ಬೆಳ್ತಂಗಡಿ: ವೈವಾಹಿಕ ವಿಚಾರ ಹಾಗೂ ಇತರ ದೈನಂದಿನ ವಿಚಾರಗಳಲ್ಲಿ ಇಸ್ಲಾಂನಲ್ಲಿ ದುಂದುವೆಚ್ಚಕ್ಕೆ ಅವಕಾಶವೇ ಇಲ್ಲದ ಅತ್ಯಂತ ಸರಳ ಕ್ರಮಗಳಿವೆ. ಆದರೆ ಆಧುನಿಕ ಐಶಾರಾಮಿ ಸಂಸ್ಕೃತಿಯ ಅನುಕರಣೆಯ ಪರಿಣಾಮದಿಂದಾಗಿ ಧರ್ಮದ ಚೌಕಟ್ಟು ಮೀರಿದ ನಡೆಯಿಂದ ಸಮುದಾಯ ಅದಪತನದತ್ತ ಮುಖ ಮಾಡಿದೆ ಎಂದು ಕಕ್ಕಿಂಜೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಪ್ರಧಾನ ಧರ್ಮಗುರು ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಎಚ್ಚರಿಸಿದರು.
ಬದ್ರಿಯಾ ಜುಮಾ ಮಸೀದಿ ಪೆರಾಲ್ದರ ಕಟ್ಟೆ, ಎಸ್. ಕೆ. ಎಸ್. ಎಸ್. ಎಫ್ ಪೆರಾಲ್ದರಕಟ್ಟೆ ಶಾಖೆ ಹಾಗೂ ಬದ್ರಿಯಾ ಯಂಗ್‌ಮೆನ್ಸ್ ಪೆರಾಲ್ದರ ಕಟ್ಟೆ ಇದರ ಜಂಟಿ ಆಶ್ರಯದಲ್ಲಿ, ಪ್ರಸ್ತುತ ಮುಸ್ಲಿಮ್ ಸಮಾಜದಲ್ಲಿ ಸಾಮಾಜಿಕ ಪಿಡುಗುಗಾಗಿ ನೆಲೆ ನಿಂತಿರುವ ಮಾದಕ ವ್ಯಸನ ಮತ್ತು ಮದುವೆ ಅನಾಚಾರದ ವಿರುದ್ದ ಜಾಗೃತಿ ಸಭೆಯಲ್ಲಿ ಅವರು ಸಂಪನ್ಮೂಲ ಉಪನ್ಯಾಸ ನೀಡುತ್ತಿದ್ದರು.
ಸಮಾಜಕ್ಕೆ ಬುದ್ದಿ ಹೇಳುವವರು ಸಾಕಾಗದು, ಕಾರ್ಯರೂಪಕ್ಕೆ ಅನುಷ್ಠಾನಿಸಿ ತೋರಿಸುವವರು ಬೇಕು. ಮದುವೆ ಎಂಬುದು ಸಮಾಧಾನಕ್ಕಾಗಿ, ನೆಮ್ಮದಿಗಾಗಿ, ತೃಪ್ತಿಗಾಗಿ ನೆಬಿಯವರ ಸುನ್ನತ್ ಆಗಿ ಅಲ್ಲಾಹು ಇಸ್ಲಾಂನಲ್ಲಿ ಮಾರ್ಗದರ್ಶಿಸಿದ ಧಾರ್ಮಿಕ ಕ್ರಮ ಎಂಬುದನ್ನು ಸದಾ ಅರಿತಿರಬೇಕು ಎಂದವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಪೆರಾಲ್ದರಕಟ್ಟೆ ಮಸ್ಜಿದ್ ಧರ್ಮಗುರು ಶಂಶುದ್ದೀನ್ ದಾರಿಮಿ ಮಾತನಾಡಿ, ಫ್ಯಾಶನ್ ಹೆಸರಿನಲ್ಲಿ ನವ ಸಂಸ್ಕಾರಗಳನ್ನು ಅನುಸರಿಸಿದ್ದರಿಂದ ಇದು ಸಮುದಾಯವನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಸಾಮಾಜಿಕ ಜಾಗೃತಿಯಿಂದ ವರದಕ್ಷಿಣೆ ಪಿಡುಗು ತೊಲಗಿಸಿದಂತೆ ಮದುವೆ ಅನಾಚಾರ, ವ್ಯಸನವನ್ನೂ ಹಿಮ್ಮೆಟ್ಟಿಸೋಣ ಎಂದರು.
