ಬೆಳ್ತಂಗಡಿ: ಡಿ. 27 ರಿಂದ 29 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿರುವ ವೇದ ವಿದ್ವಾಂಸರಾದ ವೇದಮೂರ್ತಿ ಶಂಭು ಭಟ್ ಚಾವಡಿಬಾಗಿಲು ಇವರಿಗೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ‘ವೇದ ರತ್ನ’ ಪ್ರಶಸ್ತಿ ಪ್ರದಾನ ನಡೆಯಿತು.
ಅಖಿಲ ಹವ್ಯಕ ಮಹಾಸಭಾದ 81 ವರ್ಷಗಳ ಸುದೀರ್ಘ ಪಯಣದ ಅಂಗವಾಗಿ ವೈದಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 81 ವೇದ ವಿದ್ವಾಂಸರಿಗೆ ಹವ್ಯಕ ‘ವೇದ ರತ್ನ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ದಿಕ್ಸೂಚಿ ಭಾಷಣವನ್ನು ಮಾಡಿದ ವಿದ್ವಾನ್ ಕೆ. ಎಲ್. ಶ್ರೀನಿವಾಸನ್ – ಧರ್ಮಕರ್ತರು ಮತ್ತು ಚಿಂತಕರು ಮಾತನಾಡಿ ಸಂಸ್ಕೃತ-ಸಂಸ್ಕೃತಿ-ಸಂಸ್ಕಾರವನ್ನು ಸಮಾಜದಲ್ಲಿ ಪ್ರಚಾರ ಪಡಿಸುವ ಕಾರ್ಯವನ್ನು ವೈದಿಕರು ಮಾಡುತ್ತಿದ್ದಾರೆ. ಅಂತಹ ವೇದ ವಿದ್ವಾಸರಿಗೆ ಸನ್ಮಾನ ಮಾಡುತ್ತಿರುವುದು ಹವ್ಯಕ ಸಮ್ಮೇಳನದ ಘನತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ಶಂಭು ಭಟ್ಟರು ಕಳೆದ 40 ವರ್ಷಗಳಿಂದ ವೈದಿಕ ಪೌರೋಹಿತ್ಯ ವೃತ್ತಿಯಲ್ಲಿದ್ದು, 1975 ರಿಂದ 1978 ರವರೆಗೆ ಮಧೂರು ದೇವಸ್ಥಾನದಲ್ಲಿ ವಸಂತ ವೇದಪಾಠ ಶಿಬಿರದಲ್ಲಿ ಅಧ್ಯಯನ ಮಾಡಿ ನಂತರ 1980 ನೇ ವರ್ಷದಿಂದ ಏಳು ವರ್ಷಗಳ ಕಾಲ ವರದಹಳ್ಳಿ ಶ್ರೀಧರಾಶ್ರಮದಲ್ಲಿ ಸಂಪೂರ್ಣ ಕೃಷ್ಣ ಯಜುರ್ವೇದ – ಪೂರ್ವಾಪರ ಪ್ರಯೋಗ ಸಹಿತ ಅಧ್ಯಯನವನ್ನು ಗುರುಗಳಾದ ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ ಇವರ ಬಳಿ ಕಲಿತು ತದನಂತರ 1987 ರಿಂದ 25 ವರ್ಷಗಳ ಕಾಲ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ರ ಜೊತೆ ಪೌರೋಹಿತ್ಯ, ಹೀಗೆ 40 ವರ್ಷಗಳ ಅನುಭವದ ಜೊತೆಗೆ ಅನೇಕ ಶಿಷ್ಯರನ್ನು ತಯಾರು ಮಾಡಿ, ಪೌರೋಹಿತ್ಯ ಮಾಡುವಲ್ಲಿ ಅನೇಕರಿಗೆ ಮಾರ್ಗದರ್ಶಕರಾಗಿದ್ದಾರೆ.
ಕ್ರಮ, ಜಟೆ ಮತ್ತು ಘನಪಾಠಗಳಲ್ಲಿ ಸದಾ ಅಧ್ಯಯನಶೀಲ ಗುಣವನ್ನು ಹೊಂದಿ ಅವುಗಳನ್ನು ತಮ್ಮ ವೈದಿಕ ಕ್ಷೇತ್ರದಲ್ಲಿ ಕ್ರಮ ಬದ್ಧವಾಗಿ ಅಳವಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಅಹೋರಾತ್ರಿ ರುದ್ರ ಪಾರಾಯಣ, ಅತಿರುದ್ರ ಮಹಾಯಾಗ ಮುಂತಾದ ಮಹಾಯಾಗಗಳ ನೇತೃತ್ವವನ್ನು ವಹಿಸಿರುವ ಇವರು ಕೇರಳ, ತಮಿಳುನಾಡು, ಮಹಾರಾಷ್ಟ್ರ, ಮಣಿಪುರ ಅಲ್ಲದೇ ವಿದೇಶಗಳಾದ ಮಸ್ಕತ್ ಮತ್ತು ಮೂರು ಬಾರಿ ಶ್ರೀಲಂಕಾದಲ್ಲೂ ಪೌರೋಹಿತ್ಯದ ನೇತೃತ್ವ ವಹಿಸಿಕೊಂಡು ನಮ್ಮ ಪಾರಂಪರಿಕ ಶ್ರೀಮಂತಿಕೆಯನ್ನು ಎಲ್ಲೆಡೆ ಪಸರಿಸಿದ್ದಾರೆ. ತಮ್ಮ ವ್ಯಕ್ತಿತ್ವ, ಅಧ್ಯಯನ ಸಂಪನ್ನತೆಯಿಂದ ಸಮಾಜಕ್ಕೆ ಮಾದರಿಯಾಗಿ ಅನೇಕ ಗೌರವ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಹವ್ಯಕ ‘ವೇದ ರತ್ನ’ ಪ್ರಶಸ್ತಿ ದೊರಕಿರುವುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಶ್ರೀಯುತರು ಈ ಪ್ರಶಸ್ತಿಯಿಂದಾಗಿ ಸಮಾಜದಲ್ಲಿ ನನ್ನ ಜವಾಬ್ದಾರಿಯು ಮತ್ತಷ್ಟು ಹೆಚ್ಚಿಸಿದೆ. ಈ ಗೌರವ ವೇದಕ್ಕೆ ಸಲ್ಲುವ ಅತ್ಯುತ್ಕೃಷ್ಟ ಗೌರವ ಎಂದು ಭಾವಿಸುತ್ತಾ, ಅಖಿಲ ಹವ್ಯಕ ಮಹಾ ಸಭಾದ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದರು.
60 ನೇ ವರ್ಷದ ಸುಖೀ ಜೀವನವನ್ನು ಪತ್ನಿ ಶಕುಂತಳಾ, ಮಗ ಈಶ್ವರ ಶರ್ಮ ಮತ್ತು ಸೊಸೆ ಶಿಲ್ಪಾ ಸರಸ್ವತಿ ಜೊತೆಗೂಡಿ ನಡೆಸುತ್ತಿದ್ದಾರೆ. ಇವರ ಮಗ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಎಕ್ಸೆಲ್ ಕಾಲೇಜ್ ಗುರುವಾಯನಕೆರೆಯಲ್ಲಿ ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.