ಬೆಳ್ತಂಗಡಿ: ನ.19ರಂದು ಬೆಳಿಗ್ಗೆ ನಿಧನರಾದ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಭುವನೇಂದ್ರ ಪುದುವೆಟ್ಟು(42ವ)ರವರಿಗೆ ಮಧ್ಯಾಹ್ನ ಬೆಳ್ತಂಗಡಿ ಬಸ್‌ನಿಲ್ದಾಣದ ನಾರಾಯಣಗುರು ವಾಣಿಜ್ಯ ಸಂಕೀರ್ಣದಲ್ಲಿರುವ ಸುದ್ದಿ ಬಿಡುಗಡೆ ಪತ್ರಿಕಾ ಕಾರ್ಯಾಲಯದ ಬಳಿ ಅಂತಿಮ ನಮನ ಸಲ್ಲಿಸಲಾಯಿತು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಆರ್‌ಎಸ್‌ಎಸ್ ಮುಂದಾಳು ಪ್ರಸಾದ್ ಕುಮಾರ್ ಬೆಳ್ತಂಗಡಿ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ, ಸುದ್ದಿ ಬಿಡುಗಡೆ ಸಿಇಒ ಸಿಂಚನಾ ಊರುಬೈಲು, ವ್ಯವಸ್ಥಾಪಕ ಮಂಜುನಾಥ ರೈ, ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ, ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ, ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಚಾನೆಲ್‌ನ ಸಿಬ್ಬಂದಿಗಳು, ನೋಟರಿ ವಕೀಲ ಭಗೀರಥ ಜಿ.,ವಿಜಯವಾಣಿ ಪತ್ರಿಕೆಯ ಮಂಗಳೂರು ಸ್ಥಾನೀಯ ಸಂಪಾದಕ ಸುರೇಂದ್ರ ವಾಗ್ಲೆ, ಬೆಳ್ತಂಗಡಿಯ ಪತ್ರಕರ್ತರಾದ ಚೈತ್ರೇಶ್ ಇಳಂತಿಲ, ಶಿಬಿ ಧರ್ಮಸ್ಥಳ, ಪ್ರಸಾದ್ ಏಣಿಂಜೆ, ಮನೋಹರ ಬಳಂಜ, ಸಂತೋಷ್ ಕೋಟ್ಯಾನ್ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ಸಂಜೆ ಪುದುವೆಟ್ಟು ಮನೆಯಲ್ಲಿ ಅಂತಿಮ ವಿಧಿವಿಧಾನ: ಪುದುವೆಟ್ಟು ಗ್ರಾಮದ ಕಾಯರಂಡದ ನಾರಾಯಣ ಪೂಜಾರಿ ಮತ್ತು ಮೋಹಿನಿ ದಂಪತಿಯ ಪುತ್ರರಾದ ಭುವನೇಂದ್ರ ಅವರಿಗೆ ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತಪಾಸಣೆ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದರಿಂದ ಅಕ್ಯುಟ್ ಪ್ರಾಂಕಿಯಾಸಿಸ್ ಇರುವುದು ಗೊತ್ತಾಗಿತ್ತು. ತಕ್ಷಣ ಅವರನ್ನು ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನ.19ರಂದು ಕೊನೆಯುಸಿರೆಳೆದಿದ್ದಾರೆ.
ಕರಾವಳಿ ಅಲೆ, ವೆಬ್‌ದುನಿಯಾ, ಕಸ್ತೂರಿ ಚಾನೆಲ್, ವಿಜಯವಾಣಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಭುವನೇಂದ್ರ ಪುದುವೆಟ್ಟು ಅವರು ಕೆಲವು ಸಮಯಗಳಿಂದ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿದ್ದರು. 2024ರ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕದ ಕಾರ್ಯ ನಿರ್ವಾಹಕ ಸಂಪಾದಕರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಮೃತರು ತಂದೆ ನಾರಾಯಣ ಪೂಜಾರಿ, ತಾಯಿ ಮೋಹಿನಿ, ಪತ್ನಿ ಸುಜಾತ, ಈರ್ವರು ಪುಟ್ಟ ಮಕ್ಕಳು, ಸಹೋದರ ಯತೀಂದ್ರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಭುವನೇಂದ್ರ ಅವರ ಪಾರ್ಥೀವ ಶರೀರವನ್ನು ಮಧ್ಯಾಹ್ನ ಮಂಗಳೂರು ಆಸ್ಪತ್ರೆಯಿಂದ ತರಲಾಗಿದ್ದು ಪುದುವೆಟ್ಟು ಕಾಯರಂಡ ಮನೆಯಲ್ಲಿ ಸಂಜೆ ಅಂತಿಮ ವಿಧಿವಿಧಾನ ನಡೆಯಲಿದೆ.