ಬೆಳ್ತಂಗಡಿ: ತೆಕ್ಕಾರು ಗ್ರಾಮದ ಗೋದಾಮುಗುಡ್ಡೆ – ಗೋವಿಂದರಗುಳಿ – ಸರಳಿಕಟ್ಟೆ ರಸ್ತೆ ಮತ್ತು ಬಾಜಾರದಿಂದ ಜೋಡುಕಟ್ಟೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ರಸ್ತೆ ದುರಸ್ಥಿ ಆಗ್ರಹಿಸಿ ಎಸ್. ಡಿ. ಪಿ. ಐ ತೆಕ್ಕಾರು ಗ್ರಾಮ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಪ್ರದೇಶದ ರಸ್ತೆಗಳು ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಸಂಚಾರಕ್ಕೆ ಯೋಗ್ಯವಿಲ್ಲದ ರಸ್ತೆಯಂತಾಗಿದ್ದು, ಪದೇ ಪದೇ ಸುರಿಯುತ್ತಿರುವ ಮಳೆಯಿಂದ ಹೊಂಡಗಳು ನೀರಿನಿಂದ ತುಂಬಿದ್ದು ರಸ್ತೆಯ ಇಕ್ಕೆಗಳಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ಪಾದಚಾರಿಗಳು ಸಂಚಾರಕ್ಕೆ ತುಂಬಾ ತೊಂದರೆಗಳನ್ನು ಅನುಭವಿಸುವಂತಾಗಿದೆ.
ಸ್ಥಳೀಯರು ರಸ್ತೆ ದುರಸ್ಥಿಗೆ ಆಗ್ರಹಿಸಿ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಗಳು ಆಗಿಲ್ಲ. ಸ್ಥಳೀಯ ಶಾಸಕರಂತು ಈ ಭಾಗದಲ್ಲಿ ಯಾವುದೇ ಕಾಮಗಾರಿಗಳಿಗೆ ಅನುದಾನಗಳನ್ನು ಒದಗಿಸುತ್ತಿಲ್ಲ ಎಂಬುವುದು ಗ್ರಾಮಸ್ಥರ ಅಸಮಾಧಾನವಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸರಳಿಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟಣೆಯನ್ನು ಮಾಡಲಾಯಿತು.
ಪ್ರತಿಭಟನೆ ಉದ್ದೇಶಿಸಿ ಪ್ರಸ್ತಾವಿಕ ಮಾತುಗಳನ್ನಾಡಿದ ಎಸ್. ಡಿ. ಪಿ. ಐ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್ ಜನ ಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಒಂದು ತಿಂಗಳೊಳಗೆ ಕೆಲಸ ಆರಂಭವಾಗದಿದ್ದರೆ ತಾಲೂಕಿನ ಎಲ್ಲಾ ಕಾರ್ಯಕರ್ತರನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದೆಂದು ಎಚ್ಚರಿಸಿದರು.
ತೆಕ್ಕಾರು ಗ್ರಾಮ ಪಂಚಾಯತ್ ಗೆ ತೆರಳಿ ಪಂಚಾಯತ್ ಅಧಿಕಾರಿಗಳ ಮೂಲಕ ಬೆಳ್ತಂಗಡಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್. ಡಿ. ಪಿ. ಐ ಕಣಿಯೂರು ಬ್ಲಾಕ್ ಸಮಿತಿ ಅಧ್ಯಕ್ಷ ಮುಸ್ತಾಫ ಬಂಗೇರಕಟ್ಟೆ, ಉಪಾಧ್ಯಕ್ಷ ನಝೀರ್ ಬಜಾರ, ಕೋಶಾಧಿಕಾರಿ ಫೈಝಲ್ ಮೂರುಗೋಳಿ, ಬೂತಿನ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ಸಮ್ಮದ್ ಕಾರ್ಯಕ್ರಮವನ್ನು ನಿರೂಪಿಸಿದರು.