✍️ಸಮನ್ವಯ ಕೊಕ್ಕಡ
ಕೊಕ್ಕಡ: ವರ್ಷಂಪ್ರತಿ ಕ್ರಿಸ್ ಮಸ್ ಬಂತೆಂದರೆ ಸಾಕು ಕೆಂಪು ನಿಲುವಂಗಿ, ಅದರಂಚಲ್ಲಿ ಬಿಳಿಯ ಪಟ್ಟಿ, ತಲೆಗೊಂದು ಉದ್ದನೆಯ ಕೆಂಪು ಟೋಪಿ, ಬಿಳುಪಾದ ಗಡ್ಡ ಮೀಸೆ, ಜೊತೆಗೊಂದು ಗಾಡಿ, ಗಾಡಿಯ ತುಂಬಾ ಬಲೂನುಗಳು, ಉಡುಗೊರೆಗಳು ಹೀಗೆ ಒಂದೊಳ್ಳೆ ಪರಿಕಲ್ಪನೆಯೊಂದಿಗೆ ಊರಿನ ಹಾಗೂ ಪರವೂರಿನ ಜನರಿಗೆ ಹಾಗೂ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಬೋಳದಬೈಲು ನಿವಾಸಿ ವಿನ್ಸೆಂಟ್ ಮಿನೇಜಸ್ ಸಾಂತಾಕ್ಲಾಸ್ ವೇಷ ಧರಿಸಿ ಪರಿಯಟನೆಯಲ್ಲಿರುತ್ತಾರೆ. ಇದೀಗ ತಮ್ಮ ಪರ್ಯಟನೆಯ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದಾರೆ.
ಕ್ರಿಸ್ ಮಸ್ ದಿನದಿಂದ ಒಂದು ವಾರ ಮುಂಚಿತವಾಗಿ ಸಾಂತಾಕ್ಲಾಸ್ ವೇಷ ಧರಿಸಿ ಬೆಳಗ್ಗಿನಿಂದ ಸಂಜೆಯವರೆಗೆ ಶಾಲೆ ಕಾಲೇಜುಗಳು, ಸಾರ್ವಜನಿಕ ಸ್ಥಳಗಳು, ಸರಕಾರಿ ಕಚೇರಿಗಳು ಸೇರಿದಂತೆ ಆನೇಕ ಕಡೆಗಳಿಗೆ ತಮ್ಮ ಆ್ಯಕ್ಟಿವಕ್ಕೆ ಬಣ್ಣ ಬಣ್ಣದ ಬಲೂನುಗಳಿಂದ ಶೃಂಗರಿಸಿ, ಸ್ವಚ್ಛ ಭಾರತ ಜಾಗೃತಿ, ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆಯ ಫಲಕಗಳನ್ನು ತಮ್ಮ ಗಾಡಿಯ ಸುತ್ತ ಶೃಂಗರಿಸಿ ಜನ ನಿಬಿಡ ಪ್ರದೇಶಗಳಲ್ಲಿ ಸಂಚರಿಸುವ ಮೂಲಕ ಜನಜಾಗೃತಿಯನ್ನು ಮಾಡುತ್ತಿದ್ದಾರೆ.
ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪರ್ಯಟನ ಯಾತ್ರೆ 2000 ಇಸವಿಯಲ್ಲಿ ಆರಂಭಿಸಿದ ಇವರ ಈ ಸಂದೇಶ ಯಾತ್ರೆ ಸಾಗಿ ಬರುತ್ತಿದೆ. ತಮ್ಮ ಅನಾರೋಗ್ಯದ ಸಂದರ್ಭದಲ್ಲಿಯೂ ಕೂಡ ಯಾತ್ರೆಯನ್ನು ತಪ್ಪಿಸಬಾರದು. ಎನ್ನುವ ನಿಟ್ಟಿನಲ್ಲಿ 3 ದಿವಸಕ್ಕೆ ಸೀಮಿತಗೊಳಿಸಿ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. 25 ವರ್ಷಗಳಿಂದ ಸಂದೇಶ ಯಾತ್ರೆಯನ್ನು ಕೈಗೊಂಡಿರುವ ವಿನ್ಸೆಂಟ್ ಮಿನೇಜಸ್ ಪದವೀಧರ ಕೃಷಿಕ, ಒಳ್ಳೆಯ ನಿರೂಪಕ ಹಾಗೂ ಕಲಾವಿದ. ತಮ್ಮ ಕೃಷಿ ಹಾಗೂ ಪ್ರವೃತ್ತಿಯಲ್ಲಿ ಬಂದ ಹಣವನ್ನು ಸಾಂತಾಕ್ಲಾಸ್ ಯಾತ್ರೆಗೆ ಮೀಸಲಿಡುತ್ತಾರೆ. ಯಾರ ಬಳಿಯೂ ಕೈಚಾಚಿ ಕೇಳುವುದಿಲ್ಲ. ಪ್ರೀತಿಯಿಂದ ನೀಡಿದಲ್ಲಿ ಸ್ವೀಕರಿಸುತ್ತಾರೆ.
