ಬೆಳ್ತಂಗಡಿ: ಸಾಹಿತ್ಯಕ್ಕೆ ಮನುಕುಲವನ್ನು ಒಂದು ಮಾಡುವ ಶಕ್ತಿ ಇದೆ ಎಂದು ಲೋಕಾಯುಕ್ತದ ನಿವೃತ್ತ ಎಸ್.ಪಿ. ಕುಮಾರಸ್ವಾಮಿ ಐ.ಪಿ.ಎಸ್. ಹೇಳಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಇದರ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಬಲಿಪ ರೆಸಾರ್ಟ್ ನಲ್ಲಿ ಡಿ.22ರಂದು ನಡೆದ ತೆಂಕಣದಲ್ಲಿ ನುಡಿ ದಿಬ್ಬಣ ತಾಲೂಕು ಮೊದಲ ಅಧಿವೇಶನವನ್ನು ಅವರು ಉದ್ಘಾಟಿಸಿದರು.
ರಾಷ್ಟ್ರಭಕ್ತಿ ಎಂದರೆ ಕೇವಲ ಮಿಲಿಟರಿ ಸೇವೆ ಮಾತ್ರ ಎಂದು ಭಾವಿಸಬೇಕಾಗಿಲ್ಲ. ಸಾಹಿತ್ಯದ ಮೂಲಕವೂ ದೇಶಸೇವೆ ಮಾಡಬಹುದು. ದ.ಕ.ದಲ್ಲಿ ಯಕ್ಷಗಾನ, ಭೂತಾರಾಧನೆ ಹಾಗೂ ಇನ್ನಿತರ ಸಂಪ್ರದಾಯ ಆಚಾರ ವಿಚಾರಗಳು ಸಾಹಿತ್ಯ ಸಂಪತ್ತನ್ನು ಹೆಚ್ಚಿಸಿವೆ ಎಂದರು. ಶ್ರಮ, ತಾಳ್ಮೆ, ಮಾತೃಹೃದಯ, ವಿನಯವಂತಿಕೆ, ಪರಿಸರದ ತಿಳುವಳಿಕೆ ಇದ್ದರೆ ಮಾತ್ರ ಸಾಹಿತಿಯಾಗಬಲ್ಲ. ಪ್ರಚಾರಕ್ಕೋಸ್ಕರ ಸಾಹಿತಿಯಾಗುವುದು ಬೇಡ ಎಂದ ಅವರು ನಮ್ಮತನವನ್ನು ಕಾಪಾಡಿಕೊಂಡು ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಹೊಣೆ ನಮ್ಮೆಲ್ಲರಲ್ಲಿರಲಿ ಎಂದು ಆಶಿಸಿದರು.
ಯಕ್ಷಗಾನ ಕವಿ, ಅರ್ಥಧಾರಿ ದಿವಾಕರ ಹೆಗಡೆ, ಕೆರೆಹೊಂಡ ಅವರು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ವಿಷಯದಲ್ಲಿ ಉಪನ್ಯಾಸ ನೀಡುತ್ತಾ, ಯಕ್ಷಗಾನವೆಂಬುದು ಮುಕ್ತ ವಿ.ವಿ. ಇದ್ದ ಹಾಗೆ. ಇಲ್ಲಿ ರಂಗದಲ್ಲಿರುವವರು, ಅದರ ಕೆಳಗೆ ಇರುವವರೂ ಮುಖ್ಯರಾಗುತ್ತಾರೆ. ಯಕ್ಷಗಾನದವರ ಭಾಷೆ ಶುದ್ಧವಾಗಿರುತ್ತದೆ ಎಂಬ ಮಾತು ಜನಜನಿತ. ಯಕ್ಷಗಾನವು ತರ್ಕಬದ್ಧವಾಗಿ, ವಿಮರ್ಶಾತ್ಮಕವಾಗಿ ಆಲೋಚನೆ ಮಾಡುವುದಕ್ಕೆ ಪ್ರೇರೇಪಿಸಿದೆ. ಸಾಮಾನ್ಯನಿಗೆ ಸನಾತನ ಭಾರತದ ಪರಿಚಯವಾದದ್ದು ಯಕ್ಷಗಾನದಿಂದ ಎಂದರು.
ಅಭಿವ್ಯಕ್ತಿಯ ಎಲ್ಲಾ ಆಯಾಮಗಳು ಸಾಹಿತ್ಯವೇ ಆಗಿದೆ. ಶುದ್ಧತೆಯ ಭಾಷೆಗೆ ಬದ್ಧತೆ ತುಂಬಿರುವುದು, ಸಾಮಾನ್ಯರಿಗೆ ಆಧ್ಯಾತ್ಮತೆಯ ಪರಿಚಯ ಮಾಡಿಸಿರುವ ಯಕ್ಷಗಾನದಲ್ಲಿ 6000 ಪ್ರಸಂಗಗಳು, 10 ಲಕ್ಷ ಪದ್ಯಗಳು, 500 ಕವಿಗಳು ಇರುವುದು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಎಂದರು. ಕವಿಸಮ್ಮಿಲನದ ಅವಲೋಕನ ಮಾಡಿದ ಕವಯತ್ರಿ, ತುಳು ಲಿಪಿ ಶಿಕ್ಷಕಿ, ತುಳುವೆರೆ ಕಲ ಇದರ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅವರು ಮಕ್ಕಳು ಲಲಿತಕಲೆಗಳಲ್ಲಿ ತೊಡಗಿಸಿಕೊಂಡರೆ ದುಶ್ಚಟಗಳಿಗೆ ಬಲಿಯಾಗುವುದು ತಪ್ಪುತ್ತದೆ. ಇದರಲ್ಲಿ ತಾಯಂದಿರ ಪಾತ್ರ ಮುಖ್ಯವಾಗುತ್ತದೆ. ಏಕತೆ, ಜಾತ್ಯತೀತೆಯ ಭಾರತದ ಕಲ್ಪನೆಯು ಸಾಂಘಿಕ ಭಾವವಾಗಬೇಕು ಎಂದು ಅಪೇಕ್ಷಿಸಿದರು.
