ಮೂಡಾಯಿಪಲ್ಕೆ: ಉದ್ಭವ ಶ್ರೀ ಆದಿಲಿಂಗೇಶ್ವರ ಕ್ಷೇತ್ರದಲ್ಲಿ ನಲಿಕೆ ಸಮುದಾಯದವರು ಗುಳಿಗ ದೈವ ನೇಮ ಕಟ್ಟದಂತೆ ಬೆಳ್ತಂಗಡಿ ನ್ಯಾಯಾಲಯದಿಂದ ತಡೆಯಾಜ್ಞೆ – ನಲಿಕೆಯವರ ಸಮಾಜ ಸೇವ ಸಂಘ ಬೆಳ್ತಂಗಡಿಯ ಅಧ್ಯಕ್ಷ ಎಸ್. ಪ್ರಭಾಕರ್ ಶಾಂತಿಕೋಡಿ ಹೇಳಿಕೆ – ಪತ್ರಿಕಾಗೋಷ್ಠಿ

0

p>

ಬೆಳ್ತಂಗಡಿ: ಕಳಿಯ ಗ್ರಾಮದ ಮೂಡಾಯಿಪಲ್ಕೆ ಎಂಬಲ್ಲಿರುವ ಉದ್ಭವ ಶ್ರೀ ಆದಿಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಜರುಗುವ 7 ನೇ ವರ್ಷದ ವಾರ್ಷಿಕ ಉತ್ಸವದಲ್ಲಿ ನಲಿಕೆ ಜನಾಂಗದ ಮೇಲೆ ಬೆಳ್ತಂಗಡಿ ಸಿವಿಲ್ ಜಡ್ಜ್ ಮತ್ತು ಜೆ. ಎಂ. ಎಫ್. ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಿ ಅವರ ಮನೆಯಲ್ಲಿ ನಲಿಕೆಯ ಸಮುದಾಯದವರು ಗುಳಿಗ ದೈವದ ನೇಮವನ್ನು ಕಟ್ಟದಂತೆ ಹಾಗೂ ಭಾಗವಹಿಸದಂತೆ ತಾತ್ಕಾಲಿಕ ನಿರ್ಬಂಧಕಾಜ್ಞೆ ತರಲಾಗಿದೆ ಎಂದು ನಲಿಕೆಯವರ ಸಮಾಜ ಸೇವ ಸಂಘ ಬೆಳ್ತಂಗಡಿಯ ಅಧ್ಯಕ್ಷ ಎಸ್. ಪ್ರಭಾಕರ್ ಶಾಂತಿಕೋಡಿ ತಿಳಿಸಿದ್ದಾರೆ.

ಬೆಳ್ತಂಗಡಿಯ ನಿರೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆದಿ ಪುರಾತನ ಕಾಲದಿಂದಲೂ, ನಮ್ಮ ಗುರುಹಿರಿಯರ ಕಾಲದಿಂದಲೂ ಈ ತುಳುನಾಡು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆರಾಧನ ಕ್ಷೇತ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಭೂತಾರಾಧನೆ. ಈ ಭೂತಾರಾಧನೆ ನರ್ತನ ಮೂರು ಜನಾಂಗದ ಕುಲಕಸುಬು ಆಗಿರುತ್ತದೆ. ನಲಿಕೆ, ಪರವ, ಪಂಬದ ಈ ಮೂರು ಸಮುದಾಯಗಳು ಬಹಳ ಭಕ್ತಿ, ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ನರ್ತನ ಸೇವೆಯನ್ನು ಇಂದಿನವರೆಗೂ ನಡೆಸಿಕೊಂಡು ಬಂದಿರುತ್ತೇವೆ.

ಇತ್ತೀಚಿನ ದಿನಗಳಲ್ಲಿ ತುಳುನಾಡಿನ ದೈವಗಳಿಗೆ ಅಪಮಾನ, ಅವಮಾನ ಹಾಗೂ ದಬ್ಬಾಳಿಕೆಗಳು ನಿರಂತರ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣದಿಂದ ಅತೀ ಹೆಚ್ಚು ನಮ್ಮ ತುಳುನಾಡಿನ ಆರಾಧಕರಿಗೂ, ನರ್ತಕರಿಗೂ ತುಂಬಾ ನೋವುಂಟು ಮಾಡುವ ಸನ್ನಿವೇಶಗಳು ಉದ್ಭವಿಸಿರುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕಳಿಯ ಗ್ರಾಮದ ಮೂಡಾಯಿಪಲ್ಕೆ ಎಂಬಲ್ಲಿ ಉದ್ಭವ ಶ್ರೀ ಆದಿಲಿಂಗೇಶ್ವರ ಕ್ಷೇತ್ರದಲ್ಲಿ ದೇವರಿಗೂ ಹಾಗೂ ದೈವಗಳಿಗೆ ಪೂಜಾ ವಿಧಿವಿಧಾನಗಳನ್ನು ಮಾಡಿ, ರಾತ್ರಿ ಅವರು ನಂಬುವ ದೈವಗಳಿಗೆ ಪರ್ವ ಸೇವೆ ಹಾಗೂ ನೇಮೋತ್ಸವ ಕಳೆದ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ನೇಮೋತ್ಸವದಲ್ಲಿ 9 ದೈವಗಳು ಇದ್ದು, ಅದರಲ್ಲಿ ಗುಳಿಗ ದೈವಕ್ಕೆ ಮಾತ್ರ ನೇಮೋತ್ಸವ ನಡೆಸಿಕೊಂಡು ಬರುತ್ತಿದ್ದು, ಉಳಿದ ದೈವಗಳಿಗೆ ಪರ್ವಸೇವೆ, ಅಗೇಲು ಸೇವೆ ಮಾತ್ರ ನಡೆಸುತ್ತಾರೆ.

