ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಡಿ. 25 ರಂದು ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಪರಿವಾರ ದೈವಗಳ ಸಿರಿಸಿಂಗಾರ ನರ್ತನ ಸೇವೆ ಜರಗಿತು.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಉದಿತ್ ಕುಮಾರ್ ಜೈನ್ ವಹಿಸಿಕೊಂಡಿದ್ದರು. ಧಾರ್ಮಿಕ ಭಾಷಣಕಾರರಾಗಿ ಆಗಮಿಸಿದ ಕಿರಣ್ ಚಂದ್ರ ಡಿ. ಪುಷ್ಪಗಿರಿ ಧಾರ್ಮಿಕ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಉಜಿರೆ ಲಕ್ಷಿ ಇಂಡಸ್ಟ್ರೀಸ್ ನ ಮಾಲಕ ಮೋಹನ್ ಕುಮಾರ್ ಆಗಮಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ್ ಕುಮಾರ್ ಜೈನ್, ಆಸ್ರಣ್ಣ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗೌಡ, ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ, ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ನವೀನ್ ಗೌಡ ಕಂಬಳದಡ್ಡ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ ಸ್ವಾಗತಿಸಿ, ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ್ ಗೌಡ ವಂದಿಸಿದರು. ಗಿರೀಶ್ ಕುಮಾರ್ ಎಂ. ಮತ್ತು ವಿದ್ಯಾ ಶ್ರೀನಿವಾಸ್ ಗೌಡ ಕಾರ್ಯಕ್ರಮ ನಿರೂಪಿದರು. ಸಭಾ ಕಾರ್ಯಕ್ರಮದ ಬಳಿಕ ಪರಿವಾರ ದೈವಗಳಾದ ರಕ್ತೇಶ್ವರಿ, ಭೈರವ, ಕಲ್ಲುರ್ಟಿ, ಪಂಜುರ್ಲಿ ದೈವಗಳಿಗೆ ಸಿರಿ ಸಿಂಗಾರ ನರ್ತನ ಸೇವೆ ನಡೆಯಿತು.