ಬೆಳ್ತಂಗಡಿ: ಲಾಯಿಲ ಗ್ರಾಮದಲ್ಲಿ ವಾಸ್ತವ್ಯದ ಕಟ್ಟಡ ನಿರ್ಮಾಣದ ಪರವಾನಿಗೆ ಪಡೆದು ಕಾನೂನುಗಳನ್ನೂ ಮೀರಿ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸಿ ವಾಣಿಜ್ಯ ಉದ್ದೇಶದ ಕಟ್ಟಡದ ಕಾಮಗಾರಿಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸುವಂತೆ ಲಾಯಿಲ ಗ್ರಾಮ ಪಂಚಾಯತ್ ಆದೇಶ ನೀಡಿದೆ.
ಲಾಯಿಲ ಗ್ರಾಮದ ರಾಘವೇಂದ್ರ ಮಠದ ಸಮೀಪ ಸ. ನಂ 232/1p4 ನಲ್ಲಿ ರಫೀಕ್ ನಿರ್ಮಾಣ ಮಾಡುತ್ತಿದ್ದ ಕಟ್ಟಡದ ಕಾಮಗಾರಿಗೆ ಸಮರ್ಪಕವಾದ ಅನುಮತಿಗಳನ್ನು ಪಡೆಯದೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಗ್ರಾಮ ಪಂಚಾಯತ್ ಆಡಳಿತವು ಕಟ್ಟಡ ನಿರ್ಮಾಣಕ್ಕೆ ವಿಧಿಸಿದ್ದ ಶರತ್ತುಗಳನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ಲಾಯಿಲ ನಿವಾಸಿ ಅನ್ಸಾರ್ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬಳಿಕ ಕಾಮಗಾರಿ ಸ್ಥಗಿತಗೊಳಿಸಲು ಗ್ರಾ.ಪಂ ಆದೇಶ ನೀಡಿದೆ.
ಕಟ್ಟಡದ ಕಾಮಗಾರಿಗೆ ಅನುಮತಿ ಪಡೆಯುವ ವೇಳೆ ಕಾರ್ಮಿಕ ಇಲಾಖೆಗೆ ಹಾಗೂ ಗ್ರಾಮ ಪಂಚಾಯತಿಗೆ ಕಟ್ಟಡದ ಸರಿಯಾದ ವಿಸ್ತೀರ್ಣವನ್ನು ತೋರಿಸದೆ ತೆರಿಗೆಯಲ್ಲಿ ವಂಚನೆ ಮಾಡಿರುವುದು ಪರಿಶೀಲನೆಯ ವೇಳೆ ಕಂಡುಬಂದಿದೆ ಎನ್ನಲಾಗಿದೆ. ಮನೆಗೆಂದು ಜಮೀನು ಕನ್ವರ್ಷನ್ ಮಾಡಿ ಮನೆ ನಿರ್ಮಾಣಕ್ಕೆ ಗ್ರಾ. ಪಂ ನಿಂದ ಪರವಾನಿಗೆ ಪಡೆದು ಇದೀಗ ಅಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡವನ್ನು ನಿರ್ಮಿಸುತ್ತಿರುವುದಾಗಿ ಗ್ರಾಮ ಪಂಚಾಯತ್ ಹಾಗೂ ಕಾರ್ಮಿಕ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಸ್ಪಷ್ಟಗೊಂಡಿರುವುದಾಗಿ ಇಲಾಖಾಧಿಕಾರಿಗಳು ವರದಿ ನೀಡಿದ್ದಾರೆ.
ಕಟ್ಟಡದ ಮೂರನೇ ಅಂತಸ್ತಿಗೆ ಗ್ರಾ. ಪಂ ನಿಂದ ಅನುಮತಿ ಪಡೆಯಲಾಗಿಲ್ಲ. 11 ಮೀಟರ್ ಗಿಂತ ಹೆಚ್ಚು ಎತ್ತರದ ಕಟ್ಟಡಕ್ಕೆ ಅಗ್ನಿ ಶಾಮಕ ಇಲಾಖೆಯ ಪರವಾನಿಗೆ ಪಡೆಯಬೇಕಾಗಿದೆ ಆದರೆ ಅದನ್ನು ಪಡೆಯಲಾಗಿಲ್ಲ,ಸರಕಾರಕ್ಕೆ ಪಾವತಿಸಬೇಕಾದ ತೆರಿಗೆಗಳನ್ನು ಪಾವತಿ ಮಾಡಿಲ್ಲ, ವಾಣಿಜ್ಯ ಉದ್ದೇಶಕ್ಕಾಗಿನ ಭೂ ಪರಿವರ್ತನೆ ಮಾಡಲಾಗಿಲ್ಲ, ಗ್ರಾ.ಪಂ ನೀಡಿದ್ದ ಶರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಸ್ಥಳ ತನಿಖೆಯ ವೇಳೆ ಕಂಡು ಬಂದಿರುವ ಹಿನ್ನಲೆಯಲ್ಲಿ ಈ ಬಗ್ಗೆ ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೆ ಕಟ್ಟಡದ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಗ್ರಾಮ ಪಂಚಾಯತ್ ಆಡಳಿತ ಆದೇಶ ನೀಡಿದೆ.