದ್ದು. ನನಗೆ ಈಗ ಟ್ರೀಟ್ ಮ್ಮೆಂಟ್ ಆಗುತ್ತಿದೆ, ಮನೆಯೂ ಕಟ್ಟುತ್ತಿದ್ದೇನೆ. ಈಗ ನನಗೆ ಹಣದ ಅವಶ್ಯಕತೆ ತುಂಬಾ ಇದೆ.ಆದರೆಕೊಡುತ್ತಿಲ್ಲ. – ವಿಶ್ವನಾಥ್, ನಿರ್ದೇಶಕರು ಮತ್ತು ಸಂತ್ರಸ್ತರು
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಟ್ಟ ಹಣ ಈಗ ನನಗೆ ಸಿಗುತ್ತಿಲ್ಲ
ನನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇದ್ದ ಹಣವನ್ನು ಈ ಬ್ಯಾಂಕ್‌ನಲ್ಲಿ ಡೆಪಾಸಿಟ್ ಇಟ್ಟಿದ್ದೇನೆ. ಮುಂದಿನ ವರ್ಷ ನನ್ನ ಮಗ ಪಿಯುಸಿ. ಮೆಚ್ಯುರ್ ಆದ ನನ್ನ ಹಣವನ್ನು ತೆಗೆಯಲು ಪ್ರಯತ್ನಿಸಿದ್ದೇನೆ. ಸಿಇಓ ಇವತ್ತು ಕೊಡುತ್ತೇನೆ. ನಾಳೆ ಕೊಡುತ್ತೇನೆ ಅಂತಿದ್ದಾರೆ. 6 ಲಕ್ಷ ರೂ ಹಣ ಇಟ್ಟಿದ್ದೇನೆ. ಮೆಚ್ಯುರಿಟಿ ಹಣ ಬೇರೆಯೇ ಇದೆ. ಇದು ಕಣ್ಣೇದುರೇ ದಿನ ಓಡಾಡುವವರು ಹೀಗೆ ಮಾಡುತ್ತಾರೆ ಅಂತ ಯೋಚಿಸಿರಲಿಲ್ಲ. -ವಸಂತ್ ಕುಮಾರ್, ಸಂತ್ರಸ್ತ
ನಾನು ಬಡ್ಡಿ ಪಡೆಯಲು ಹೋದಾಗಲೇ ಅಷ್ಟು ಮೊತ್ತ ಇರಲಿಲ್ಲ
ನಾನು ಬಡ್ಡಿ ಪಡೆಯಲು ಬ್ಯಾಂಕ್‌ಗೆ ಹೋದಾಗ ಅದು ಇರಲಿಲ್ಲ. ನಮ್ಮದು 31 ಲಕ್ಷ ರೂಪಾಯಿ ಇದೆ. ಸಿಎಚ್ ಪ್ರಭಾಕರ್‌ರವರಿಗೆ ಕರೆ ಮಾಡಿದಾಗ ನಾವು ಕೊಡುತ್ತೇವೆ ಅಂತ ಭರವಸೆ ನೀಡಿದ್ದಾರೆಯೇ ಹೊರತು ಏನೂ ಕೊಟ್ಟಿಲ್ಲ. ಸಿಇಓ ಚಂದ್ರಕಾಂತ್ ನಮಗೆ ಹೇಳಿದಂತೆ ಅಧ್ಯಕ್ಷರು ಕ್ಯಾಶ್ ರೂಪದಲ್ಲಿ ಹಣ ತೆಗೆದುಕೊಂಡು ಹೋಗಿದ್ದಾರೆ ಅಂದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಿಇಓ ಚಂದ್ರಕಾಂತ್ ಮತ್ತು ಅಧ್ಯಕ್ಷರಾಗಿದ್ದ ಪ್ರಭಾಕರ್. ಕೆಲವು ನಿರ್ದೇಶಕರು ಸಾಲ ಪಡೆದು ಬಡ್ಡಿ ಕಟ್ಟದೇ ಇದ್ದರೂ ಅನ್ನುವ ಮಾಹಿತಿಯೂ ಇದೆ. -ಆಂಬ್ರೋಸ್, ಸಂತ್ರಸ್ತರು.