ಮಾದಕ ವ್ಯಸನ ವಿಷಯದಲ್ಲಿ ಭಾಷಣ ಮಾಡಿದ ಖ್ಯಾತ ವಿಶ್ಲೇಷಕ ರಫೀಕ್ ಮಾಸ್ಟರ್ ಆತೂರು ಅವರು, ನಮ್ಮ ಸಮದಾಯದ ಯುವ ಜನತೆಗೆ ಸ್ಪರ್ಧಾತ್ಮಕ ಪರೀಕ್ಷೆ ಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಸ್ಥಳದಲ್ಲಿ ಇಂತಹಾ ಪಿಡುಗಿನ ಬಗ್ಗೆ ಅರಿವು ಮೂಡಿಸುವ ಸನ್ನಿವೇಶ ನಿರ್ಮಾಣವಾದುದಕ್ಕೆ ಖೇದವಿದೆ. ಆದರೂ ಕಟ್ಟೆ ಜಮಾಅತ್ ನ ಈ ಕ್ರಾಂತಿಕಾರಿ ಹೆಜ್ಜೆ ಅನುಕರಣೀಯ. ನಮ್ಮ ಮಕ್ಕಳು ಎಲ್ಲಿದ್ದಾರೆ, ಯಾರೊಂದಿಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ಹೆತ್ತವರು ಗಮನಿಸುತ್ತಲೇ ಇರದಿದ್ದರೆ ಅಪಾಯ ಕಾದಿದೆ. ನಾವು ಯಾರೊಂದಿಗೆ ಸೇರಿಕೊಳ್ಳುತ್ತೇವೋ ಅದರ ಮೇಲೆ ನಮ್ಮ ಭವಿಷ್ಯ ಮತ್ತು ವ್ಯಕ್ತಿತ್ವ ಅಡಗಿರುತ್ತದೆ. ಮಕ್ಕಳ ಗೆಳೆಯರು ಎಂತವರು ಎಂಬುದನ್ನು ನಿರಂತರ ಗಮನಿಸಬೇಕು ಎಂದು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬದ್ರಿಯಾ ಜುಮಾ ಮಸ್ಜಿದ್ ಪೆರಾಲ್ದರಕಟ್ಟೆ ಇದರ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ನಿಶ್ಚಿತಾರ್ಥ ಮತ್ತು ಮದುವೆ ಅನಾಚಾರಗಳ ಬಗ್ಗೆ ನಾನು ಮಾಡಿದ ಭಾಷಣವೊಂದು ಭಾರೀ ಪ್ರಚಾರ ಪಡೆದಿದ್ದರೆ ಅದಕ್ಕೆ ಕಾರಣ ಅದರ ಹಿಂದೆ ಇರುವ ವಿವಾಹವಾಗದ ಯುವಕರ ಧ್ವನಿಯಾಗಿದೆ. ಕ್ಲಿಷ್ಟ ವಿಚಾರವಾದರೂ ಈ ಅಭಿಯಾನವನ್ನು ನಾವು ಇಲ್ಲಿಂದ ಕೈ ಗೆತ್ತಿಕೊಂಡಿದ್ದು ಇದರ ಸಮಾರೋಪ ಪ್ರತೀ ಮೊಹಲ್ಲಾಗಳಲ್ಲಿ ಆಗಲಿ. ಇದೊಂದು ಜನಾಂದೋಲನವಾಗಿ ರೂಪು ಪಡೆಯಲಿ. ಸುಂದರ ಕನಸು ಕಟ್ಟಿಕೊಂಡ ವಿದ್ಯಾರ್ಥಿಗಳು ವ್ಯಸನಕ್ಕೆ ಬಲಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.