ಗುಳಿಗ ದೈವದ ಕೋಲವನ್ನು ಪುರಾತನ ಕಾಲದಿಂದಲೂ ಒಂದೇ ಸಮುದಾಯ ಅದು ನಲಿಕೆ ಸಮುದಾಯ ಮಾತ್ರ ನೇಮ ಕಟ್ಟುವುದು. ಗುಳಿಗ ದೈವದ ಆರಾಧಕರು ಎಲ್ಲಾ ಜಾತಿ, ಸಮುದಾಯಗಳಲ್ಲೂ ಇದ್ದಾರೆ. ಪ್ರಸ್ತುತ ಗುಳಿಗ ದೈವವನ್ನು ನಾವು ನಲಿಕೆ ಸಮುದಾಯದವರು ಮಾತ್ರ ಕಟ್ಟುವುದು. ಈ ಬಗ್ಗೆ ನಾವು ಶ್ರೀ ಉದ್ಭವ ಆದಿಲಿಂಗೇಶ್ವರ ಇದರ ಗುರಿಕಾರರು, ಅಧ್ಯಕ್ಷರು ಆದ ರುಕ್ಮಯ್ಯ ಎಂ. ಹಾಗೂ ಅವರ ಮಗ ಚಿತ್ತರಂಜನ್ ಹಾಗೂ ಮನೆಯವರೊಂದಿಗೆ ಚರ್ಚಿಸಿ ತೀರ್ಮಾನಿಸಿದಂತೆ, ಕಳೆದ ಸಲ ನೇಮೋತ್ಸವವನ್ನು ಅವರು ತಮ್ಮ ಸ್ವ ಇಚ್ಛೆಯಿಂದ ನಿಲ್ಲಿಸುತ್ತೇವೆ ಎಂದು ನಮ್ಮ ನಲಿಕೆ ಸಂಘದ ಸಮುದಾಯ ಭವನದ ಅಂಗಳದಲ್ಲಿ ಆರಾಧಿಸಿಕೊಂಡು ಬಂದಿರುವ ಶ್ರೀ ಗುಳಿಗ ದೈವದ ಸನ್ನಿಧಿಯಲ್ಲಿ ತನ್ನೊಪ್ಪಿಕೊಂಡು, ದೈವದ ಹೆಸರಲ್ಲಿ ತಪ್ಪು ಕಾಣಿಕೆ ಹಾಕಿರುತ್ತಾರೆ. ಪ್ರಸ್ತುತ ಈ ಗುಳಿಗ ದೈವವನ್ನು ಮೊಗೇರ ಸಮುದಾಯದ ರುಕ್ಮಯ್ಯ ಮತ್ತು ಅವರ ಮಗ ಚಿತ್ತರಂಜನ್ ಹಾಗೂ ಮನೆಯವರು ಗುಳಿಗ ದೈವಕ್ಕೆ ಅಪಮಾನ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.

ಆದ್ದರಿಂದ ಬೆಳ್ತಂಗಡಿ ಸಿವಿಲ್ ಜಡ್ಜ್ ಮತ್ತು ಜೆ. ಎಂ. ಎಫ್. ಸಿ. ನ್ಯಾಯಾಲಯದ ತಿಚ್ಛಿಸಮಿ ತಾತ್ಕಾಲಿಕ ನಿರ್ಬಂಧಕಾಜ್ಞೆಯಂತೆ ನಾವು ನಲಿಕೆ ಸಮುದಾಯದ ನರ್ತಕರು ಹಾಗೂ ಸಮಾಜಬಾಂಧವರು ಸದ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಮುಂದಿನ ತೀರ್ಮಾನವು ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ. ನಾವು ಪುರಾತನ ಕಾಲದಿಂದ ಮಾಡುತ್ತಿದ್ದ ನರ್ತನದ ಬಗ್ಗೆ ಇತಿಹಾಸದಲ್ಲಿ ದಾಖಲಾದ ದಾಖಲೆ ಪತ್ರಗಳನ್ನು ನ್ಯಾಯಾಲಯಕ್ಕೆ ನೀಡಲಿದ್ದೇವೆ ಎಂದು ನಲಿಕೆಯವರ ಸಮಾಜ ಸೇವ ಸಂಘ ಬೆಳ್ತಂಗಡಿಯ ಅಧ್ಯಕ್ಷ ಎಸ್. ಪ್ರಭಾಕರ್ ಶಾಂತಿಕೋಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದೈವಾರಾಧನ ಸಮಿತಿ, ದ. ಕ ಜಿಲ್ಲೆಯ ಜಿಲ್ಲಾಧ್ಯಕ್ಷ ಜನಾರ್ದನ ಬುಡೋಳಿ, ನಲಿಕೆಯವರ ಸಮಾಜ ಸೇವ ಸಂಘ ಬೆಳ್ತಂಗಡಿಯ ಮಾಜಿ ಅಧ್ಯಕ್ಷ ಸೇಸಪ್ಪ ಕೆ. ನಲಿಕೆ, ನಲಿಕೆಯವರ ಸಮಾಜ ಸೇವ ಸಂಘ ಬೆಳ್ತಂಗಡಿಯ ಸದಸ್ಯ ವಿನಯ್ ಕುಮಾರ್ ಹಾಗೂ ದೈವನರ್ತಕ ಕೊರಗಪ್ಪ ಪಂಡಿತ್ ಉಪಸ್ಥಿತರಿದ್ದರು. ನಲಿಕೆಯವರ ಸಮಾಜ ಸೇವ ಸಂಘ ಬೆಳ್ತಂಗಡಿಯ ರಾಮು ಶಿಶಿಲ ಸ್ವಾಗತಿಸಿ, ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here