

ಉಜಿರೆ: ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕಾಶಿಬೆಟ್ಟು ಪ್ರಗತಿನಗರದ ಸುಂದರ ಪ್ರಶಾಂತ ಪರಿಸರದಲ್ಲಿ ಮುಂದಿನ ಶೈಕ್ಷಣಿಕ ವರ್ಷಾರಂಭದಲ್ಲಿ ಪ್ರಾರಂಭಗೊಳ್ಳಲಿರುವ ನೂತನ ಅಭ್ಯಾಸ್ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಭೂಮಿಪೂಜೆ ಹಾಗು ಶಿಲಾನ್ಯಾಸ ಕಾರ್ಯಕ್ರಮವು ಡಿ. 6 ರಂದು ಬೆಳಿಗ್ಗೆ ನಡೆಯಿತು.
ವೇದಮೂರ್ತಿಗಳಾದ ಗುರುಪ್ರಸಾದ್, ಪ್ರಕಾಶ್ ಆಚಾರ್ ಪೂಂಜ, ಸುಬ್ರಹ್ಮಣ್ಯ ಡೆಂಜೋಲಿ ಅವರಿಂದ ವಾಸ್ತುಪೂಜೆ, ಭೂವರಾಹ ಹೋಮ ಹಾಗು ಪೂಜೆಯ ಧಾರ್ಮಿಕ ವಿಧಿಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಶಿಲಾನ್ಯಾಸ ನೆರವೇರಿಸಿ ಶುಭ ಕೋರಿದರು.
ಶಿಲ್ಪಾ ಮತ್ತು ಕಾರ್ತಿಕ್ ಬೈಪಾಡಿತ್ತಾಯ ಧಾರ್ಮಿಕ ಕಾರ್ಯಕ್ರಮದ ಸಂಕಲ್ಪ ನೆರವೇರಿಸಿ ಮುಂದಿನ ಮಾರ್ಚ್/ಏಪ್ರಿಲ್ ವೇಳೆಗೆ ಕಟ್ಟಡ ನಿರ್ಮಾಣಗೊಂಡು ಶೈಕ್ಷಣಿಕ ವರ್ಷಾರಂಭದಲ್ಲಿ ಪದವಿ ಪೂರ್ವ ತರಗತಿಯ ಸಾಯನ್ಸ್ ಮತ್ತು ಕಾಮರ್ಸ್ ವಿಭಾಗಗಳು ಪ್ರಾರಂಭ್ಗೊಳ್ಳಲಿವೆ. ಪಿ. ಸಿ. ಎಂ. ಸಿ, ಸಿ. ಇ. ಟಿ. ನೀಟ್, ಜೆ. ಇ. ಇ ಮತ್ತು ಎನ್. ಡಿ. ಎ ಕೋಚಿಂಗ್ ತರಗತಿಗಳು, ಸಿ. ಎ ಫೌಂಡೇಶನ್, ಬ್ಯಾಂಕಿಂಗ್ ಕೋಚಿಂಗ್ ತರಗತಿಗಳು ಆರಂಭಗೊಳ್ಳಲಿವೆ.
ಮುಖ್ಯ ಕಟ್ಟಡ ಹಾಗು ಹಾಸ್ಟೆಲ್ ಸೌಲಭ್ಯವನ್ನು ಹೊಂದಲಿದೆ ಎಂದು ನಿಯೋಜಿತ ಕಾಲೇಜಿನ ಪ್ರಾಂಶುಪಾಲ ಕಾರ್ತಿಕ್ ಬೈಪಾಡಿತ್ತಾಯ ಹೇಳಿದ್ದಾರೆ. ಉಪಪ್ರಾಂಶುಪಾಲ ಚಂದ್ರಶೇಖರ ಗೌಡ, ಆಡಳಿತಾಧಿಕಾರಿ ಪ್ರಮೋದ್, ಗುತ್ತಿಗೆದಾರ ದೇವಿಪ್ರಸಾದ್ ಶೆಟ್ಟಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ದಿನೇಶ್ ಸರಳಾಯ, ನಿವೃತ್ತ ಉಪನ್ಯಾಸಕರಾದ ಗಣಪಯ್ಯ, ಶಿವರಾವ್, ನ್ಯಾಯವಾದಿ ಶಶಿಕಿರಣ್ ಜೈನ್, ಶ್ರೀನಿಧಿ, ನಿವೃತ್ತ ಪ್ರಾಂಶುಪಾಲ ನಾರಾಯಣ ಬೈಪಾಡಿತ್ತಾಯ, ಜನಾರ್ದನ ಪಡ್ಡಿಲ್ಲಾಯ, ಮೊದಲಾದವರು ಉಪಸ್ಥಿತರಿದ್ದರು.
ಗುತ್ತಿಗೆದಾರ ಚಂದ್ರಶೇಖರ ಗೌಡ ಅವರಿಗೆ ಮುಹೂರ್ತ ವೀಳ್ಯ ನೀಡಲಾಯಿತು.