24 ವರ್ಷಗಳಿಂದ ಕೊಕ್ಕಡ ನೆಲ್ಯಾಡಿ ಪರಿಸರದಲ್ಲಿ ಕ್ರಿಸ್ ಮಸ್ ತಾತ ಎಂದೇ ಮನೆ ಮಾತಾಗಿರುವ ವಿನ್ಸೆಂಟ್ ಅವರಿಗೆ ಸಾರ್ವಜನಿಕ ವಲಯದಲ್ಲಿ ವಿಶಿಷ್ಟ ಸ್ಪಂದನೆ ದೊರೆಯುತ್ತದೆ. ಸುಮಾರು 25 ರಿಂದ 30 ಸಾವಿರ ರೂ. ಈ ಯಾತ್ರೆಗೆ ಬೇಕಾಗುತ್ತದೆ. ಈ ಹಿಂದೆ ಪುತ್ತೂರಿನ ಪ್ರತಿಷ್ಠಿತ ದ್ವಿಚಕ್ರ ಶೋರೂಂ ಮಾಲೀಕರು ಇವರ ಯಾತ್ರೆಗೆ ಉಚಿತ ಸ್ಕೂಟಿ ವಾಹನದ ಜೊತೆಗೆ ಉಚಿತ ಪೆಟ್ರೋಲನ್ನು ನೀಡಿದ್ದರು.
ಯಾತ್ರೆ ಸಂದರ್ಭ ಮನೆ ಬಿಟ್ಟು 3 – 4 ದಿನಗಳ ಕಾಲ ಹೊರಗಿರಬೇಕಾಗುತ್ತದೆ. ಈ ಸಂದರ್ಭ ಕೃಷಿಕರಾಗಿರುವ ವಿನ್ಸೆಂಟ್‌ರವರ ಮನೆಯ ಸಂಪೂರ್ಣ ಜವಾಬ್ದಾರಿ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಶಾಲೆ ಶಿಕ್ಷಕಿಯಾಗಿರುವ ಪತ್ನಿ ಕ್ರಿಸ್ತೀನಾ ಮಾರ್ಟಿಸ್ ನಿಭಾಯಿಸುತ್ತಾರೆ. ಇಬ್ಬರು ಪುತ್ರಿಯರ ಜೊತೆಗೆ ಅಳಿಯನೂ ಕೂಡ ಇವರ ಈ ಯಾತ್ರೆಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದಾರೆ.
ಈಗಾಗಲೇ ಧರ್ಮಸ್ಥಳ ವೇಣೂರು, ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು, ಕಡಬ, ಮೂಡುಬಿದಿರೆ, ಮಂಗಳೂರು, ಉಡುಪಿ, ಮಂಜೇಶ್ವರಗಳಲ್ಲಿ ಸಾಂತಾಕ್ಲಾಸ್ ಯಾತ್ರೆ ಕೈಗೊಂಡ ವಿನ್ಸೆಂಟ್ ಮಿನೇಜಸ್ ಅನಾಥಾಶ್ರಮಗಳಿಗೆ ಹೋದಾಗ ಅಲ್ಲಿನ ವೃದ್ಧೆಯರು ಭಾವನಾತ್ಮಕವಾಗಿ ಮಾತನಾಡುವಾಗ ತಾವು ಕೂಡ ಕಣ್ಣೀರಾಗುತ್ತಾರೆ. ಸಂದೇಶಗಳ ಜತೆ ಸಾಂತ್ವನ ನೀಡುವ ಇವರು ಈ ಸೇವೆಯಲ್ಲಿ ನನಗೆ ಆತ್ಮತೃಪ್ತಿಯನ್ನು ಹೊಂದಿದ್ದಾರೆ.