ಸಮ್ಮಿಲನದಲ್ಲಿ ಅಶ್ವಿಜಾ ಶ್ರೀಧರ್, ಅರುಣಾ ಶ್ರೀನಿವಾಸ್, ಆಶಾ ಅಡೂರು, ನಿಶಾ ಸಂತೋಷ್, ನಯನಾ, ವನಜಾ ಟಿ. ಜೋಶಿ, ಸಮ್ಯಕ್ ಜೈನ್, ವಿದ್ಯಾಶ್ರೀ ಅಡೂರು, ನಾಗಶ್ರೀ ದಾತೆ, ಸೋನಾಕ್ಷಿ, ವೃಂದಾ ತಾಮ್ಹಣ್ ಕಾರ್ ನನ್ನ ಕನಸಿನ ಭಾರತ ವಿಷಯದಲ್ಲಿ ಸ್ವರಚಿತ ಕವನಗಳನ್ನು ವಾಚಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಸಿದ ಸಮಿತಿ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳವರ್ಮ ಅವರು ನಾವು ವಿದ್ಯಾರ್ಥಿಗಳಾಗಿದ್ದಾಗ ಯಾರ್ಯಾರದೋ ಇತಿಹಾಸವನ್ನು ಓದಿದ್ದೇವೆಯೇ ಹೊರತು ನಮ್ಮವರ, ನಮ್ಮ ನೆಲದ ಇತಿಹಾಸದ ಅರಿವನ್ನು ಅರ್ಥವಾಗುವಂತೆ ವಿವರಿಸಿಲ್ಲ. ಹೀಗಾಗಿ ಅಭಾವಿಪ ರಾಷ್ಟ್ರೀಯತೆಯ ಮನೋಭಾವ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಶಾಂತಾ ಜೆ. ಅಳದಂಗಡಿ ಅವರ ‘ಕಾವ್ಯಯಾನ’, ವಿನುತಾ ರಜತ್ ಗೌಡ ಅವರ ‘ಪ್ರತಿಬಿಂಬ’, ಅ.ಭಾ.ಸಾ.ಪ. ಬೆಳ್ತಂಗಡಿ ತಾ. ಸಮಿತಿ ಸದಸ್ಯರ ‘ಮೊದಲ ಹೆಜ್ಜೆ’ ಪುಸ್ತಕಗಳನ್ನು ಉಜಿರೆ ಗ್ರಾ.ಪಂ.ಪಿ.ಡಿ.ಒ. ಪ್ರಕಾಶ್ ಶೆಟ್ಟಿ ನೊಚ್ಚ ಅನಾವರಣಗೊಳಿಸಿದರು.
ಪರಿಷದ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್, ಕಾರ್ಯದರ್ಶಿ ಶೈಲೇಶ್, ಸಂಚಾಲಕ ಸುಂದರ ಶೆಟ್ಟಿ, ತಾಲೂಕು ಕಾರ್ಯದರ್ಶಿ ಸುಭಾಷಿಣಿ, ಕೋಶಾಧಿಕಾರಿ ಕೇಶವ ಭಟ್ ಅತ್ತಾಜೆ, ರಾಮಕೃಷ್ಣ ಭಟ್ ಬೆಳಾಲು, ಕಸಾಪ ತಾಲೂಕಾಧ್ಯಕ್ಷ ಯದುಪತಿ ಗೌಡ, ರೆಸಾರ್ಟ್ ಮಾಲಕ, ವಕೀಲ ಮುರಲೀ ಬಲಿಪ, ಉಪನ್ಯಾಸಕ ರವಿ ಮಂಡ್ಯ ಉಪಸ್ಥಿತರಿದ್ದರು. ಆರಂಭದಲ್ಲಿ ಭಾರತ ಮಾತೆ ಹಾಗೂ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಿಕ್ಷಕಿ ಮೇಧಾ ಆಶಯ ಗೀತೆ ಹಾಡಿದರು.
ಪರಿಷದ್‌ನ ಮಕ್ಕಳ ಪ್ರಕಾರ ಮತ್ತು ವಿದ್ಯಾರ್ಥಿ ಪ್ರಕಾರದ ಸದಸ್ಯರಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.
ಸಮಿತಿ ಅಧ್ಯಕ್ಷ ಪ್ರೊ.ಗಣಪತಿ ಕುಳಮರ್ವ ಸ್ವಾಗತಿಸಿದರು. ರಾಮಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.