ತುರ್ತು ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಟ್ಟೆ ರೆಸ್ಕ್ಯೂ ತಂಡದ ಆಸಿಫ್ ಮತ್ತು ಬಳಗದವರನ್ನು ವೇದಿಕೆಯಲ್ಲಿ ಗುರುತಿಸಲಾಯಿತು. ಇವರ ಕಾರ್ಯಾಚರಣೆಯ ಪರಿಕರಗಳ ಖರೀದಿಗೆ ಎಸ್. ಎಮ್. ಮಾರ್ಟ್ ಮಾಲಿಕ ಪಿ. ಕೆ. ಶರೀಫ್ ಅವರು ಸ್ಥಳದಲ್ಲೆ 10 ಸಾವಿರ ರೂ. ನೆರವು ಘೋಷಿಸಿದರು. ಸಭೆಯ ಕೊನೆಗೆ ಮುಂಡೂರು ತಂಙಳ್ ದುಆ ನೆರವೇರಿಸಿದರು.
ಕಾರ್ಯಕ್ರಮಕ್ಕೆ ಇಸ್ಮಾಯಿಲ್ ಪೆರಿಂಜೆ ಮತ್ತು ಕುವೆಟ್ಟು ಗ್ರಾ.ಪಂ ಸದಸ್ಯ ಮುಸ್ತಫಾ ಜಿ.ಕೆರೆ ಶುಭ ಕೋರಿದರು. ವೇದಿಕೆಯಲ್ಲಿ ರಝಾಕ್ ಕನ್ನಡಿಟ್ಟೆ, ಅಬ್ದುಲ್ ಕರೀಂ ಗೇರುಕಟ್ಟೆ, ಇಸ್ಮಾಯಿಲ್ ಸಂಜಯನಗರ, ಆಸಿಫ್ ಅಳದಂಗಡಿ, ರಮ್ಲಾನ್ ಮುಂಡೂರು, ಮೋನು ಪಿಲ್ಯ, ಮುಸ್ತಫಾ ಮಂಜೊಟ್ಟಿ, ಹಕಿಂ ಸುನ್ನತ್ ಕೆರೆ, ಹಮೀದ್ ಕೆರೆಕೋಡಿ, ನಿಝಾಮ್ ಕಟ್ಟೆ ರಿಯಾಝ್ ಮಂಜೊಟ್ಟಿ, ಅಬ್ದುಲ್ ಫತ್ತಾಹ್ ಫೈಝಿ, ಸುಲೈಮಾನ್, ಸಿದ್ದೀಕ್ ಮಸೀದಿ ಬಳಿ, ಅಬ್ಬಾಸ್ ಪಜೆಮಾರ್, ಶೇಖಬ್ಬ ಹಾಜಿ, ಅಶ್ರಫ್ ಗುಂಡೇರಿ, ಶಂಶುದ್ದೀನ್ ತಮುನಾಕ, ಹಾಜಿ ಅಬ್ದುಲ್ ಕರೀಂ ಕಾರಂದೂರು, ಹಾಜಿ ಶಮೀಮ್ ಯೂಸುಫ್, ಹಾಜಿ ಅಬೂಬಕ್ಕರ್ ಮಂಜೊಟ್ಟಿ, ಹನೀಫ್ ಪುಂಜಾಲಕಟ್ಟೆ, ಸಿರಾಜ್ ಚಿಲಿಂಬಿ ಮದ್ದಡ್ಕ, ಅಝೀಝ್ ಬಳಂಜ ಮೊದಲಾದವರು ಉಪಸ್ಥಿತರಿದ್ದರು.
ಪ್ರದಾನ ಕಾರ್ಯದರ್ಶಿ ಸಾದಿಕ್ ಸ್ವಾಗತಿಸಿ, ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.