ವಿನ್ಸೆಂಟ್ ಅವರ 25 ನೇ ವರ್ಷದ ಪರ್ಯಟನೆಯ ಕಾರ್ಯ ಶ್ಲಾಘಿಸಿ ಮಂಗಳೂರಿನ ಬೊಂದೇಲ್ ಚರ್ಚಿನಲ್ಲಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಾಂತಾಕ್ಲಾಸ್ ವೇಷ ಧರಿಸಿದ್ದ ಅವರನ್ನು ಅಲಂಕೃತ ಕಾರಿನಲ್ಲಿ ವೇದಿಕೆಗೆ ಕರೆತರಲಾಯಿತು. ನೆಲ್ಯಾಡಿಯಲ್ಲಿ ನಡೆದ ಸಂಯುಕ್ತ ಕ್ರಿಸ್ ಮಸ್ ಆಚರಣೆಯ ಸಂದರ್ಭ ವಿನ್ಸೆಂಟ್ ರವರ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಸನ್ಮಾನಿಸಲಾಗಿತ್ತು. ಈ ವರ್ಷದ ಯಾತ್ರೆಯಲ್ಲಿ ವಿಶೇಷವಾಗಿ ಯುವಜನತೆ ಗುಟ್ಕಾ, ತಂಬಾಕು, ಡ್ರಗ್ಸ್ ಸೇವನೆಯನ್ನು ನಿಷೇಧಗೊಳಿಸುವ ಸಲುವಾಗಿ ಡ್ರಗ್ಸ್ ಮುಕ್ತ ಭಾರತದ ಬಗ್ಗೆ ಜನ ಜಾಗೃತಿಯನ್ನು ಮೂಡಿಸಿದರು.
2000 ಇಸವಿಯಲ್ಲಿ ಕೊಕ್ಕಡದಲ್ಲಿ ಅಂದಿನ ಧರ್ಮಗುರುಗಳಾದ ಫಾದರ್ ವಲೇರಿಯನ್ ನನಗೆ ಸಾಂತಾಕ್ಲಾಸ್ ನಿಲುವಂಗಿ (ಡ್ರೆಸ್) ತಂದು ಕೊಟ್ಟು ಇದನ್ನು ಹಾಕಿ ನೀನು ಚರ್ಚ್ ಒಳಗೆ ಜನರಿಗೆ ಕ್ರಿಸ್ ಮಸ್ ಸಂದೇಶ ಸಾರಬೇಕು ಎಂದು ಹೇಳಿದರು. ನಂತರ ಇತರ ಧರ್ಮದವರಿಗೂ ಕ್ರಿಸ್ ಮಸ್ ಸಂದೇಶ ಶುಭಾಶಯ ತಿಳಿಸಲು ಹೊರಗಡೆ ಹೋಗಬೇಕು ಎಂದರು. ಅವರ ಸೂಚನೆಯಂತೆ ಯಾತ್ರೆ ಕೈಗೊಂಡು ಈಗ 25 ನೇ ವರ್ಷದ ಯಾತ್ರೆಯನ್ನು ಪೂರ್ಣಗೊಳಿಸಿದ್ದೇನೆ. ಫಾ. ವಲೇರಿಯನ್ ನಿಧನರಾಗಿದ್ದು ಅವರು ನೀಡಿದ್ದ ಅಂದಿನ ಉಡುಗೆ ಇನ್ನೂ ನನ್ನಲ್ಲಿ ಜೋಪಾನವಾಗಿ ಇರಿಸಿಕೊಂಡಿದ್ದೇನೆ.- ವಿನ್ಸೆಂಟ್ ಮಿನೇಜಸ್ ಸಾಂತಾಕ್ಲಾಸ್ ವೇಷಧಾರಿ, ಕೊಕ್ಕಡ.
ಕ್ರಿಸ್ತಿನ ಮಾರ್ಟಿಸ್ ಶಿಕ್ಷಕಿ, ವಿನ್ಸೆಂಟ್ ಮಿನೇಜಸ್ ರವರ ಪತ್ನಿ – ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ನಾನು ಕಳೆದ 25 ವರ್ಷಗಳಿಂದಲೂ ನನ್ನ ಪತಿ ಪರ್ಯಟನೆಯಲ್ಲಿ ತೊಡಗಿರುವ ಸಂದರ್ಭ ಕೃಷಿ ಹಾಗೂ ಮನೆ ಎಲ್ಲ ಜವಾಬ್ದಾರಿಯನ್ನು ಚಿಕ್ಕ ಮಕ್ಕಳೊಂದಿಗೆ ನಿಭಾಯಿಸಿದ್ದೇನೆ. ಪತಿ ಸಮಾಜ ಕಾರ್ಯಕ್ಕೆ ತೊಡಗಿರುವ ಸಂದರ್ಭ ಅವರಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಅವರೊಂದಿಗೆ ಪೂರ್ವ ತಯಾರಿಯಲ್ಲಿ ಜೋಡಿ ಕೊಳ್ಳುತ್ತಿದ್ದೆ. ಯಾತ್ರೆಯ ಸಂದರ್ಭ ಅವರು ಸಂಪೂರ್ಣವಾಗಿ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕಾರ್ಯವನ್ನು ಕೈಗೊಂಡಿದ್ದರು. ಈ ಬಗ್ಗೆ ನನಗೆ ಹೆಮ್ಮೆ ಇದೆ.