ಉಜಿರೆ: ಎಸ್. ಡಿ. ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ

0

p>

ಉಜಿರೆ: ಆರ್ಥಿಕ ಅಗತ್ಯವಿರುವ ರೋಗಿಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಎಸ್‌. ಡಿ. ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಾರ್ಷಿಕ 1.40 ಕೋಟಿ ರೂ. ಮೊತ್ತದ ಉಚಿತ ಡಯಾಲಿಸಿಸ್ ಸೇವೆ ನೀಡುವ ಯೋಜನೆಯನ್ನು ಜ.1 ರಿಂದ ಪ್ರಾರಂಭಿಸಲಾಗಿದೆ.

ಇತ್ತೀಚೆಗೆ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸರ್ವಧರ್ಮ ಸಮ್ಮೇಳನದಲ್ಲಿ ಡಿ. ವೀರೇಂದ್ರ ಹೆಗ್ಗಡೆ ಈ ಬಗ್ಗೆ ಘೋಷಿಸಿದ್ದರು.

ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ, ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಹೇಮಾವತಿ ವೀ. ಹೆಗ್ಗಡೆ, “ಡಯಾಲಿಸಿಸ್ ರೋಗಿಗಳಿಗೆ ನಿರಂತರ ಆರೈಕೆ ಬೇಕಾಗಿದ್ದು, ಅವರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ. ಆದರೆ ಬಡ ರೋಗಿಗಳಿಗೆ ಇದು ಸವಾಲಿನ ಸಂಗತಿಯಾಗಿದ್ದು, ಅವರ ಉಳಿತಾಯವೆಲ್ಲಾ ಡಯಾಲಿಸಿಸ್ ನಂತಹ ಚಿಕಿತ್ಸೆಗೆ ವ್ಯಯವಾಗುತ್ತದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಹೆಗ್ಗಡೆ ಅವರ ಆಶಯದಂತೆ ಈ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಲಾಗಿದೆ” ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ, ಆರ್ಥಿಕ ಸಹಾಯದ ಅಗತ್ಯವಿರುವವರಿಗೆ ಹಾಗೂ ಅಶಕ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಹಿಂದೆಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಸಂಪೂರ್ಣ ಸುರಕ್ಷಾ ಯೋಜನೆಯೂ ಜಾರಿಯಲ್ಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಉಜಿರೆಯ ಎಸ್‌. ಡಿ. ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2022 ರ ಜ.1 ರಿಂದ ಡಯಾಲಿಸಿಸ್ ಸೇವೆ ಆರಂಭವಾಗಿದ್ದು, ಒಟ್ಟು 11 ಡಯಾಲಿಸಿಸ್ ಯಂತ್ರಗಳಿವೆ‌.

ಈ ಹವಾನಿಯಂತ್ರಿತ ಕೇಂದ್ರದಲ್ಲಿ ಇದುವರೆಗೂ ಪ್ರತಿದಿನ‌ 30 ಕ್ಕೂ ಅಧಿಕ ಡಯಾಲಿಸಿಸ್ ಸೇವೆ ನೀಡಲಾಗಿದ್ದು, ಒಟ್ಟು 10 ಸಾವಿರಕ್ಕೂ ಅಧಿಕ ಡಯಾಲಿಸಿಸ್ ಸೇವೆ ನೀಡಲಾಗಿದೆ.

ಬೆಳ್ತಂಗಡಿ ತಾಲೂಕಿನ ಆಸುಪಾಸಿನಲ್ಲಿರುವ ರೋಗಿಗಳಿಗೆ ಈ ಡಯಾಲಿಸಿಸ್ ಸೆಂಟರ್ ವರದಾನವಾಗಿತ್ತು. ಇದರ ಜೊತೆಗೆ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಿರುವುದು ಬಹಳಷ್ಟು ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ಪ್ರತಿ ರೋಗಿಗೆ ಒಂದು ಬಾರಿಯ ಡಯಾಲಿಸಿಸ್ ಗೆ 1,500 ರೂ. ವೆಚ್ಚವಾಗುತ್ತದೆ. ಒಬ್ಬ ರೋಗಿಗೆ ವಾರಕ್ಕೆ 3 ರಿಂದ 4 ಡಯಾಲಿಸಿಸ್ ಅಗತ್ಯವಿರುತ್ತದೆ. ಇದೀಗ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಒಬ್ಬ ರೋಗಿಗೆ ತಿಂಗಳಿಗೆ 12,000 ದಿಂದ 24,000 ರೂ. ಗಳವರೆಗೂ ಉಳಿತಾಯವಾಗುತ್ತದೆ. ಉಚಿತ ಡಯಾಲಿಸಿಸ್ ಯೋಜನೆಯಲ್ಲಿ ಒಬ್ಬ ರೋಗಿ ಮಾಸಿಕ 12 ಡಯಾಲಿಸಿಸ್ ಮಾಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

“ಇದರ ಜೊತೆಗೆ ಆಸ್ಪತ್ರೆಯಲ್ಲಿ 2024 ನೇ ಸಾಲಿನಲ್ಲಿ 4.98 ಕೋಟಿ ರೂ. ಮೊತ್ತದ ಉಚಿತ ವೈದ್ಯಕೀಯ ಸೇವೆಯನ್ನು ರೋಗಿಗಳಿಗೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷವೂ 40 ಕ್ಕೂ ಅಧಿಕ ಉಚಿತ ವೈದ್ಯಕೀಯ ಶಿಬಿರಗಳನ್ನೂ ಆಯೋಜಿಸಲಾಗಿದೆ” ಎಂದರು.

ಆಸ್ಪತ್ರೆಯ ಫಿಸಿಶಿಯನ್ ಡಾ. ಸಾತ್ವಿಕ್ ಜೈನ್, ಜನರಲ್ ಫಿಸಿಶಿಯನ್ ಡಾ. ಬಾಲಕೃಷ್ಣ ಭಟ್, ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ದೇವೇಂದ್ರ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ವೈದ್ಯೆ ಅನುಷಾ ನಿರೂಪಿಸಿದರು. ಸಂಪರ್ಕಾಧಿಕಾರಿ ಚಿದಾನಂದ್ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here